

Student Death : ಕೇವಲ 14 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗುತ್ತಾನೆ ಅಂದರೆ ನಿಜಕ್ಕೂ ನಂಬಲು ಅಸಾಧ್ಯ. ಬೆಂಗಳೂರಿನಲ್ಲಿ ನಡೆದ ಈ ಒಂದು ಪ್ರಕರಣ ಇಡೀ ರಾಜ್ಯವನ್ನು ಒಂದು ಕ್ಷಣ ಆಘಾತಕ್ಕೆ ದೂಡಿತು. ಅಲ್ಲದೇ, ಎಷ್ಟೋ ಮಂದಿ ಕಳವಳ ಕೂಡ ವ್ಯಕ್ತಪಡಿಸಿದರು. ಅಷ್ಟಕ್ಕೂ ಆ ಬಾಲಕನಿಗೆ ಏನಾಗಿತ್ತು? ಅಷ್ಟು ಚಿಕ್ಕ ವಯಸ್ಸಿನಲ್ಲಿ ಆತನ ಮೇಲೆ ಪ್ರಭಾವ ಬೀರಿದ್ದೇನು? ಅಂಥದ್ದೊಂದು ದುಡಕಿನ ನಿರ್ಧಾರ ತೆಗೆದುಕೊಂಡಿದ್ದೇಕೆ? ಎಂಬ ಪ್ರಶ್ನೆಗಳು ಮೂಡಿದವು. ಅಂತಿಮವಾಗಿ ಅದೆಲ್ಲದಕ್ಕೂ ಪೊಲೀಸ್ ತನಿಖೆಯಲ್ಲಿ ಒಂದು ಉತ್ತರ ಸಿಕ್ಕಿದೆ.
ಅಂದಹಾಗೆ ಸಾವಿಗೆ ಶರಣಾದ ಬಾಲಕನ ಹೆಸರು ಗಂಧಾರ್. ಈತ 7ನೇ ತರಗತಿ ವಿದ್ಯಾರ್ಥಿ. ಮೂರು ದಿನಗಳ ಹಿಂದಷ್ಟೇ ಚೆನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ತಮ್ಮ ಮನೆಯಲ್ಲಿ ಸಾವಿಗೆ ಶರಣಾದ. ಗಿಟಾರ್ ತಂತಿಯನ್ನು ಕಿತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಗಂಧಾರ್ನ ತಂದೆ ಮ್ಯೂಸಿಕ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ತಾಯಿ ಸವಿತಾ ಖ್ಯಾತ ಜಾನಪದ ಗಾಯಕಿ. ಸವಿತಾ ಅವರು ಕಳೆದ ಶುಕ್ರವಾರ ಜಾನಪದ ಕಾರ್ಯಕ್ರಮದ ಹಿನ್ನಲೆ ಆಸ್ಟ್ರೇಲಿಯಾಗೆ ಹೋಗಿದ್ದರು. ತಾಯಿ ವಿದೇಶದಲ್ಲಿರುವಾಗಲೇ ಇಂಥದ್ದೊಂದು ದುರ್ಘಟನೆ ಘಟಿಸಿದೆ.
ಅಂದಹಾಗೆ, ಗಂಧಾರ್ ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಇಡೀ ಕುಟುಂಬ ಅನ್ಯೋನ್ಯವಾಗಿ ಜೀವನ ನಡೆಸುತ್ತಿದೆ. ಗಂಧಾರ್ ಕೂಡ ಅಮ್ಮ, ಅಪ್ಪ ಹಾಗೂ ಅಣ್ಣ ಸೇರಿ ಎಲ್ಲರ ಜೊತೆಗೆ ನಗುತ್ತಾ, ಚೆನ್ನಾಗಿಯೇ ಇದ್ದ. ಸ್ನೇಹಿತರ ಜತೆಗೂ ಲವಲವಿಕೆಯಿಂದಲೇ ಇದ್ದ. ಅಕ್ಕಪಕ್ಕದವರ ಜೊತೆಗೂ ಚೆನ್ನಾಗಿಯೇ ಮಾತನಾಡುತ್ತಿದ್ದ. ಆತನಲ್ಲಿ ಯಾವುದೇ ಅನುಮಾನಸ್ಪಾದ ಲಕ್ಷಣಗಳು ಕಾಣಿಸಿರಲಿಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ದುಃಖಕರ ಸಂಗತಿ. ಅಷ್ಟಕ್ಕೂ ಗಂಧಾರ್ ಸಾವಿಗೆ ಕಾರಣ ಏನೆಂದು ಹುಡುಕುವಾಗ ಪೊಲೀಸರಿಗೆ ಗಂಧಾರ್ ರೂಮಿನಲ್ಲಿ ಪತ್ತೆಯಾಗಿರುವ ಚಿತ್ರ ಪ್ರಕರಣಕ್ಕೆ ಮತ್ತೊಂದು ಆಯಾಮ ನೀಡಿದೆ.
ಗಂಧಾರ್, ಘಟನೆ ನಡೆದ ರಾತ್ರಿ ಎಲ್ಲರ ಜೊತೆಗೆ ಊಟ ಮಾಡಿ ತನ್ನ ಪ್ರೀತಿಯ ನಾಯಿ ರಾಕಿ ಜೊತೆ ಗಂಧಾರ್ ಮಲಗಿದ್ದ. ಆದರೆ, ಬೆಳಗಿನ ವೇಳೆ ತನ್ನ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಹಾಗಾದರೆ, ಆ ರಾತ್ರಿ ಗಂಧಾರ್ ತಲೆಯಲ್ಲಿ ಮೂಡಿದ ಆಲೋಚನೆಗಳೇನು? ಆತ್ಮಹತ್ಯೆಗೆ ಪ್ರೇರೆಪಿಸಿದ್ದು ಏನು? ಈ ಪ್ರಶ್ನೆಗೆ ಆತನ ಕೋಣೆಯಲ್ಲಿ ಪತ್ತೆಯಾದ ಚಿತ್ರ ಉತ್ತರ ನೀಡಿದೆ.
ಅಪ್ಪ-ಅಮ್ಮ ನೀವು ನನ್ನನ್ನು 14 ವರ್ಷ ಚೆನ್ನಾಗೆ ಬೆಳೆಸಿದ್ದೀರಿ, ನಾನು ನಿಮ್ಮ ಜೊತೆ ತುಂಬಾ ಖುಷಿಯಾಗಿದ್ದೆ. ಆದರೆ, ನಾನು ಹೋಗುವ ಸಮಯ ಇಂದು ಬಂದಿದೆ. ನೀವು ನನ್ನ ಪತ್ರವನ್ನು ಓದುವ ಹೊತ್ತಿಗೆ ನಾನು ಸ್ವರ್ಗದಲ್ಲಿ ಇರುತ್ತೇನೆ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾನೆ. ಈ ಡೆತ್ ನೋಟ್ ನೋಡಿದರೆ ಎಂಥವರಿಗೂ ಅಚ್ಚರಿ ಮೂಡುವುದು ಖಚಿತ. ಏಕೆಂದರೆ, ಡೆತ್ನೋಟ್ನಲ್ಲೂ ಗಂಧಾರ್ ಯಾರ ಬಗ್ಗೆಯೂ ಒಂದು ಆರೋಪವನ್ನೂ ಮಾಡಿಲ್ಲ. ಖುಷಿಯಿಂದಲೇ ತನ್ನ ಮಾತುಗಳನ್ನು ಬರವಣಿಗೆ ರೂಪದಲ್ಲಿ ತಿಳಿಸಿದ್ದಾನೆ. ಬರವಣಿಯಲ್ಲಿ ಎಲ್ಲವೂ ನೋವು ವ್ಯಕ್ತವಾಗಿಲ್ಲ. ಹೀಗಿರುವಾಗ ಸಾವಿಗೆ ಕಾರಣ ಏನಿರಬಹುದು? ಈ ಪ್ರಶ್ನೆಗೆ ಪೊಲೀಸ್ ತನಿಖೆಯಲ್ಲಿ ಆಘಾತಕಾರಿ ಸಂಗತಿ ಬಯಲಾಗಿದೆ.
ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದಾಗ ಸಾಕಷ್ಟು ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. ಬಾಲಕ ಗಂಧಾರ್, ಜಪಾನೀಸ್ ಭಾಷೆಯಲ್ಲಿ ಬಿಡುಗಡೆಯಾಗಿ ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿದ್ದ ಡೆತ್ ನೋಟ್ ವೆಬ್ ಸರಣಿಯನ್ನು ವೀಕ್ಷಣೆ ಮಾಡುತ್ತಿದ್ದ. ಆ ಸರಣಿಯ ಪ್ರತಿಯೊಂದು ಎಪಿಸೋಡ್ ವೀಕ್ಷಣೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆ ಸರಣಿಯಲ್ಲಿ ಬರುವ ಒಂದು ಪಾತ್ರವನ್ನು ಕೂಡ ತನ್ನ ರೂಮಿನ ಕೋಣೆಯಲ್ಲಿ ಗಂಧಾರ್ ಬಿಡಿಸಿರುವುದು ಪೊಲೀಸರಿಗೆ ಗೊತ್ತಾಗಿದೆ.
ಇದರ ಬೆನ್ನಲ್ಲೇ ಆ ವೆಬ್ ಸರಣಿಯ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಆ ಸರಣಿಯಲ್ಲಿ ಒಂದು ಪ್ರಮುಖ ಪಾತ್ರವಿದೆ. ಆ ಪಾತ್ರ ಹೇಳಿದಂತೆಯೇ ನಾಯಕ ನಡೆದುಕೊಳ್ಳುತ್ತಾನೆ. ಮಾಯಬುಕ್ನಲ್ಲಿ ಒಬ್ಬರ ಹೆಸರು ಬರೆದು ಅವರು ಹೇಗೆ ಸಾಯಬೇಕು ಎಂದು ಊಹೆ ಮಾಡಿಕೊಂಡರೆ ಆ ವ್ಯಕ್ತಿ ಅದೇ ರೀತಿ ಸಾಯುತ್ತಾನೆ. ಈ ಡೆತ್ನೋಟ್ ವೆಬ್ ಸರಣಿಯನ್ನು ನೋಡಿ, ಅದರಿಂದ ಪ್ರಚೋದನೆಗೆ ಒಳಗಾಗಿ ಗಂಧಾರ್ ಸಾವಿಗೆ ಶರಣಾಗಿರಬಹುದೆಂಬ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ. ಅಲ್ಲದೆ, ಗಂಧಾರ್ಗೆ ಆಧ್ಯಾತ್ಮದ ಕಡೆ ಒಲವಿತ್ತಾ ಎಂಬ ಅನುಮಾನವೂ ಇದೆ. ಇದಕ್ಕೆಲ್ಲ ಉತ್ತರ ಪಡೆಯಲು ತನಿಖಾಧಿಕಾರಿಗಳು ಗಂಧಾರ್ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಲಿದೆ.