2027ರ ಹೊತ್ತಿಗೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕ ದೇಶವಾಗಲಿದೆ ಎಂದ ಜೇಮ್ಸ್​ ಸುಲ್ಲಿವಾನ್

JPMorgan’s bold forecast
Published on

ನವದೆಹಲಿ: ಭಾರತವು 2027ರ ಹೊತ್ತಿಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದು, ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) 2030ರ ವೇಳೆಗೆ 7 ಟ್ರಿಲಿಯನ್​ ಡಾಲರ್​ಗೆ ದ್ವಿಗುಣಗೊಳ್ಳುತ್ತದೆ ಎಂದು ಹಣಕಾಸು ಸೇವೆಗಳ ಕಂಪನಿ ಜೆಪಿ ಮೊರ್ಗಾನ್​ನ ಏಷ್ಯಾ ಪೆಸಿಫಿಕ್ ಇಕ್ವಿಟಿ ರಿಸರ್ಚ್‌ನ ವ್ಯವಸ್ಥಾಪಕ ನಿರ್ದೇಶಕ ಜೇಮ್ಸ್​ ಸುಲ್ಲಿವಾನ್​ ಭವಿಷ್ಯ ನುಡಿದಿದ್ದಾರೆ.

ಸಿಎನ್​ಬಿಸಿ-ಟಿವಿ18 ಸಂದರ್ಶನದಲ್ಲಿ ಮಾತನಾಡಿದ ಸುಲ್ಲಿವಾನ್​, ಭಾರತದ ಜಿಡಿಪಿಗೆ ಉತ್ಪಾದನಾ ಕೊಡುಗೆಯು ಶೇ. 17 ರಿಂದ ಸುಮಾರು ಶೇ. 25ಕ್ಕೆ ಏರಲಿದೆ ಮತ್ತು ರಫ್ತುಗಳು ಸಹ ದುಪ್ಪಟ್ಟಾಗಲಿದ್ದು, ಒಂದು ಟ್ರಿಲಿಯನ್ ಡಾಲರ್​ಗಳಿಗಿಂತಲೂ ಅಧಿಕವಾಗಲಿದೆ ಎಂದು ನಿರೀಕ್ಷಿಸಿದ್ದಾರೆ.

ಆರ್ಥಿಕತೆಯಲ್ಲಿ ದೀರ್ಘಾವಧಿಯ ದೃಷ್ಟಿಕೋನದಿಂದಾಗಿ ನಾವು ಭಾರತೀಯ ಆರ್ಥಿಕತೆಯ ಒಟ್ಟಾರೆ ರಚನೆಯಲ್ಲಿ ಮುಂದಿನ ದಿನಗಳಲ್ಲಿ ಭಾರಿ ಬದಲಾವಣೆಗಳನ್ನು ನೋಡುತ್ತೇವೆ. ಬಲವಾದ ಮಾರುಕಟ್ಟೆ ಎಂದು ನಾವು ಭಾವಿಸುವ ವಲಯದ ಆಯ್ಕೆಗೆ ಸ್ಪಷ್ಟ ಅವಕಾಶಗಳನ್ನು ಭಾರತ ಒದಗಿಸುತ್ತದೆ ಎಂದು ಸುಲ್ಲಿವಾನ್ ತಿಳಿಸಿದರು.

ರಚನಾತ್ಮಕ ದೃಷ್ಟಿಕೋನದಿಂದ ಜೆಪಿ ಮೋರ್ಗಾನ್‌, ಭಾರತವನ್ನು ಪ್ರಮುಖ ಆರ್ಥಿಕ ಶಕ್ತಿಯನ್ನಾಗಿ ಮಾಡುವ ದೀರ್ಘಾವಧಿಯ ಯುದ್ಧತಂತ್ರದ ಚಾಲಕರು ಎಂದು ನಾನು ವಾದಿಸುತ್ತೇನೆಂದು ಇದೇ ಸಂದರ್ಭದಲ್ಲಿ ಸುಲ್ಲಿವಾನ್​ ಹೇಳಿದರು.

ಚೀನಾದ ಬಗ್ಗೆ ಪ್ರಸ್ತಾಪಿಸಿದ ಸುಲ್ಲಿವಾನ್​, ಚೀನಾದಲ್ಲಿ ಸರಾಸರಿಗಿಂತ ಕಡಿಮೆ ಗಳಿಕೆಯ ಪರಿಷ್ಕರಣೆಯ ಬಗ್ಗೆ ತಿಳಿಸಿದರು ಮತ್ತು ಇದು 2005ರಿಂದ ಕಂಡುಬರದ ಪ್ರವೃತ್ತಿಯಾಗಿದ್ದು, ಚೀನಾವು ತನ್ನ ಆರ್ಥಿಕ ಪಥದಲ್ಲಿ ಇನ್ಫ್ಲೆಕ್ಷನ್ ಪಾಯಿಂಟ್​ನಲ್ಲಿ ಇರಬಹುದು. ಇಂತಹ ಇನ್ಫ್ಲೆಕ್ಷನ್ ಪಾಯಿಂಟ್ ಹೆಚ್ಚಾಗಿ ಹೊಸ ಅವಕಾಶಗಳು ಮತ್ತು ಸವಾಲುಗಳಿಗೆ ಕಾರಣವಾಗಬಹುದು, ಇದು ಹೂಡಿಕೆದಾರರಿಗೆ ತೀವ್ರ ಆಸಕ್ತಿಯ ವಿಷಯವಾಗಿದೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net