

Piyush Goyal : ರಷ್ಯಾದ ಬಳಿ ತೈಲ ಖರೀದಿಯನ್ನು ಮುಂದುವರೆಸಿದ್ದಕ್ಕಾಗಿ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ 25 ರಷ್ಟು ಸುಂಕ ವಿಧಿಸುವ ಅಮೆರಿಕದ ನಿರ್ಧಾರ ಸೇರಿದಂತೆ ಜಾಗತಿಕ ವ್ಯಾಪಾರ ಉದ್ವಿಗ್ನತೆಗಳು ಹೆಚ್ಚುತ್ತಿರುವ ನಡುವೆಯೇ ಬಿಸಿನೆಸ್ ಟುಡೇ ಇಂಡಿಯಾ @ 100 ಶೃಂಗಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಭಾರತ ಯಾರಿಗೂ ತಲೆಬಾಗುವುದಿಲ್ಲ ಎಂದು ಖಡಕ್ ಪ್ರತಿಕ್ರಿಯೆ ನೀಡಿದರು.
ಜಾಗತಿಕ ವ್ಯಾಪಾರ ಸಮುದಾಯಗಳೊಂದಿಗೆ ಭಾರತದ ಭವಿಷ್ಯದ ಸಂಬಂಧದ ಬಗ್ಗೆ ಗೋಯಲ್ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅವರು, ಇಂದು ದೇಶವು ಹೆಚ್ಚು ಬಲಿಷ್ಠ ಮತ್ತು ಆತ್ಮವಿಶ್ವಾಸದಿಂದ ಕೂಡಿದೆ. ವಾರ್ಷಿಕವಾಗಿ ಶೇಕಡಾ ಆರೂವರೆ ರಷ್ಟು ಬೆಳೆಯುತ್ತಿದೆ ಮತ್ತು ಮತ್ತಷ್ಟು ವೇಗವನ್ನು ಪಡೆಯಲು ಭಾರತ ಸಿದ್ಧವಾಗಿದೆ ಎಂದರು.
ಜಗತ್ತು ಜಾಗತೀಕರಣವನ್ನು ತಪ್ಪಿಸುತ್ತಿದೆ ಎಂಬ ಕಲ್ಪನೆಯೇ ತಪ್ಪು ಎಂದ ಗೋಯಲ್, ಎಲ್ಲ ರಾಷ್ಟ್ರಗಳು ತಮ್ಮ ವ್ಯಾಪಾರ ಮಾರ್ಗಗಳು ಮತ್ತು ಪಾಲುದಾರರನ್ನು ಪುನಾರಚನೆ ಮಾಡುತ್ತಿವೆ ಎಂದು ವಾದಿಸಿದರು. ಭಾರತ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ರಫ್ತು ಮಾಡುತ್ತದೆ ಎಂಬ ವಿಶ್ವಾಸ ನನ್ನಲ್ಲಿ ಸಾಕಷ್ಟಿದೆ. ಸುಂಕ ಸಮರದ ಬಳಿಕ ಎದುರಾಗುವ ವ್ಯಾಪಾರ ಅಡೆತಡೆಗಳನ್ನು ನಿವಾರಿಸಲು ಈಗಾಗಲೇ ಕ್ರಮಗಳು ಜಾರಿಯಲ್ಲಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಭವಿಷ್ಯದ ಮುಕ್ತ ವ್ಯಾಪಾರ ಒಪ್ಪಂದಗಳ ಕುರಿತು ಮಾತನಾಡಿದ ಗೋಯಲ್, ಭಾರತದ ವ್ಯವಹಾರ ವಿಧಾನವು ಇಂದು ಸುಂಕ ರಿಯಾಯಿತಿ ಪಡೆಯುವುದನ್ನು ಮೀರಿ ವಿಕಸನಗೊಂಡಿದೆ ಎಂದರು. ಅಲ್ಲದೆ, ನಾಲ್ಕು ರಾಷ್ಟ್ರಗಳ EFTA ಬಣದೊಂದಿಗಿನ ಮಾತುಕತೆಗಳನ್ನು ನೆನಪಿಸಿಕೊಂಡ ಅವರು, ನಮ್ಮದು 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಮತ್ತು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ. ನಮ್ಮಲ್ಲಿ ಯುವಜನರ ಶಕ್ತಿ ಇದೆ, ಆದರೆ ನೀವು ವಯಸ್ಸಾದ ಜನಸಂಖ್ಯೆಯನ್ನು ಹೊಂದಿದ್ದೀರಿ ಎಂದು ಅಮೆರಿಕಕ್ಕೆ ಖಡಕ್ ತಿರುಗೇಟು ನೀಡಿದರು.
EFTA ರಾಷ್ಟ್ರಗಳು ಭಾರತದಲ್ಲಿ 100 ಶತಕೋಟಿ ಅಮೆರಿಕ ಡಾಲರ್ ಹೂಡಿಕೆ ಮಾಡಲು ಒಪ್ಪಿಕೊಂಡಿವೆ. ಇದರಿಂದಾಗಿ 10 ಲಕ್ಷ ನೇರ ಉದ್ಯೋಗಗಳು ಮತ್ತು ಒಟ್ಟು 50 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದರು. ಅಲ್ಲದೆ, ಅಕ್ಟೋಬರ್ 1 ರಿಂದ, EFTA ಒಪ್ಪಂದವು ಜಾರಿಗೆ ಬರಲಿದ್ದು, ಪ್ರಯೋಜನಗಳು ಗೋಚರಿಸಲಿವೆ ಎಂದು ಗೋಯಲ್ ತಿಳಿಸಿದರು.
ಭಾರತದ ಆರ್ಥಿಕತೆ "ಸತ್ತಿದೆ" ಎನ್ನುವ ಮೂಲಕ ಡೊನಾಲ್ಡ್ ಟ್ರಂಪ್ ಹೇಳಿಕೆ ಬೆಂಬಲಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ಗೋಯಲ್ ಟೀಕಿಸಿದರು. ರಾಷ್ಟ್ರವು ಕಾಂಗ್ರೆಸ್ ಕುಡಿಯನ್ನು ಎಂದಿಗೂ ಮರೆಯುವುದಿಲ್ಲ ಎಂದರು. ವಿಪಕ್ಷ ನಾಯಕನ ಹೇಳಿಕೆ ನಾಚಿಕೆಗೇಡಿನ ಸಂಗತಿ. ಅದಕ್ಕಾಗಿ ನಾನು ಅವರನ್ನು ಖಂಡಿಸುತ್ತೇನೆ. ಇಲ್ಲಿ ಸ್ಪಷ್ಟವಾಗಿ ಹೇಳಬೇಕೆಂದರೆ, ಭಾರತವು ಜಗತ್ತಿಗೆ ಪ್ರದರ್ಶಿಸುತ್ತಿರುವ ಮಹಾನ್ ಕಥೆಯ ಬಗ್ಗೆ ಇಂತಹ ಅವಮಾನಕರ ಟೀಕೆಗಳನ್ನು ಮಾಡಿದ ರಾಹುಲ್ ಗಾಂಧಿಯವರನ್ನು ರಾಷ್ಟ್ರ ಎಂದಿಗೂ ಕ್ಷಮಿಸುವುದಿಲ್ಲ ಎಂದರು.
ಇದೇ ವೇಳೆ ಭಾರತದ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಎತ್ತಿ ತೋರಿಸಿದ ಗೋಯಲ್, ದೇಶದ ಕರೆನ್ಸಿ, ವಿದೇಶಿ ವಿನಿಮಯ ಮೀಸಲು, ಷೇರು ಮಾರುಕಟ್ಟೆಗಳು ಮತ್ತು ಮೂಲಭೂತ ಅಂಶಗಳು ಬಲಿಷ್ಠವಾಗಿವೆ. ಇತರ ಉದಯೋನ್ಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಹಣದುಬ್ಬರವು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ ಎಂದರು. ಅಲ್ಲದೆ, ಭಾರತ ಇಂದು ಬಲಿಷ್ಠವಾಗಿದೆ, ಹೆಚ್ಚು ಗೌರವಾನ್ವಿತವಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರಂತಹ ಎತ್ತರದ ನಾಯಕರ ನೇತೃತ್ವದಲ್ಲಿ ಭಾರತವಿದೆ ಎಂದು ಗೋಯಲ್ ಹೇಳಿದರು. (ಏಜೆನ್ಸೀಸ್)