

ನವದೆಹಲಿ: ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯ ಅರ್ಧದಷ್ಟು ಸಿಬ್ಬಂದಿಗೆ ದೇಶ ತೊರೆಯುವಂತೆ ಭಾರತ ಸೂಚನೆ ನೀಡಿದೆ.
ಇದಷ್ಟೇ ಅಲ್ಲ, ಇಸ್ಲಾಮಾಬಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲೂ ಕೂಡ ತನ್ನ ಅರ್ಧದಷ್ಟು ವಾಪಸ್ ಭಾರತಕ್ಕೆ ಕರೆಯಿಸಿಕೊಳ್ಳುವುದಾಗಿ ಕೂಡ ಹೇಳಿದೆ.
ಕೆಲ ದಿನಗಳ ಹಿಂದಷ್ಟೇ ಇಸ್ಲಾಮಾಬಾದ್ ಭಾರತೀಯ ರಾಯಭಾರ ಕಚೇರಿಯ ಇಬ್ಬರನ್ನು ಅಲ್ಲಿನ ಪೊಲೀಸರು ಬಂದೂಕು ತೋರಿಸಿ ಅಪಹರಿಸಿದ್ದರು. ಬಳಿಕ ರಸ್ತೆ ಅಪಘಾತದ ಕೇಸ್ನಲ್ಲಿ ವಿಚಾರಣೆ ನಡೆಸಿದ್ದಾಗಿ ನೆಪ ಹೇಳಿದ್ದರು. ಇವರನ್ನು ಎರಡು ದಿನಗಳ ಹಿಂದಷ್ಟೇ ಭಾರತ ವಾಪಸ್ ಕರೆಯಿಸಿಕೊಂಡಿತ್ತು.
ಇದಕ್ಕೂ ಮುನ್ನ ಬೇಹುಗಾರಿಕೆಯಲ್ಲಿ ತೊಡಗಿದ್ದ ನವದೆಹಲಿಯಲ್ಲಿರುವ ಪಾಕ್ ರಾಯಭಾರ ಕಚೇರಿಯ ಮೂವರನ್ನು ಬಂಧಿಸಿ ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕ್ ಸುಳ್ಳು ಕೇಸ್ ದಾಖಲಿಸಿ, ಅವರ ಮೇಲೆ ದೌರ್ಜನ್ಯ ಎಸಗಿತ್ತು.
ಪಾಕ್ ಅಧಿಕಾರಿಗಳು ಗೂಢಚಾರ ಕೃತ್ಯ ಹಾಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವುದರಿಂದ ಅವರನ್ನು ದೇಶದಿಂದಲೇ ಹೊರಗೆ ಕಳುಹಿಸಲು ಭಾರತೀಯ ವಿದೇಶಾಂಗ ಇಲಾಖೆ ನಿರ್ಧರಿಸಿದೆ. ಹೀಗಾಗಿ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಅರ್ಧದಷ್ಟು ಇಳಿಕೆ ಮಾಡುವಂತೆ ಸೂಚಿಸಿದೆ.
ಅಂತೆಯೇ ಇಸ್ಲಾಮಾಬಾದ್ನಲ್ಲಿರುವ ತನ್ನ ದೂತಾವಾಸದ ಸಿಬ್ಬಂದಿಯ ಪ್ರಮಾಣವನ್ನು ಅರ್ಧಕ್ಕೆ ಇಳಿಸಲಿದೆ ಎಂದು ಇಲಾಖೆ ತಿಳಿಸಿದೆ.