

ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮೂರು ಕಾಯ್ದೆಗಳು ಕೃಷಿ ಕ್ಷೇತ್ರ ಮೇಲೆ ಧನಾತ್ಮಕ ಪರಿಣಾಮ ಬೀರಲಿದ್ದು, ಆಹಾರ ಉತ್ಪಾದನೆಯಲ್ಲಿ ಏರಿಕೆ ಕಾಣುವುದು ಮಾತ್ರವಲ್ಲ ವಿಶ್ವದಲ್ಲೇ ಭಾರತದಲ್ಲಿ ಆಹಾರ ರಫ್ತುದಾರ ರಾಷ್ಟ್ರವಾಗಲಿದೆ ಎಂದು ಬ್ಲೂಮ್ಗ್ ವರದಿ ತಿಳಿಸಿದೆ.
ಭಾರತೀಯ ಕೃಷಿಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮವಾಗಿ ಸ್ಪರ್ಧಿಸಲು ಕೃಷಿ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳಲ್ಲಿ ಖಾಸಗಿ ವಲಯದ ಹೂಡಿಕೆ ಅಗತ್ಯವಿದೆ ಎಂದು ಕೃಷಿ ಸೇವೆಗಳ ಕಂಪನಿಯ ರಾಷ್ಟ್ರೀಯ ಕಾರ್ಯನಿರ್ವಾಹಕ ಅಧಿಕಾರಿ ಸಿರಾಜ್ ಚೌಧರಿ ಹೇಳಿದ್ದಾರೆ. ಗುತ್ತಿಗೆ ಕೃಷಿಯನ್ನು ಪೋ›ತ್ಸಾಹಿಸುವ ಮೂಲಕ ಕಡಿಮೆ ಇಳುವರಿ ಮತ್ತು ಅಸಮರ್ಥ ಸಣ್ಣ ಹಿಡುವಳಿಗಳಿಂದ ಅಡ್ಡಿಯಾಗಿರುವ ಭಾರತೀಯ ಕೃಷಿಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಸ ನೀತಿಗಳು ಹೊಂದಿವೆ ಎಂದು ವಿಶ್ಲೇಷಕರು ಮತ್ತು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಕಂಪನಿಗಳು ಸುಗ್ಗಿಯ ಮೊದಲು ಅಥವಾ ಬಿತ್ತನೆಗೂ ಮೊದಲೇ ರೈತರೊಂದಿಗೆ ಬೆಳೆಗಳಿಗೆ ಬೆಲೆಗಳನ್ನು ನಿಗದಿಪಡಿಸಿ, ಸಾಲ ನೀಡಿ, ಗುಣಮಟ್ಟದ ಬೀಜಗಳನ್ನು ಒದಗಿಸುತ್ತವೆ. ಜತೆಗೆ ಯಾಂತ್ರೀಕರಣವನ್ನು ಪೋ›ತ್ಸಾಹಿಸುತ್ತವೆ. ಹೊಸ ನಿಯಮಗಳಿಂದಾಗಿ ಇತರ ರಾಜ್ಯಗಳಲ್ಲಿ ಅಥವಾ ವಿದೇಶಗಳಲ್ಲಿ ಬೆಳೆಗಳನ್ನು ಮಾರಾಟ ಮಾಡಲು ಸುಲಭವಾಗುತ್ತದೆ. ರೈತರು ಹೆಚ್ಚು ಸ್ಥಿರ ಆದಾಯ ಪಡೆಯುತ್ತಾರೆ ಮತ್ತು ರಫ್ತು ಆದಾಯ ಹೆಚ್ಚಲಿದೆ. ಖಾಸಗಿ ವಲಯದ ಭಾಗವಹಿಸುವಿಕೆ ಹೆಚ್ಚಾದಂತೆ, ಭಾರತೀಯ ಕೃಷಿ ಕ್ಷೇತ್ರದ ಪೂರೈಕೆ ಸರಪಳಿ ಮತ್ತು ಮೂಲಸೌಕರ್ಯಗಳು ಸುಧಾರಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ.
ಭಾರತದಲ್ಲಿ ಸೂಕ್ತ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿವರ್ಷದ ಆಹಾರ ಉತ್ಪಾದನೆಯಲ್ಲಿ ಶೇ. 10 ಆಹಾರ ಹಾಗೂ ಸುಮಾರು 90 ಸಾವಿರ ಕೋಟಿ ರೂ. ನಷ್ಟವಾಗುತ್ತದೆ. ಹೊಸ ಕಾಯ್ದೆಗಳ ಮೂಲಕ ಖಾಸಗಿ ಹೂಡಿಕೆದಾರರಿಂದ ಕೋಲ್ಡ್ ಸ್ಟೋರೇಜ್ ಕೇಂದ್ರಗಳು ಹೆಚ್ಚಾದರೆ ನಷ್ಟದ ಪ್ರಮಾಣ ತಗ್ಗುತ್ತದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ. ಹೊಸ ಕಾಯ್ದೆಗಳಿಗೂ ಮೊದಲು, ಹೆಚ್ಚಿನ ರೈತರು ತಮ್ಮ ಬೆಳೆಗಳನ್ನು ಸರ್ಕಾರಿ ಸೌಲಭ್ಯದ ಸಗಟು ಮಾರುಕಟ್ಟೆಗಳ ಹೊರಗೆ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿತ್ತು. ಇತರ ರಾಜ್ಯಗಳಿಗೆ ಬೆಳೆಗಳನ್ನು ಸಾಗಿಸುವಲ್ಲಿ ಕಾನೂನು ತೊಡಕುಗಳನ್ನು ಎದುರಿಸಬೇಕಾಗಿತ್ತು. ಭಾರತ ಈಗಾಗಲೇ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ಮತ್ತು ಗೋಧಿ ಬೆಳೆಯುವ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ. ಹತ್ತಿ, ಅಕ್ಕಿ ಮತ್ತು ಸಕ್ಕರೆಯನ್ನು ರಫ್ತು ಮಾಡುವ ಅತಿದೊಡ್ಡ ದೇಶಗಳಲ್ಲಿ ಒಂದಾಗಿದೆ. ಭಾರತವು ಉತ್ಪಾದಕತೆಯನ್ನು ಜಾಗತಿಕ ಮಾನದಂಡಗಳಿಗೆ ಹೆಚ್ಚಿಸಲು ಸಾಧ್ಯವಾದರೆ, ದೇಶವು ಜಾಗತಿಕ ಆಹಾರ ಪೂರೈಕೆ ಸರಪಳಿಗಳಲ್ಲಿ ಪ್ರಮುಖ ಕೊಂಡಿಯಾಗಬಹುದು. ಹೊಸ ಸುಧಾರಣೆಗಳು ಭಾರತವು ಆಹಾರ-ರಫ್ತು ಶಕ್ತಿ ಕೇಂದ್ರವಾಗಲು ವೇದಿಕೆಯಾಗಬಹುದು ಎಂದು ತಜ್ಞರು ಹೇಳಿದ್ದಾರೆ.