

ನವದೆಹಲಿ: ಮಂಗಳವಾರ (ಅ.17) ಗಾಜಾ ಆಸ್ಪತ್ರೆಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 500ಕ್ಕೇರಿದ್ದು, ಹಮಾಸ್ ಮತ್ತು ಇಸ್ರೇಲ್ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ಇಸ್ರೇಲ್ ವಾಯುದಾಳಿಯಿಂದ ದುರಂತ ಸಂಭವಿಸಿದೆ ಎಂದು ಪ್ಯಾಲೆಸ್ತೀನ್ನಲ್ಲಿ ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಆರೋಪ ಮಾಡಿದರೆ, ಹಮಾಸ್ ರಾಕೆಟನ್ನು ತಪ್ಪಾಗಿ ಉಡಾವಣೆ ಮಾಡಿದ್ದರಿಂದ ಅವಘಡ ಘಟಿಸಿದೆ ಎಂದು ಇಸ್ರೇಲ್ ಪ್ರತ್ಯಾರೋಪ ಮಾಡಿದೆ.
ಕಾರ್ಯಾಚರಣೆ ನಡೆಸಿಲ್ಲ
ರಾಕೆಟ್ ಮಿಸ್ಫೈರ್ ಆಗಿ ಗಾಜಾ ಆಸ್ಪತ್ರೆಯ ಮೇಲೆ ಅಪ್ಪಳಿಸಲು ಇಸ್ಲಾಮಿಕ್ ಜಿಹಾದಿಗಳು ಕಾರಣ ಎಂದು ಅನೇಕ ಗುಪ್ತಚರ ವರದಿಗಳು ಸುಳಿವು ನೀಡಿವೆ ಎಂದು ಇಸ್ರೇಲಿ ಸೇನೆ ತಿಳಿಸಿದೆ. ರಾಕೆಟ್ ದಾಳಿಯ ವೇಳೆ ಇಸ್ರೇಲ್, ಆಸ್ಪತ್ರೆಯ ಸಮೀಪ ಯಾವುದೇ ವೈಮಾನಿಕ ಕಾರ್ಯಾಚರಣೆಯನ್ನು ನಡೆಸಿಲ್ಲ ಮತ್ತು ದಾಳಿ ನಡೆಸಿದ ರಾಕೆಟ್ಗೂ ನಮ್ಮ ಸಾಧನಕ್ಕೂ ಯಾವುದೇ ಹೊಂದಾಣಿಕೆ ಇಲ್ಲ ಎಂದು ಇಸ್ರೇಲ್ ವಕ್ತಾರ ಡೇನಿಯಲ್ ಹಗಾರಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಯತ್ನ
ಹಮಾಸ್ ಮಿತ್ರ ಬಣವಾಗಿರುವ ಇಸ್ಲಾಮಿಕ್ ಜಿಹಾದ್, ಇಸ್ರೇಲ್ ಹೇಳಿಕೆಗ ಪ್ರತಿಯಾಗಿ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಝಿಯೋನಿಸ್ಟ್ ಶತ್ರು (ಇಸ್ರೇಲ್) ಗಾಜಾದಲ್ಲಿರುವ ಬ್ಯಾಪ್ಟಿಸ್ಟ್ ಅರಬ್ ನ್ಯಾಶನಲ್ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ನಡೆಸಿದ್ದಲ್ಲದೆ, ತನ್ನ ಸಾಮಾನ್ಯ ಸುಳ್ಳುಗಳ ಮೂಲಕ ಮತ್ತು ಪ್ಯಾಲೆಸ್ತೀನ್ನಲ್ಲಿ ಇಸ್ಲಾಮಿಕ್ ಜಿಹಾದ್ ಆಂದೋಲನದ ಮೇಲೆ ಆಪಾದನೆಯ ಬೆರಳು ತೋರಿಸುವ ಮೂಲಕ ತಾನು ಮಾಡಿದ ಕ್ರೂರ ಹತ್ಯಾಕಾಂಡದ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದೆ.
ತೀವ್ರ ದುಃಖಿತನಾಗಿದ್ದೇನೆ
ಆಸ್ಪತ್ರೆ ಮೇಲಿನ ಬಾಂಬ್ ದಾಳಿಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜತೆ ದೂರವಾಣಿಯಲ್ಲಿ ಮಾತನಾಡಿದ್ದು, ಗಾಜಾದ ಅಲ್-ಅಹ್ಲಿ ಅರಬ್ ಆಸ್ಪತ್ರೆಯ ಮೇಲೆ ನಡೆದ ಸ್ಫೋಟ ಮತ್ತು ಅದರಿಂದ ಉಂಟಾದ ಭೀಕರ ಪ್ರಾಣಹಾನಿಯಿಂದ ನಾನು ಆಕ್ರೋಶಗೊಂಡಿದ್ದೇನೆ ಮತ್ತು ತೀವ್ರ ದುಃಖಿತನಾಗಿದ್ದೇನೆ ಎಂದು ಬೈಡೆನ್ ಹೇಳಿದ್ದಾರೆ. ಅಂದಹಾಗೆ ಬೈಡೆನ್ ಇಂದು ಇಸ್ರೇಲ್ಗೆ ಭೇಟಿ ನೀಡಲಿದ್ದಾರೆ.
ಇದೊಂದು ಭಯಾನಕ ದಾಳಿ
ವಿಶ್ವಸಂಸ್ಥೆಯ ಸಾಮಾನ್ಯ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಭೀಕರ ವಾಯುದಾಳಿಯನ್ನು ಖಂಡಿಸಿದ್ದು, ಇದೊಂದು ಭಯಾನಕ ದಾಳಿ ಎಂದು ಕರೆದಿದ್ದಾರೆ. ನನ್ನ ಹೃದಯ ಸಂತ್ರಸ್ತ ಕುಟುಂಬಸ್ಥರ ಪರವಾಗಿ ಮಿಡಿಯಲಿದೆ ಎನ್ನುವ ಮೂಲಕ ಸಾವಿಗೆ ಸಂತಾಪ ಸೂಚಿಸಿದರು. ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗುವುದು ಎಂದು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಇಸ್ರೇಲ್, ಅಮೆರಿಕ ಕಾರಣ
ಬಾಂಬ್ ದಾಳಿಯನ್ನು ಖಂಡಿಸಿ ನೂರಾರು ಪ್ರತಿಭಟನಾಕಾರರು ಇರಾನ್ ರಾಜಧಾನಿ ತೆಹ್ರಾನ್ನಲ್ಲಿರುವ ಯುಕೆ ಮತ್ತು ಫ್ರಾನ್ಸ್ ರಾಯಭಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ದಾಳಿಗೆ ಇಸ್ರೇಲ್ ಮತ್ತು ಅದರ ಮಿತ್ರ ಅಮೆರಿಕ ಕಾರಣ ಎಂದು ದೂಷಿಸಿರುವ ಇರಾನ್, ಒಂದು ದಿನದ ಶೋಕಾಚರಣೆಯನ್ನು ಘೋಷಣೆ ಮಾಡಿದೆ. ಅಮೆರಿಕ-ಇಸ್ರೇಲ್ ಬಾಂಬ್ನ ಜ್ವಾಲೆಗಳು ಶೀಘ್ರದಲ್ಲೇ ಜಿಯೋನಿಸ್ಟ್ಗಳನ್ನು ಸಂಪೂರ್ಣ ನಾಶ ಮಾಡಲಿದೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಆಕ್ರೋಶ ಹಾಕಿದ್ದಾರೆ.
ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದಂತೆ 1 ಮಿಲಿಯನ್‌ಗಿಂತಲೂ ಅಧಿಕ ಜನರು ಉತ್ತರ ಗಾಜಾದಿಂದ ಪಲಾಯನ ಮಾಡಿ ದಕ್ಷಿಣಕ್ಕೆ ತೆರಳಿದ್ದಾರೆ. ಗಾಜಾ ಪಟ್ಟಿಯಲ್ಲಿರುವ ಪ್ಯಾಲೆಸ್ತೀನಿನ್ ನಾಗರಿಕರನ್ನು ಸಣ್ಣ, ಸಣ್ಣ ಪ್ರದೇಶಗಳಿಗೆ ತುಂಬಲಾಗುತ್ತಿದ್ದು, ಜೀವ ಉಳಿಸುವ ಅಗತ್ಯ ಸರಬರಾಜುಗಳು ಖಾಲಿಯಾಗುತ್ತಿವೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಸಂಕಷ್ಟದಲ್ಲಿರುವ ಜನರಿಗೆ ಸೂಕ್ತವಾದ ನೆರವು ತಲುಪಿಸಲು ಮಾನವೀಯ ಒಪ್ಪಂದಕ್ಕೆ ವಿಶ್ವಸಂಸ್ಥೆ ಕರೆ ನೀಡಿದೆ.
ಅ.7ರ ಶನಿವಾರದಂದು ಪ್ಯಾಲೆಸ್ತೀನ್ನ ಹಮಾಸ್ ಉಗ್ರರು ದಿಢೀರನೇ 5000 ರಾಕೆಟ್ಗಳಿಂದ ಇಸ್ರೇಲ್ ಮೇಲೆ ವಿಧ್ವಂಸಕ ದಾಳಿ ಮಾಡಿರುವುದಕ್ಕೆ ಪ್ರತೀಕಾರವಾಗಿ ಇಸ್ರೇಲ್, ಗಾಜಾ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಇಸ್ರೇಲ್ ಮತ್ತು ಗಾಜಾ ನಡುವೆ ಯುದ್ಧ ಆರಂಭವಾಗಿ 10 ದಿನಗಳು ಕಳೆದ 11ನೇ ದಿನಕ್ಕೆ ಕಾಲಿಟ್ಟರೂ ಕದನ ಕಾರ್ಮೋಡ ಮಾತ್ರ ತಿಳಿಗೊಂಡಿಲ್ಲ. ಸ್ಥಳೀಯ ಜನರು ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಯುದ್ಧದಲ್ಲಿ ಈಗಾಗಲೇ 4000ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. (ಏಜೆನ್ಸೀಸ್)