ಸುಂಕ ಸಮರ ನಡುವೆಯೇ ಭಾರತ-ಯುಎಸ್ ಮಧ್ಯೆ ಮಹತ್ವದ ಒಪ್ಪಂದ:​ 10 ವರ್ಷ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ | India-US

Untitled design (1)
Published on

ನವದೆಹಲಿ: ಸುಂಕ ಸಮರ ಸೇರಿದಂತೆ ರಷ್ಯಾದಿಂದ ಹೆಚ್ಚುವರಿ ತೈಲ ಖರೀದಿಸುತ್ತಿದ್ದ ಭಾರತ ವಿರುದ್ಧ ಸುಂಕ ಸಮರ ಸಾರಿ, ಕಿಡಿಕಾರುತ್ತಿದ್ದ ಅಮೆರಿಕ ಇದೀಗ ಮಹತ್ವದ ಒಪ್ಪಂದವನ್ನು (India-US) ಮಾಡಿಕೊಂಡಿರುವುದು ಹಲವರ ಹುಬ್ಬೇರಿಸಿದೆ.

ರಕ್ಷಣಾ ವಲಯದಲ್ಲಿ ಭಾರತ ಮತ್ತು ಅಮೆರಿಕ ರಾಷ್ಟ್ರಗಳು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿವೆ. ರಕ್ಷಣಾ ವಲಯದಲ್ಲಿ ಸಹಕಾರವನ್ನು ಬಲಪಡಿಸಲು ಎರಡೂ ದೇಶಗಳು 10 ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮಲೇಷ್ಯಾದ ಕೌಲಾಲಂಪುರದಲ್ಲಿ ಪರಸ್ಪರ ಭೇಟಿಯಾಗಿ, ಒಪ್ಪಂದವನ್ನು ಅಂತಿಮಗೊಳಿಸಿದರು.

"ರಕ್ಷಣೆಯು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಪ್ರಮುಖ ಅಂಶವಾಗಿ ಉಳಿದಿದೆ. ಮುಕ್ತ ಮತ್ತು ನಿಯಮ ಆಧಾರಿತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಖಚಿತಪಡಿಸಿಕೊಳ್ಳಲು ನಮ್ಮ ಪಾಲುದಾರಿಕೆ ನಿರ್ಣಾಯಕವಾಗಿದೆ" ಎಂದು ರಾಜನಾಥ್ ಸಿಂಗ್ ತೀರ್ಮಾನಿಸಿದ್ದಾರೆ.

ಭಾರತ-ಅಮೆರಿಕ ಒಪ್ಪಂದಕ್ಕೆ ಸಂದರ್ಶನವೊಂದರಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಪ್ರತಿಕ್ರಿಯಿಸಿ, ರಾಜನಾಥ್ ಸಿಂಗ್ ಅವರೊಂದಿಗೆ 10 ವರ್ಷಗಳ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲು ಖುಷಿಯಿದೆ. ಇದು ಎರಡೂ ದೇಶಗಳ ರಕ್ಷಣಾ ಪಾಲುದಾರಿಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ಸಮನ್ವಯ, ಮಾಹಿತಿ ಮತ್ತು ಸಹಕಾರವನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಭಾರತದೊಂದಿಗಿನ ಅಮೆರಿಕದ ರಕ್ಷಣಾ ಸಂಬಂಧವು ಇನ್ನಷ್ಟು ಬಲವಾಗಿದೆ ಎಂದು ಸ್ಪಷ್ಟಪಡಿಸಿದರು.

ಭಾರತ-ಅಮೆರಿಕ ಮಧ್ಯೆ ಕೆಂಡ!

ಈ ಹಿಂದೆ ರಷ್ಯಾದಿಂದ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸಿದ್ದರು. ಈ ಮೂಲಕ ಭಾರತ ವಿರುದ್ಧ ಸುಂಕ ಸಮರ ಸಾರಿದ್ದರು. ಮತ್ತು ಆಗಾಗ್ಗೆ ಟ್ರಂಪ್​ ಮಾತಿನಲ್ಲೇ ಟಕ್ಕರ್ ಕೊಡುತ್ತಿದ್ದರು. ಇದೆಲ್ಲದರ ಮಧ್ಯೆಯೇ ಭಾರತ ಮತ್ತು ಅಮೆರಿಕ ಈ ಒಪ್ಪಂದಕ್ಕೆ ಸಹಿ ಹಾಕಿರುವುದು ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net