ಕೊವಿಡ್​-19 ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲಿ 6ನೇ ಸ್ಥಾನಕ್ಕೇರಿದ ಭಾರತ

PTI 5 June 20
Published on

ನವದೆಹಲಿ: ದೇಶದಲ್ಲಿ ಕರೊನಾ ಸೋಂಕು ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಜಾಗತಿಕ ಪಟ್ಟಿಯಲ್ಲಿ ಭಾರತ ಇಟಲಿಯನ್ನೂ ಹಿಂದಿಕ್ಕಿ 6ನೇ ಸ್ಥಾನಕ್ಕೇರಿದೆ. ಕಳೆದ 24 ತಾಸಿನಲ್ಲಿ 8,818 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 2.35 ಲಕ್ಷಕ್ಕೆ ಏರಿಕೆಯಾಗಿದೆ. ಇಟಲಿಯಲ್ಲಿ ಈವರೆಗೆ 2.34 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿವೆ. ಅಮೆರಿಕ 19.28 ಲಕ್ಷ, ಬ್ರೆಜಿಲ್ 6.18 ಲಕ್ಷ, ರಷ್ಯಾ 4.49 ಲಕ್ಷ, ಸ್ಪೇನ್ 2.87 ಲಕ್ಷ, ಬ್ರಿಟನ್ 2.83 ಲಕ್ಷ ಪ್ರಕರಣಗಳೊಂದಿಗೆ ಜಾಗತಿಕ ಪಟ್ಟಿಯ ಮೊದಲ ಐದು ಸ್ಥಾನಗಳಲ್ಲಿವೆ.

ದೇಶದಲ್ಲಿ ಕಳೆದ ಮೇ 29ರಿಂದ ಪ್ರತಿದಿನ 8 ಸಾವಿರ, ಜೂನ್ 3ರಿಂದ ಪ್ರತಿದಿನ 9 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದು, ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿಲ್ಲ. ಕೇವಲ 14 ದಿನಗಳಲ್ಲಿ ಒಂದು ಲಕ್ಷ ಪ್ರಕರಣಗಳು ವರದಿಯಾಗಿವೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಕರೊನಾ ಪ್ರಕರಣಗಳ ವೇಗ ತಗ್ಗಿತ್ತು. ಈಗ ಲಾಕ್​ಡೌನ್ ನಿಯಮಗಳನ್ನು ಸಡಿಲಗೊಳಿಸಿರುವುದರಿಂದ ಸೋಂಕು ಪಸರಿಸುವಿಕೆ ಹೆಚ್ಚಳ ಕಂಡಿದೆ. ಆದಾಗ್ಯೂ ಮರಣ ಪ್ರಮಾಣ ಹಿಡಿತದಲ್ಲಿರುವುದು ಮತ್ತು ಗುಣಮುಖರ ಪ್ರಮಾಣ ಹೆಚ್ಚಿರುವುದರಿಂದ ಇತರ ದೇಶಗಳ ಕರೊನಾದ ತೀವ್ರತೆಗೆ ಹೋಲಿಸಿದರೆ ಭಾರತದ ಸ್ಥಿತಿ ಕೊಂಚ ಉತ್ತಮವಾಗಿದೆ.

ಇದನ್ನೂ ಓದಿ: ರವಿ ಪೂಜಾರಿಯ ಪಾತಕಲೋಕ ತೆರೆದಿಟ್ಟ 706 ಪುಟಗಳ ಚಾರ್ಜ್‌ಶೀಟ್! 5 ದಿನದಲ್ಲಿ ಸಾವಿರ ಸಾವು: ಕರೊನಾ ಸೋಂಕಿತರ ಮೃತರ ಶೇಕಡಾವಾರು ಪ್ರಮಾಣ ಜಾಗತಿಕವಾಗಿ ಹೋಲಿಸಿದರೆ ಭಾರತದಲ್ಲಿ ಕಡಿಮೆಯಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೇವಲ 5 ದಿನಗಳಲ್ಲೇ ಸುಮಾರು ಒಂದು ಸಾವಿರ ಜನರು ಮೃತಪಟ್ಟಿದ್ದಾರೆ. ಜಾಗತಿಕವಾಗಿ ಕರೊನಾಗೆ ಬಳಿಯಾದವರ ಪಟ್ಟಿಯಲ್ಲಿ ಕಳೆದೆರಡು ವಾರಗಳ ಹಿಂದೆ 15ನೇ ಸ್ಥಾನದಲ್ಲಿದ್ದ ಭಾರತ ಈಗ 12ನೇ ಸ್ಥಾನಕ್ಕೇರಿದೆ. ಕಳೆದ 24 ತಾಸಿನಲ್ಲಿ 274 ಸಾವು ಸಂಭವಿಸಿದ್ದು, ಮೃತರ ಸಂಖ್ಯೆ 6,637ಕ್ಕೆ ಏರಿಕೆಯಾಗಿದೆ. ಕಳೆದ ಮೇ 31ರಂದು ಈ ಸಂಖ್ಯೆ 5,164 ಇತ್ತು. ದೇಶದಲ್ಲಿ ಮೊದಲ 1 ಸಾವಿರ ಸಾವುಗಳು ವರದಿಯಾಗಲು 48 ದಿನಗಳ ಸಮಯ ಹಿಡಿದಿತ್ತು. ಬಳಿಕ ಎರಡು ಸಾವಿರಕ್ಕೆ 11 ದಿನಗಳು, ಮೂರು ಸಾವಿರಕ್ಕೆ 8 ದಿನಗಳು, ನಾಲ್ಕು ಸಾವಿರಕ್ಕೆ 7 ದಿನಗಳು, ಐದು ಸಾವಿರಕ್ಕೆ 6 ದಿನಗಳ ಸಮಯ ಹಿಡಿದಿತ್ತು.

ಒಂದು ವರ್ಷ ಹೊಸ ಯೋಜನೆ ಇಲ್ಲ

ದೇಶ ಆರ್ಥಿಕ ಬಿಕ್ಕಟ್ಟಿನಲ್ಲಿ ರುವ ಕಾರಣ ಇನ್ನೊಂದು ವರ್ಷ ಯಾವುದೇ ಹೊಸ ಯೋಜನೆಯನ್ನು ಘೋಷಣೆ ಮಾಡಲಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮತ್ತು ಇತ್ತೀಚೆಗೆ ಘೋಷಣೆ ಮಾಡಲಾಗಿರುವ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಮಾತ್ರ ಹಣಕಾಸನ್ನು ಒದಗಿಸಲಾಗುವುದು. ಅದನ್ನು ಹೊರತು ಬೇರಾವ ಘೋಷಣೆಗೂ ಸಚಿವಾಲಯ ಗಳು ಪ್ರಸ್ತಾವನೆ ಸಲ್ಲಿಸಬಾರದು ಎಂದು ಹೇಳಲಾಗಿದೆ. ಬಜೆಟ್​ನಲ್ಲಿ ಘೋಷಿಸಲಾಗಿರುವ ಯೋಜನೆಗಳನ್ನೂ ಮಾ. 31ರವರೆಗೆ ಕಾರ್ಯರೂಪಕ್ಕೆ ತರಲಾಗುವುದಿಲ್ಲ ಎನ್ನಲಾಗಿದೆ.

ತಬ್ಲಿಘಿ ತನಿಖೆ ಸಿಬಿಐಗೆ ಹಸ್ತಾಂತರ ಇಲ್ಲ

ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವ ಅಗತ್ಯ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ತಿಳಿಸಿದೆ. ದೆಹಲಿ ಪೊಲೀಸರು ಉತ್ತಮ ರೀತಿಯಲ್ಲಿ ತನಿಖೆ ನಡೆಸುತ್ತಿರುವುದಾಗಿ ಕೇಂದ್ರ ತಿಳಿಸಿದೆ. ಮಾ. 21ರಂದು ನಿಜಾಮುದ್ದೀನ್​ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗ ಕರೊನಾ ವಿಚಾರವನ್ನು ತಿಳಿಸಿ, ಅಲ್ಲಿದ್ದವರನ್ನು ಅವರೂರಿಗೆ ಕಳುಹಿಸಿಕೊಡುವಂತೆ ತಿಳಿಸಲಾಗಿತ್ತು. ಆದರೆ ಅದನ್ನು ಮೀರಿ ಅಲ್ಲಿ ಕಾರ್ಯಕ್ರಮವನ್ನು ಮುಂದುವರಿಸಲಾಗಿದೆ. ತಬ್ಲಿಘಿ ಜಮಾತ್​ನ ಮುಖ್ಯಸ್ಥ ಮೌಲಾನಾ ಸಾದ್ ತನ್ನೊಂದಿಗಿದ್ದವರಿಗೆ ಲಾಕ್​ಡೌನ್​ನ್ನು ಧಿಕ್ಕರಿಸಲು ಹೇಳಿರುವ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net