

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಷ್ಟ್ರದ ಗೌರವ ವಿಚಾರದಲ್ಲಿ ಯಾವುದೇ ಸಂಧಾನ ಮಾಡಿಕೊಳ್ಳುವ ಮಾತೇ ಇಲ್ಲ ಎನ್ನುವ ಮೂಲಕ ಚೀನಾಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನವದೆಹಲಿ ಶಾಂತಿಯನ್ನು ಬಯಸುತ್ತದೆ ಹೊರತು ಯಾವುದೇ ಘರ್ಷಣೆ ಬಯಸುವುದಿಲ್ಲ ಎಂದು ಶಾಂತಿ ಮಂತ್ರ ಜಪಿಸಿದರು.
ಹೈದರಾಬಾದ್ನ ದುಂಡಿಗಲ್ನಲ್ಲಿರುವ ಏರ್ಫೋರ್ಸ್ ಅಕಾಡೆಮಿಯ ಕಂಬೈನ್ಡ್ ಗ್ರಾಜುಯೇಷನ್ ಪರೇಡ್ ಉದ್ದೇಶಿಸಿ ರಾಜನಾಥ್ ಸಿಂಗ್ ಮಾತನಾಡಿದರು.
ಯಾವುದೇ ಪರಿಸ್ಥಿತಿ ಇರಲಿ ಭಾರತ ಸರ್ವಸನ್ನದ್ಧವಾಗಿದೆ ಎಂದು ಸೇನಾ ಸಾಮರ್ಥ್ಯ ಸಾರಿದ ಸಚಿವರು, ಗಡಿಯಲ್ಲಿ ಪಾಕಿಸ್ತಾನ ಕ್ರಾಸ್ ಬಾರ್ಡರ್ ಟೆರರಿಸಂ ನಡೆಸುತ್ತಿದೆ. ನೇರವಾಗಿ ಎದರಿಸಲಾಗದೇ ಪ್ರಾಕ್ಸಿ ವಾರ್ ಮೊರೆ ಹೋಗಿದೆ ಎಂದು ಪಾಕ್ ವಿರುದ್ಧ ಕಿಡಿಕಾರಿದರು.
ಪಶ್ಚಿಮ ವಲಯದಲ್ಲಿ ಪಾಕಿಸ್ತಾನ ವಿಧ್ವಂಸಕ ಕೃತ್ಯಕ್ಕೆ ಕೈಹಾಕಿದೆ. ನಮ್ಮ ವಿರುದ್ಧ ನಾಲ್ಕು ಯುದ್ಧಗಳಲ್ಲಿ ಮಣ್ಣು ಮುಕ್ಕಿದ್ದರೂ ಈಗಲೂ ಪ್ರಾಕ್ಸಿ ವಾರ್ ಅಥವಾ ಮೋಸದ ಯುದ್ಧ ಮಾಡುತ್ತಲೇ ಇದೆ. ಪಾಕ್ನ ಈ ಪ್ರಯತ್ನಗಳನ್ನು ಎಚ್ಚರಿಕೆಯಿಂದ ಎದುರಿಸುವ ನಮ್ಮ ಭದ್ರತಾ ಪಡೆಗಳನ್ನು ಸನ್ಮಾನಿಸಲು ನಾನು ಬಯಸುತ್ತೇನೆಂದರು.
ಉಲ್ಲಂಘನೆ, ಆಕ್ರಮಣಶೀಲತೆ ಮತ್ತು ಗಡಿಗಳಲ್ಲಿ ಯಾವುದೇ ಏಕಪಕ್ಷೀಯ ಕ್ರಮಕ್ಕೆ ಸೂಕ್ತ ಉತ್ತರ ನೀಡುವ ಮೂಲಕ ಭಾರತ ದುರ್ಬಲವಲ್ಲ ಎಂಬುದನ್ನು ನಾವು ತೋರಿಸಿದ್ದೇವೆಂದು ಯೋಧರನ್ನು ರಕ್ಷಣಾ ಸಚಿವರು ಹುರಿದುಂಬಿಸಿದರು. (ಏಜೆನ್ಸೀಸ್)