

Actor Huma Qureshi : ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆ, ತೀವ್ರ ಸ್ವರೂಪಕ್ಕೆ ತಿರುಗಿ, ಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿ ಆಸಿಫ್ ಖುರೇಷಿ ಬರ್ಬರವಾಗಿ ಹತ್ಯೆಯಾಗಿರುವ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್ ಪ್ರದೇಶದ ಜಂಗ್ಪುರ ಭೋಗಲ್ ಲೇನ್ನಲ್ಲಿ ಗುರುವಾರ (ಆಗಸ್ಟ್ 07) ರಾತ್ರಿ 11 ಗಂಟೆ ಸುಮಾರಿಗೆ ಈ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಮನೆಯ ಮುಂದೆ ದ್ವಿಚಕ್ರ ವಾಹನ ನಿಲ್ಲಿಸಿದ ವಿಚಾರವಾಗಿ ಆಸಿಫ್ ಅವರು ಕೆಲವು ವ್ಯಕ್ತಿಗಳ ನಡುವೆ ವಾಗ್ವಾದಕ್ಕೆ ಇಳಿದರು. ವಾಹನ ತೆಗೆಯುವಂತೆ ಆಸೀಫ್ ತಾಕೀತು ಮಾಡಿದರು. ಆದರೆ, ಆಸಿಫ್ ಮಾತನ್ನು ಆ ವ್ಯಕ್ತಿಗಳು ಕೇಳಲಿಲ್ಲ. ಇದರಿಂದ ಮಾತಿಗೆ ಮಾತು ಬೆಳೆದು, ಸ್ಥಳದಲ್ಲಿ ಜಗಳ ಭುಗಿಲೆದ್ದಿತು.
ಇದಾದ ನಂತರ ಆರೋಪಿಗಳು ಹರಿತವಾದ ಆಯುಧಗಳಿಂದ ಆಸಿಫ್ ಅವರ ಮೇಲೆ ಹಲ್ಲೆ ನಡೆಸಿದರು. ದಾಳಿಯಿಂದ ಗಂಭೀರ ಸ್ಥಿತಿಯಲ್ಲಿದ್ದ ಆಸಿಫ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಆಸಿಫ್ ಪತ್ನಿ ಸೈನಾಜ್ ಖುರೇಷಿ ಕೂಡ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಆರೋಪಿ ಈ ಹಿಂದೆಯೂ ಇದೇ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಗಂಡನೊಂದಿಗೆ ಜಗಳವಾಡಿದ್ದ. ಗುರುವಾರ, ಆಸಿಫ್ ಕೆಲಸದಿಂದ ಹಿಂತಿರುಗಿದಾಗ, ಮನೆಯ ಮುಖ್ಯ ದ್ವಾರದ ಮುಂದೆ ನೆರೆಮನೆಯವರ ದ್ವಿಚಕ್ರ ವಾಹನ ನಿಲ್ಲಿಸಿರುವುದನ್ನು ನೋಡಿ, ಅದನ್ನು ಅಲ್ಲಿಂದ ತೆಗೆಯಲು ಹೇಳಿದರು. ಆದರೆ, ವಾಹನವನ್ನು ಸ್ಥಳದಿಂದ ತೆಗೆದುಹಾಕುವ ಬದಲು, ನೆರೆಹೊರೆಯವರು ಆಸಿಫ್ ಅವರನ್ನು ನಿಂದಿಸಲು ಪ್ರಾರಂಭಿಸಿದರು. ಬಳಿಕ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದರು ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆಯ ನಂತರ ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)