ಕಟ್ಟಕಡೆಯ ವ್ಯಕ್ತಿಗೂ ಆಹಾರ ಸಿಗಬೇಕು; ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ

food
Published on

ನವದೆಹಲಿ: ಖಾಲಿ ಹೊಟ್ಟೆಯಲ್ಲಿ ಯಾರೂ ಮಲಗದಂತೆ ನೋಡಿಕೊಳ್ಳುವುದು ನಮ್ಮ ಸಂಸ್ಕೃತಿ ಎಂದಿರುವ ಸುಪ್ರೀಂಕೋರ್ಟ್, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್​ಎಫ್​ಎಸ್​ಎ) ಅಡಿಯಲ್ಲಿ ಆಹಾರ ಧಾನ್ಯಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಮಂಗಳವಾರ ಹೇಳಿದೆ.

ಸ್ವಯಂಪ್ರೇರಿತವಾಗಿ ದಾಖಲಿಸಿ ಕೊಂಡಿರುವ ಸಾರ್ವ ಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಹಿಮಾ ಕೊಹ್ಲಿ ಅವರಿದ್ದ ದ್ವಿಸದಸ್ಯ ಪೀಠವು, ಇ - ಶ್ರಮ್ ಪೋರ್ಟಲ್​ನಲ್ಲಿ ನೋಂದಾಯಿಸಲಾದ ವಲಸೆ ಮತ್ತು ಅಸಂಘಟಿತ ವಲಯದ ಕಾರ್ವಿುಕರ ಸಂಖ್ಯೆ ಎಷ್ಟು ಎಂಬುದನ್ನು ಹೊಸದಾಗಿ ಸಲ್ಲಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತು. ಕೇಂದ್ರ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ನಾವು ಹೇಳುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಜನರಿಗೆ ಆಹಾರ ಧಾನ್ಯ ಪೂರೈಸುವ ಕೆಲಸವನ್ನು ಮಾಡಿದೆ. ಆದರೆ, ಆ ಕೆಲಸ ಮುಂದುವರಿಯಬೇಕು ಎಂದು ನ್ಯಾಯಪೀಠ ಹೇಳಿದೆ.

ಸಾಮಾಜಿಕ ಕಾರ್ಯಕರ್ತ ರಾದ ಅಂಜಲಿ ಭಾರದ್ವಾಜ್, ಹರ್ಷ್ ಮಂದೇರ್ ಮತ್ತು ಜಗದೀಪ್ ಚೋಕರ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ವಕೀಲ ಪ್ರಶಾಂತ್ ಭೂಷಣ್, 2011ರ ಜನಗಣತಿ ನಂತರ ದೇಶದ ಜನಸಂಖ್ಯೆ ಹೆಚ್ಚಾಗಿದೆ. ಮತ್ತು ಎನ್​ಎಫ್​ಎಸ್​ಎ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳ ಸಂಖ್ಯೆಯೂ ಹೆಚ್ಚಾಗಿದೆ. ಎನ್​ಎಫ್​ಎಸ್​ಎ ಅನ್ನು ಕಡ್ಡಾಯವಾಗಿ ಜಾರಿಗೊಳಿಸದಿದ್ದರೆ ಅರ್ಹ ಮತ್ತು ಅಗತ್ಯವುಳ್ಳ ಸಾಕಷ್ಟು ಫಲಾನುಭವಿಗಳು ಇದರ ಪ್ರಯೋಜನದಿಂದ ವಂಚಿತರಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಹಸಿವು ಸೂಚ್ಯಂಕದಲ್ಲಿ ಕುಸಿತ

ಇತ್ತೀಚಿನ ವರ್ಷಗಳಲ್ಲಿ ಜನರ ತಲಾ ಆದಾಯ ಹೆಚ್ಚುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಕುಸಿತ ಕಾಣುತ್ತಿದೆ ಎಂದು ವಕೀಲ ಪ್ರಶಾಂತ್ ಭೂಷಣ್ ಹೇಳಿದರು. ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿಯಾ, ಎನ್​ಎಫ್​ಎಸ್​ಎ ವ್ಯಾಪ್ತಿಗೆ 81.35 ಕೋಟಿ ಫಲಾನುಭವಿಗಳು ಒಳಪಡುತ್ತಾರೆ. ಇದು ಭಾರತದ ಮಟ್ಟಿಗೆ ಬಹು ದೊಡ್ಡ ಸಂಖ್ಯೆ. ಸರ್ಕಾರವು ಫಲಾನುಭವಿಗಳ ಸಂಖ್ಯೆಯನ್ನು 2011ರ ಜನಗಣತಿ ವೇಳೆ ಗುರುತಿಸಲಾದ ಸಂಖ್ಯೆಗೆ ಸೀಮಿತಗೊಳಿಸಿಲ್ಲ.

ಈ ಪಟ್ಟಿಗೆ ಮತ್ತಷ್ಟು ಮಂದಿಯನ್ನು ಸೇರ್ಪಡೆ ಮಾಡುತ್ತಲೇ ಇದೆ. ಹಾಗಾಗಿ ಪಟ್ಟಿ ಬೆಳೆಯುತ್ತಲೇ ಇದೆ ಎಂದು ಹೇಳಿದರು. ಆಗ ಮಧ್ಯಪ್ರವೇಶಿಸಿದ ಪ್ರಶಾಂತ್ ಭೂಷಣ್, ತಮ್ಮ ಪಾಲಿನ ಆಹಾರ ಧಾನ್ಯಗಳು ಖಾಲಿಯಾಗಿರುವುದಾಗಿ ಒಟ್ಟು 14 ರಾಜ್ಯಗಳು ಅಫಿಡವಿಟ್ ಸಲ್ಲಿಸಿವೆ ಎಂದು ಹೇಳಿದರು. ಕಳೆದ 8 ವರ್ಷಗಳಲ್ಲಿ ಜನರ ತಲಾ ಆದಾಯವು ಶೇ.33.4ರಷ್ಟು ಏರಿಕೆಯಾಗಿದೆ. ಇದರಿಂದ ಬಹುತೇಕ ಕುಟುಂಬಗಳು ಅಧಿಕ ಆದಾಯದ ವರ್ಗಕ್ಕೆ ಸೇರಿವೆ. ಈ ಕುಟುಂಬಗಳು 2013-14ರಲ್ಲಿದ್ದ ದಯನೀಯ ಸ್ಥಿತಿಯಲ್ಲಿ ಈಗ ಇಲ್ಲ ಎಂದು ಕೇಂದ್ರ ಸರ್ಕಾರ ತನ್ನ ಅಫಿಡವಿಟ್​ನಲ್ಲಿ ತಿಳಿಸಿದೆ. ಉಭಯ ಬಣದ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ನಿಗದಿಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net