ಶಬರಿಮಲೆಯಿಂದ ಅಂಚೆ ಮೂಲಕ 'ಸ್ವಾಮಿ ಪ್ರಸಾದಂ'

Sabarimala (2)
Published on

ತಿರುವನಂತಪುರ: ಜಗತ್ಪ್ರಸಿದ್ದ ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ಕ್ಷೇತ್ರದಿಂದ ಈ ಬಾರಿ ಪ್ರಸಾದವನ್ನು ಅಂಚೆ ಮೂಲಕ ತರಿಸಿಕೊಳ್ಳಬಹುದು. ಈ ಸಂಬಂಧ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಅಂಚೆ ಇಲಾಖೆ ನಡುವೆ ಒಪ್ಪಂದ ಏರ್ಪಟ್ಟಿದೆ. ಕೇರಳದಲ್ಲಿ ಆನ್​ಲೈನ್​ ಮೂಲಕ ಬುಕ್​ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉಳಿದಂತೆ ಅಂಚೆ ಕಚೇರಿಗೆ ತೆರಳಿ ಮುಂಗಡ ಹಣಪಾವತಿಸಿ ಸ್ವಾಮಿ ಪ್ರಸಾದಂ ತರಿಸಿಕೊಳ್ಳಬಹುದು.

ಅಂಚೆ ಇಲಾಖೆ 'ಸ್ವಾಮಿ ಪ್ರಸಾದಂ' ಕಿಟ್​ಗೆ 450 ರೂಪಾಯಿ ದರ ನಿಗದಿಪಡಿಸಿದೆ. ಈ ಕಿಟ್​ನಲ್ಲಿ ಅರವಣ ಪಾಯಸ, ತುಪ್ಪ, ಅರಶಿಣ, ಕುಂಕುಮ, ವಿಭೂತಿ ಮತ್ತು ಇತರೆ ಪ್ರಸಾದಗಳಿರುತ್ತವೆ. ಕಳೆದ ಶುಕ್ರವಾರದಿಂದ ಈ ಸೇವೆ ಶುರುವಾಗಿದೆ. 450 ರೂಪಾಯಿ ಪೈಕಿ 250 ರೂಪಾಯಿ ದೇವಸ್ವಂ ಮಂಡಳಿಗೆ ಪಾವತಿಯಾಗುತ್ತದೆ. ಉಳಿದ ಹಣ ಅಂಚೆ ಇಲಾಖೆಗೆ ಸೇರುತ್ತದೆ.

ಪ್ರಸಾದವನ್ನು ದೇವಸ್ವಂ ಮಂಡಳಿ ಶಬರಿಮಲೆ ಸನ್ನಿದಾನದಿಂದ ಕೆಳಗೆ ಪಂಪಾ ನದಿ ತೀರಕ್ಕೆ ತಲುಪಿಸುವ ವ್ಯವಸ್ಥೆ ಮಾಡುತ್ತದೆ. ಅಲ್ಲಿಂದ ಭಕ್ತರಿಗೆ ಮೂರು ದಿನಗಳ ಒಳಗಾಗಿ ಪ್ರಸಾದ ತಲುಪಿಸುವ ಹೊಣೆಗಾರಿಕೆ ಅಂಚೆ ಇಲಾಖೆಯದ್ದು. ಸ್ಪೀಡ್ ಪೋಸ್ಟ್ ಮೂಲಕ ಸ್ವಾಮಿ ಪ್ರಸಾದಂ ಕಿಟ್ ಭಕ್ತರಿಗೆ ತಲುಪುತ್ತದೆ. ಒಂದೇ ರಿಸೀಟ್​ನಲ್ಲಿ 10 ಕಿಟ್​ ತನಕ ಆರ್ಡರ್ ಮಾಡುವುದಕ್ಕೆ ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net