ಹಮಾಸ್ ದಾಳಿಗೆ ಭಾರತ ನಂಟು!: ಮಧ್ಯಪ್ರಾಚ್ಯ ಕಾರಿಡಾರ್ ಯೋಜನೆ ಟಾರ್ಗೆಟ್; ಅಮೆರಿಕ ಅಧ್ಯಕ್ಷ ಬೈಡೆನ್ ಅಚ್ಚರಿ ಹೇಳಿಕೆ

Israel
Published on

ವಾಷಿಂಗ್ಟನ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ 20ನೇ ದಿನಕ್ಕೆ ಕಾಲಿಟ್ಟಿದ್ದು, ಇದೇ ಮೊದಲ ಬಾರಿಗೆ ಈ ಸಂಘರ್ಷಕ್ಕೆ ಭಾರತದ ಕಾರಿಡಾರ್ ಯೋಜನೆಯೂ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆ ಯಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್​ನ ಬಗ್ಗೆ ಘೊಷಣೆ ಮಾಡಲಾಗಿತ್ತು. ಈ ಪ್ರದೇಶವನ್ನು ರೈಲು, ರಸ್ತೆ ಮತ್ತು ಬಂದರುಗಳ ಜಾಲದೊಂದಿಗೆ ಸಂಯೋಜಿಸುವುದು ಯೋಜನೆಯ ಉದ್ದೇಶವಾಗಿತ್ತು. ಈ ಯೋಜನೆಗೆ ಅಡ್ಡಿಪಡಿಸುವ ಉದ್ದೇಶದಿಂದ ದಾಳಿ ನಡೆದಿರಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸುಳಿವು ನೀಡಿದ್ದಾರೆ. ಹಮಾಸ್ ದಾಳಿಗೆ ಕಾರಿಡಾರ್ ಯೋಜನೆಯೂ ಒಂದು ಕಾರಣ ಎಂದು ನನಗೆ ಮನವರಿಕೆಯಾಗಿದೆ. ಇದಕ್ಕೆ ನನ್ನ ಬಳಿ ಯಾವುದೇ ಪುರಾವೆಗಳಿಲ್ಲ. ಇಸ್ರೇಲ್​ಗಾಗಿ ಪ್ರಾದೇಶಿಕ ಏಕೀಕರಣ ಬಗ್ಗೆ ನಾವು ಮಾಡುತ್ತಿರುವ ಪ್ರಗತಿಯಿಂದಾಗಿ ಹಲವರಿಗೆ ತೊಂದರೆ ಆಗಿದೆ. ಹೀಗಾಗಿ ಅವರು ಈ ಕೃತ್ಯ ನಡೆಸಿರಬಹುದು. ಆದರೆ ನಾವು ಯೋಜನೆಯನ್ನು ಕೈಬಿಡಬಾರದು ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬೈಡೆನ್ ಹೇಳಿದ್ದಾರೆ. ಜಿ20 ಶೃಂಗಸಭೆಯಲ್ಲಿ ಭಾರತ, ಅಮೆರಿಕ, ಯುಎಇ, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುರೋಪಿಯನ್ ಯೂನಿಯನ್ ಈ ಕಾರಿಡಾರ್ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿದ್ದವು. ಮೂಲಗಳ ಪ್ರಕಾರ ಏಷ್ಯಾ, ಪಶ್ಚಿಮ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್ ನಡುವೆ ಸಂಪರ್ಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕಾರಿಡಾರ್ ಮಹತ್ವದ ಪಾತ್ರ ನಿರ್ವಹಿಸಲಿದೆ.

ಏನಿದು ಯೋಜನೆ?

ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಎರಡು ಪ್ರತ್ಯೇಕ ಕಾರಿಡಾರ್​ಗಳನ್ನು ಒಳಗೊಂಡಿರುತ್ತದೆ. ಭಾರತವನ್ನು ಪಶ್ಚಿಮ ಏಷ್ಯಾ/ಮಧ್ಯಪ್ರಾಚ್ಯಕ್ಕೆ ಸಂರ್ಪಸುವ ಪೂರ್ವ ಕಾರಿಡಾರ್ ಮತ್ತು ಪಶ್ಚಿಮ ಏಷ್ಯಾ/ಮಧ್ಯಪ್ರಾಚ್ಯವನ್ನು ಯುರೋಪ್​ಗೆ ಸಂರ್ಪಸುವ ಉತ್ತರ ಕಾರಿಡಾರ್. ಇದು ರೈಲು ಮಾರ್ಗವನ್ನೂ ಒಳಗೊಂಡಿರುತ್ತದೆ. ಯೋಜನೆ ಪೂರ್ಣಗೊಂಡ ನಂತರ ಭಾರತದ ಮೂಲಕ ಆಗ್ನೇಯ ಏಷ್ಯಾದ ನಡುವೆ ಸರಕು ಮತ್ತು ಸೇವೆಗಳ ಸಾಗಣೆಗೆ ಬೃಹತ್ ಜಾಲವನ್ನು ಇದು ಒದಗಿಸುತ್ತದೆ. ಜೋ ಬೈಡೆನ್ ಕೂಡ ಇತ್ತೀಚೆಗೆ ಕಾರಿಡಾರ್ ಅನ್ನು ಶ್ಲಾಘಿಸಿದರು. ರೈಲು, ಬಂದರು ಯೋಜನೆಯು ಹೆಚ್ಚು ಸುಸ್ಥಿರ, ಸಮಗ್ರ ಮಧ್ಯಪ್ರಾಚ್ಯವನ್ನು ನಿರ್ವಿುಸುವ ಪ್ರಯತ್ನದ ಭಾಗವಾಗಿದೆ ಎಂದಿದ್ದರು.

ಬೈಡನ್ ಹೇಳಿಕೆ ಏಕೆ ಮಹತ್ವ?

  • ್ಝಪ್ರಸ್ತುತ ಭಾರತ, ಆಗ್ನೇಯ ರಾಷ್ಟ್ರಗಳೊಂದಿಗೆ ಯುರೋಪ್ ಸಂಪರ್ಕ ಕಷ್ಟ
  • ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಜಾರಿಯಾದರೆ ಅಮೆರಿಕ, ಯುರೋಪ್ ಸಹಿತ ಹೆಚ್ಚಿನ ರಾಷ್ಟ್ರಗಳಿಗೆ ಅನುಕೂಲ
  • ಚೀನಾದ ಸಿಲ್ಕ್ ಮತ್ತು ಬೆಲ್ಟ್ ರೋಡ್ ಯೋಜನೆಗೆ ಭಾರಿ ಹಿನ್ನಡೆ
  • ಈಗಾಗಲೇ ಭಾರಿ ಮೊತ್ತವನ್ನು ಹೂಡಿಕೆ ಮಾಡಿರುವ ಕಾರಣ ಚೀನಾ, ಬೆಲ್ಟ್ ರೋಡ್ ಯೋಜನೆ ರದ್ದಾದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ
  • ಭಾರತದ ಕಾರಿಡಾರ್​ಗೆ ಯುಎಇ ಸಹಿತ ಹಲವು ಮಧ್ಯಪ್ರಾಚ್ಯದ ಮುಸ್ಲಿಂ ದೇಶಗಳಿಂದ ಬೆಂಬಲ ವ್ಯಕ್ತವಾಗಿರುವುದು ಕೆಲ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ.
  • ಈ ಯೋಜನೆಗೆ ಮಧ್ಯಪ್ರಾಚ್ಯ ರಾಷ್ಟ್ರಗಳು ಕೇಂದ್ರ ಬಿಂದು. ಇಲ್ಲಿ ಬಿಕ್ಕಟ್ಟು ಸೃಷ್ಟಿಯಾದರೆ ಯೋಜನೆಗೆ ಭಾರಿ ಹಿನ್ನಡೆ ಆಗಲಿದೆ.

250 ವೈಮಾನಿಕ ದಾಳಿ: ಕಳೆದ 24 ಗಂಟೆಗಳಲ್ಲಿ ಗಾಜಾದಾದ್ಯಂತ ಸುಮಾರು 250 ವೈಮಾನಿಕ ದಾಳಿಗಳನ್ನು ನಡೆಸಲಾಗಿದೆ. ಸುರಂಗ ಮಾರ್ಗ, ರಾಕೆಟ್ ಲಾಂಚರ್ ಮತ್ತು ಉಗ್ರರ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ಗಾಜಾ ಆರೋಗ್ಯ ಸಚಿವಾಲಯ 7,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ.

ಉಗ್ರರಿಗೆ ಇರಾನ್ ಸೇನೆ ತರಬೇತಿ?: ನೂರಾರು ಹಮಾಸ್ ಉಗ್ರರು ಇರಾನ್​ನಲ್ಲಿ ವಿಶೇಷ ಯುದ್ಧ ತರಬೇತಿ ಪಡೆದಿದ್ದಾರೆ ಎಂದು ಅಮೆರಿಕದ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಈ ತರಬೇತಿಯಲ್ಲಿ ಹಮಾಸ್ ಮತ್ತು ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್​ನ 500 ಸದಸ್ಯರು ಇದ್ದರು. ಇರಾನ್​ನ ಸೇನೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಈ ತರಬೇತಿ ಆಯೋಜನೆ ಮಾಡಿತ್ತು. ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಲು ಇರಾನ್ ಸಹಾಯ ಮಾಡಿದೆ. ಲೆಬನಾನ್​ನ ರಾಜಧಾನಿ ಬೈರುತ್​ನಲ್ಲಿ ನಡೆದ ಸಭೆಯಲ್ಲಿ ದಾಳಿಗೆ ಅನುಮೋದನೆ ನೀಡಲಾಗಿತ್ತು. ಇರಾನ್ ಬೆಂಬಲಿತ ಹಿಜ್ಬುಲ್ಲಾ ಉಗ್ರ ಸಂಘಟನೆಯೂ ಇದರಲ್ಲಿ ಸೇರಿತ್ತು ಎಂದು ವರದಿ ಹೇಳಿದೆ. ಇರಾನ್ ಸೇನೆಯ ಅಧಿಕಾರಿಗಳು ಕಳೆದ ಆಗಸ್ಟ್​ನಿಂದ ಹಮಾಸ್ ಉಗ್ರರ ಜತೆ ಸಂಪರ್ಕದಲ್ಲಿದ್ದರು. ಭೂಮಿ, ವಾಯು ಮತ್ತು ಸಮುದ್ರದ ಮೂಲಕ ಇಸ್ರೇಲ್ ಮೇಲೆ ಬಹುಮುಖ ದಾಳಿಗೆ ಯೋಜನೆ ರೂಪಿಸುತ್ತಿದ್ದರು ಎಂದು ಅದು ಹೇಳಿದೆ. ಆದರೆ ಈ ವರದಿಯನ್ನು ಇರಾನ್ ನಿರಾಕರಿಸಿದೆ.

ಗಾಜಾ ನೆಲದಲ್ಲಿ ಇಸ್ರೇಲ್ ಕಾರ್ಯಾಚರಣೆ: ಹಮಾಸ್ ನಿಯಂತ್ರಿತ ಗಾಜಾ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಇಸ್ರೇಲ್ ತೀವ್ರಗೊಳಿಸಿದೆ. ಹಲವಾರು ಟ್ಯಾಂಕ್​ಗಳು, ಸೈನಿಕರು ಬುಧವಾರ ರಾತ್ರಿ ಉಗ್ರರ ಶಂಕಿತ ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಇಸ್ರೇಲ್ ಗುರುವಾರ ಹೇಳಿದೆ. ಯುದ್ಧಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೊಷಿಸಿದ ಕೆಲವೇ ಗಂಟೆಗಳ ನಂತರ ಪ್ಯಾಲೆಸ್ತೇನ್ ಪ್ರದೇಶದ ಮೇಲೆ ಸೇನೆ ‘ಟಾರ್ಗೆಟೆಡ್ ಕಾರ್ಯಾಚರಣೆ’ ನಡೆಸಿದೆ. ಕಾರ್ಯಾಚರಣೆ ವೇಳೆ ಹಲವಾರು ಭಯೋತ್ಪಾದಕರ ನೆಲೆ, ಮೂಲಸೌಕರ್ಯ ಮತ್ತು ಟ್ಯಾಂಕ್ ವಿರೋಧಿ ಕ್ಷಿಪಣಿ ಉಡಾವಣಾ ಪೋಸ್ಟ್​ಗಳನ್ನು ನಾಶಪಡಿಸಲಾಗಿದೆ. ಈ ಕಾರ್ಯಾಚರಣೆಯು ಮುಂದಿನ ಯುದ್ಧದ ಹಂತಕ್ಕೆ ಸಿದ್ಧತೆಯಾಗಿದೆ. ಸೈನಿಕರು ಗಾಜಾದ ನಿಗದಿತ ಪ್ರದೇಶದ ಮೇಲೆ ದಾಳಿ ನಡೆಸಿ, ಮತ್ತೆ ಗಡಿಗೆ ವಾಪಸಾಗಲಿದ್ದಾರೆ. ಶಸ್ತ್ರಸಜ್ಜಿತ ವಾಹನಗಳು ಮತ್ತು ಬುಲ್ಡೋಜರ್​ಗಳು ಗಾಜಾ ಗಡಿಯೊಳಕ್ಕೆ ತೆರಳುತ್ತಿರುವ ವಿಡಿಯೋ ತುಣುಕನ್ನೂ ಇಸ್ರೇಲ್ ಬಿಡುಗಡೆ ಮಾಡಿದೆ. ಮತ್ತೊಂದು ವೀಡಿಯೋದಲ್ಲಿ, ವೈಮಾನಿಕ ದಾಳಿ ನಂತರದ ಕಟ್ಟಡಗಳು ಧ್ವಂಸಗೊಂಡು ದಟ್ಟವಾದ ಹೊಗೆ ಆವರಿಸಿರುವ ದೃಶ್ಯ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net