ಲಸಿಕೆ ಅಭಿಯಾನದಲ್ಲಿ ಭಾರತ ಮುಂಚೂಣಿ: ಇಂದು ರಾಷ್ಟ್ರೀಯ ಲಸಿಕೆ ದಿನ

Vaccine
Published on

ಇಡೀ ವಿಶ್ವವನ್ನು ಕಾಡುತ್ತಿರುವ ಮಾರಕ ಕರೊನಾ ವಿರುದ್ಧ ಹೋರಾಡುವಲ್ಲಿ ಲಸಿಕೆಯೂ ಮುಖ್ಯ ಪಾತ್ರ ವಹಿಸಿದೆ ಎಂಬುದು ದೃಢಪಟ್ಟಿದೆ. ಮನುಷ್ಯನನ್ನು ಮಾರಣಾಂತಿಕವಾಗಿ ಕಾಡುವ ಕೆಲ ರೋಗಗಳ ವಿರುದ್ಧ ರಕ್ಷಣೆ ಪಡೆಯಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕಾಗುತ್ತದೆ. ಲಸಿಕೆ ಮೂಲಕ ಇದು ಸಾಧ್ಯ. ಲಸಿಕೆ ಅಭಿಯಾನ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಜಾರಿಯಲ್ಲಿದೆ. ಭಾರತದಲ್ಲಿ 1995ರ ಮಾ.16ರಂದು ಬಾಯಿಯ ಮೂಲಕ ಪೋಲಿಯೋ ಲಸಿಕೆಯ ಮೊದಲ ಡೋಸ್ ನೀಡಲಾಯಿತು. ಅಂದಿನಿಂದ ದೇಶದಲ್ಲಿ ಪ್ರತಿವರ್ಷ ಮಾ.16ನ್ನು ‘ರಾಷ್ಟ್ರೀಯ ಲಸಿಕೆ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಇದನ್ನು ‘ರಾಷ್ಟ್ರೀಯ ರೋಗನಿರೋಧಕ ದಿನ’ ಎಂದೂ ಕರೆಯಲಾಗುತ್ತದೆ. ಇದು ಪೋಲಿಯೋ ರೋಗದ ವಿರುದ್ಧ ಭಾರತದ ಗೆಲುವನ್ನು ಸೂಚಿಸುತ್ತದೆ. ಪೋಲಿಯೋವನ್ನು ನಿಮೂಲನೆ ಮಾಡುವಲ್ಲಿ ಭಾರತ ಯಶಸ್ವಿಯಾಗಿರುವುದು ಮಹತ್ವದ ಮೈಲಿಗಲ್ಲು. ಲಸಿಕೆಯ ಮಹತ್ವ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಅದರ ಪಾತ್ರ ಹಾಗೂ ರೋಗಗಳಿಂದ ಸುರಕ್ಷತೆ ನೀಡುವ ಕುರಿತು ತಿಳಿಸಲು ಈ ದಿನ ಆಚರಿಸಲಾಗುತ್ತದೆ. ‘ಲಸಿಕೆಗಳು ಎಲ್ಲರಿಗೂ ಪ್ರಯೋಜನಕಾರಿ’ (Vaccine work for all) ಎಂಬುದು ಈ ವರ್ಷದ ಘೋಷವಾಕ್ಯ.

ಯಾವ ರೋಗಗಳಿಗೆ ಲಸಿಕೆ?: ಗಂಭೀರ ರೋಗಗಳಿಂದ ರಕ್ಷಣೆ ಪಡೆಯಲು ರಾಜ್ಯದಲ್ಲಿ ಸರ್ಕಾರದಿಂದ ಉಚಿತವಾಗಿ ಕೆಲ ಲಸಿಕೆಗಳನ್ನು ನೀಡಲಾಗುತ್ತದೆ. ಹೆಪಟೈಟಿಸ್ ಬಿ, ಪೋಲಿಯೋ, ಬಾಲಕ್ಷಯ, ರೋಟಾವೈರಸ್, ಅತಿಸಾರ, ನ್ಯೂಮೊಕಾಕಲ್ ಕಾಯಿಲೆ, ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು, ಎಚ್ ಇನ್ಪೋಏನ್ಜಾ ಬಿ, ದಡಾರ, ರುಬೆಲ್ಲಾ, ಮಿದುಳು ಜ್ವರ (ಜಾಪನೀಸ್ ಎನ್ಸೆಫಲೈಟಿಸ್), ಇರುಳು ಕುರುಡು ರೋಗ ಇತ್ಯಾದಿ ಬಾಧಿಸದಿರಲು ಕಾಲ ಕಾಲಕ್ಕೆ ಲಸಿಕೆ ಪಡೆಯಬೇಕು ಎನ್ನುತ್ತಾರೆ ತಜ್ಞರು. ಹುಟ್ಟಿದ ಕೂಡಲೇ ನೀಡುವ ಹೆಪಟೈಟಿಸ್ ಬಿ, ಒಪಿವಿ, ಬಿಸಿಜಿ ಸೇರಿ 6 ವಾರ, 10 ವಾರ, 14 ವಾರ, 9 ತಿಂಗಳು, 16-23 ತಿಂಗಳು, 5-6 ವರ್ಷ, 10 ವರ್ಷ ಹಾಗೂ 16 ವರ್ಷದ ಮಕ್ಕಳಿಗೆ ಲಸಿಕೆಗಳನ್ನು ನೀಡಲಾಗುತ್ತದೆ.

ಲಸಿಕೆಯ ಮಹತ್ವ

  • ಮಕ್ಕಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಂತೆ ತಡೆಯುತ್ತದೆ.
  • ಸಾಂಕ್ರಾಮಿಕ ರೋಗ ಪ್ರಸರಣ ನಿಯಂತ್ರಣದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.
  • ಜನರ ಜೀವ ಉಳಿಸುವುದರ ಜತೆಗೆ ಆರೋಗ್ಯ ಹಾಗೂ ಜೀವನಮಟ್ಟ ಸುಧಾರಿಸುತ್ತವೆ.

ಮಿಷನ್ ಇಂದ್ರಧನುಷ್: ನಿಯಮಿತ ಲಸಿಕೆಗಳಿಂದ ವಂಚಿತರಾದ ತಾಯಂದಿರು ಮತ್ತು ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ರೋಗಗಳ ವಿರುದ್ಧ ಸಾರ್ವತ್ರಿಕ ಪ್ರತಿರಕ್ಷಣೆ ಕಾರ್ಯಕ್ರಮದಡಿಯಲ್ಲಿ 2014ರಿಂದ ದೇಶದಲ್ಲಿ ‘ಮಿಷನ್ ಇಂದ್ರಧನುಷ್’ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಆ ಮೂಲಕ 2030ರ ವೇಳೆಗೆ ‘ತಡೆಗಟ್ಟಬಹುದಾದ ಮಕ್ಕಳ ಸಾವು’ಗಳು ಇಲ್ಲದಂತೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಸಂಜೀವಿನಿ: ಲಸಿಕೆಗಳು ಪ್ರತಿವರ್ಷ ಅಂದಾಜು 2-3 ದಶಲಕ್ಷ ಜನರನ್ನು ಉಳಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗ ವಿಶ್ವದಾದ್ಯಂತ ಜನರನ್ನು ಬಾಧಿಸಿದೆ. ಈ ಮಾರಣಾಂತಿಕ ವೈರಸ್ ವಿರುದ್ಧ ಹೋರಾಡಲು ದೇಶದ ಪ್ರತಿ ನಾಗರಿಕರಿಗೂ ಕೋವಿಡ್ ಲಸಿಕೆ ಹಾಕಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇದರೊಂದಿಗೆ ಲಸಿಕೆಗಳ ಸಾಲಿನಲ್ಲಿ ಈಗ ಕೋವಿಡ್ ಲಸಿಕೆ ಸೇರ್ಪಡೆಯಾಗಿದ್ದು, ಭಾರತದಲ್ಲಿ 2021ರ ಜ.16ರಂದು ಆರಂಭವಾದ ಕೋವಿಡ್ ಲಸಿಕೆ ಅಭಿಯಾನ ವಿಶ್ವದ ಬೃಹತ್ ಲಸಿಕಾ ಅಭಿಯಾನ ಎನಿಸಿಕೊಂಡಿದೆ. ಕರ್ನಾಟಕದಲ್ಲಿ ಈವರೆಗೆ 10.20 ಕೋಟಿಗೂ ಅಧಿಕ ಡೋಸ್ ಲಸಿಕೆ ವಿತರಿಸಲಾಗಿದೆ.

ರಾಜ್ಯದಲ್ಲಿ 20 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

60 ವರ್ಷ ಮೇಲ್ಪಟ್ಟ 76.58 ಲಕ್ಷ ಮಂದಿಗೆ ಬೂಸ್ಟರ್ ಡೋಸ್

ದೇಶದ ಇತರೆಡೆಯಂತೆ ರಾಜ್ಯದಲ್ಲೂ 12- 14 ವರ್ಷದ ಮಕ್ಕಳಿಗೆ ಕೋರ್ಬಿವ್ಯಾಕ್ಸ್- ಕೋವಿಡ್ ಲಸಿಕೆ ಹಾಗೂ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಮುನ್ನೆಚ್ಚರಿಕೆ ಡೋಸ್ ನೀಡುವ ಕಾರ್ಯಕ್ಕೆ ಬುಧವಾರ ಚಾಲನೆ ದೊರೆಯಲಿದೆ. ಮಕ್ಕಳ ಲಸಿಕಾ ಅಭಿಯಾನಕ್ಕೆ ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಸಂಸ್ಥೆ ಆವರಣದಲ್ಲಿ ಬೆಳಗ್ಗೆ 9.30ಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಚಾಲನೆ ನೀಡಲಿದ್ದಾರೆ. ಜಿಲ್ಲಾಮಟ್ಟದಲ್ಲೂ ಅಭಿಯಾನ ಉದ್ಘಾಟನೆಗೊಳ್ಳಲಿದೆ.

20 ಲಕ್ಷ ಡೋಸ್ ದಾಸ್ತಾನು: ರಾಜ್ಯದಲ್ಲಿ ಈಗಾಗಲೇ 20 ಲಕ್ಷ ಡೋಸ್ ಕೋರ್ಬಿವ್ಯಾಕ್ಸ್ ಲಸಿಕೆ ದಾಸ್ತಾನು ಮಾಡಲಾಗಿದೆ. 60 ವರ್ಷ ಮೇಲ್ಪಟ್ಟ 76.58 ಲಕ್ಷ ಮಂದಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡುವ ಗುರಿ ಹೊಂದಿದೆ. ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ವಿತರಿಸಲಾಗುವುದು. ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮೇಲ್ವಿಚಾರಣೆ ಇರಲಿದೆ.

ಶಾಲೆಗಳಿಗೆ ವಿಸ್ತರಣೆ: ಅನ್​ಲೈನ್ ಮೂಲಕ ಹಾಗೂ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳುವ ಮೂಲಕ ಲಸಿಕೆ ಪಡೆಯಬಹುದು. ಆರಂಭದಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಿದ್ದು, ನಂತರ ಶಾಲೆಗಳಿಗೆ ವಿಸ್ತರಿಸಲಾಗುವುದು. ಲಸಿಕಾ ಪ್ರಮಾಣಪತ್ರ ಕೋವಿನ್ ಪೋರ್ಟಲ್​ನಲ್ಲಿ ದೊರೆಯಲಿದೆ. ಆನ್​ಲೈನ್ ತರಗತಿ ನಡೆಸುತ್ತಿರುವ ಶಾಲೆಗಳ ಮಕ್ಕಳಿಗೆ ದಿನಾಂಕ ನಿಗದಿಪಡಿಸಿ ಲಸಿಕೆ ನೀಡಲಾಗುವುದು. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗುವುದು.

ಬೂಸ್ಟರ್ ಡೋಸ್ ಯಾರಿಗೆ?

  • ಕೋವಿನ್ ಪೋರ್ಟಲ್ ನೋಂದಣಿ ಪ್ರಕಾರ ಎರಡನೇ ಡೋಸ್ ಪಡೆದ 9 ತಿಂಗಳು ಅಥವಾ 39 ವಾರ ನಂತರ 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆಯಬಹುದು.
  • ಮೊದಲ ಹಾಗೂ ಎರಡನೇ ಡೋಸ್​ನಲ್ಲಿ ಪಡೆದ ಲಸಿಕೆಯನ್ನೇ (ಕೋವ್ಯಾಕ್ಸಿನ್/ ಕೋವಿಶೀಲ್ಡ್) ಮುನ್ನೆಚ್ಚರಿಕೆ ಡೋಸ್ ಆಗಿ ಪಡೆಯಲಿದ್ದಾರೆ.

ಪ್ರತಿ ಮಗು ಎರಡು ಡೋಸ್ ಲಸಿಕೆ ಪಡೆಯಬೇಕಿದ್ದು, ಮೊದಲ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ನೀಡಲಾಗುವುದು.

ಮಕ್ಕಳ ಲಸಿಕೆಗೆ ಮಾರ್ಗಸೂಚಿ

ನವದೆಹಲಿ: ಕರೊನಾ ಸೋಂಕು ತಡೆಯ ಲಸಿಕೆ ಅಭಿಯಾನದ ಇನ್ನೊಂದು ಹಂತವನ್ನು ಭಾರತ ಬುಧವಾರ ಪ್ರವೇಶಿಸಲಿದ್ದು, 12ರಿಂದ 14 ವಯೋಗುಂಪಿನ ಮಕ್ಕಳಿಗೆ ವ್ಯಾಕ್ಸಿನ್ ನೀಡಿಕೆ ಕಾರ್ಯಕ್ಕೆ ಚಾಲನೆ ಸಿಗಲಿದೆ. ಐದನೇ ಹಂತದ ಲಸಿಕೆ ಅಭಿಯಾನದ ಭಾಗದ ಈ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಈಗಾಗಲೇ ಜಾರಿಯಲ್ಲಿರುವ ಲಸಿಕಾ ಮಾರ್ಗಸೂಚಿ ಜತೆಗೆ 12-14 ವಯಸ್ಸಿನ ಮಕ್ಕಳ ಲಸಿಕೆಗೆ ಸಂಬಂಧಿಸಿದ ಹೊಸ ಅಂಶಗಳು ಮಾರ್ಗಸೂಚಿಯಲ್ಲಿ ಇದೆ. 12ರಿಂದ 13 ವರ್ಷ ಹಾಗೂ 13ರಿಂದ 14 ವರ್ಷ ಎಂದು ಈ ವಯೋಗುಂಪನ್ನು ವಿಂಗಡಿಸಲಾಗಿದ್ದು ದೇಶದಾದ್ಯಂತ ಕೊರ್ಬೆವ್ಯಾಕ್ಸ್ ಲಸಿಕೆಯನ್ನು ಹಾಕಲಾಗುತ್ತದೆ. ಬಯಾಲಾಜಿಕಲ್-ಇ ಕಂಪನಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರವೇ ಲಸಿಕೆ ಹಾಕಲಾಗುತ್ತದೆ. 2010ರ ಮಾರ್ಚ್ 15ರ ಮುನ್ನ ಹುಟ್ಟಿದವರು ಲಸಿಕೆ ಪಡೆಯಲು ಅರ್ಹರಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

180 ಕೋಟಿ ಡೋಸ್: ಇದುವರೆಗೆ ದೇಶದಾದ್ಯಂತ 180 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. ಶೇಕಡ 80ರಷ್ಟು ಅರ್ಹ ಫಲಾನುಭವಿಗಳು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ.

ಮುಖ್ಯಾಂಶ

  • ಕೋವಿನ್ ಪೋರ್ಟಲ್ ಮೂಲಕ ಲಸಿಕೆ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬಹುದು.
  • ನೇರವಾಗಿ ಲಸಿಕಾ ಕೇಂದ್ರಕ್ಕೆ ಹೋಗಿಯೂ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಅವಕಾಶವಿದೆ.
  • ಲಸಿಕೆ ನೀಡಿಕೆ ತಂಡಗಳು ಅನಾಫಿಲಾಕ್ಸಿಸ್ ಕಿಟ್​ಗಳನ್ನು ಹೊಂದಿರುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net