

ನವದೆಹಲಿ: ಜಾಗತಿಕವಾಗಿ ಕರೊನಾ ವೈರಸ್ ಪೀಡಿತ ಪ್ರಮುಖ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 10ನೇ ಸ್ಥಾನದಲ್ಲಿದೆ. ಏಷ್ಯಾದಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ನಾಲ್ಕು ದಿನಗಳಿಂದ ಪ್ರತಿದಿನ 6 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗುತ್ತಿರುವ ಕಾರಣ ಕೇವಲ ವಾರದ ಅಂತರದಲ್ಲಿ ಪೆರು ಮತ್ತು ಇರಾನ್ ಹಿಂದಿಕ್ಕಿ ಭಾರತ 10ನೇ ಸ್ಥಾನದಲ್ಲಿದೆ. ಸದ್ಯದ ಟ್ರೆಂಡ್ನಂತೆ ಹೊಸ ಸೋಂಕು ಪ್ರಕರಣಗಳು ಮುಂದುವರಿದರೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ಟರ್ಕಿಯನ್ನು ಹಿಂದಿಕ್ಕಿ ಭಾರತ 9ನೇ ಸ್ಥಾನ ತಲುಪುವ ಸಾಧ್ಯತೆ ಇದೆ.
ವಿಶ್ವದಲ್ಲಿ ಕರೊನಾ ತೀವ್ರತೆಗೆ ಅತೀ ಹೆಚ್ಚು ಬಳಲಿರುವ ರಾಷ್ಟ್ರಗಳಲ್ಲಿ ಅಮೆರಿಕ ಮೊದಲನೇ ಸ್ಥಾನದಲ್ಲಿದ್ದು, ಅಲ್ಲಿ 16.86 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿವೆ. ನಂತರದಲ್ಲಿ ಬ್ರೆಜಿಲ್ನಲ್ಲಿ 3.65 ಲಕ್ಷ, ರಷ್ಯಾ 3.53 ಲಕ್ಷ, ಸ್ಪೇನ್ 2.82 ಲಕ್ಷ, ಬ್ರಿಟನ್ 2.59 ಲಕ್ಷ, ಇಟಲಿ 2.29 ಲಕ್ಷ, ಫ್ರಾನ್ಸ್ 1.82 ಲಕ್ಷ, ಜರ್ಮನಿ 1.80 ಲಕ್ಷ, ಟರ್ಕಿ 1.56 ಲಕ್ಷ ಸೋಂಕು ಪ್ರಕರಣಗಳನ್ನು ಹೊಂದಿವೆ. ಭಾರತ 1.44 ಲಕ್ಷ ಪ್ರಕರಣಗಳೊಂದಿಗೆ 10ನೇ ಸ್ಥಾನದಲ್ಲಿದೆ. ಜಾಗತಿಕವಾಗಿ ಕರೊನಾ ಸಾವಿನ ಪ್ರಮಾಣದಲ್ಲಿ ಭಾರತ 15ನೇ ಸ್ಥಾನದಲ್ಲಿದ್ದು, ಈವರೆಗೆ 4 ಸಾವಿರಕ್ಕೂ ಅಧಿಕ ಜನರು ದೇಶದಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಕೋಡೆಡ್ ಮೆಸೇಜ್ ಹೊತ್ತ ಪಾಕ್ನ ಗೂಢಚಾರಿ ಪಾರಿವಾಳ ವಶ!
ಮಹಾರಾಷ್ಟ್ರದಲ್ಲಿ 52,000 ಸೋಂಕು: ಮಹಾರಾಷ್ಟ್ರದಲ್ಲಿ ಸೋಂಕಿತರ ಪ್ರಮಾಣ 52,667ಕ್ಕೆ ಏರಿಕೆಯಾಗಿದೆ. ಈವರೆಗೆ 1,695 ಜನರು ಸಾವನ್ನಪ್ಪಿದ್ದು, ದೇಶದ ಒಟ್ಟು ಸೋಂಕು ಮತ್ತು ಸಾವಿನ ಪ್ರಕರಣದಲ್ಲಿ ಮಹಾರಾಷ್ಟ್ರ ಶೇ. 30ಕ್ಕೂ ಅಧಿಕ ಪಾಲು ಹೊಂದಿದೆ. ಈವರೆಗೆ ಅಲ್ಲಿ 15 ಸಾವಿರಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿದ್ದು, ಇನ್ನೂ 35 ಸಾವಿರ ಸಕ್ರಿಯ ಪ್ರಕರಣಗಳಿವೆ.
ಸಾವಿನ ಸಂಖ್ಯೆ ತುಸು ಇಳಿಕೆ: ಜಾಗತಿಕವಾಗಿ ಪ್ರತಿದಿನ ಕರೊನಾಗೆ ಬಲಿಯಾಗುವವರ ಸಂಖ್ಯೆ ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿ ಮೂರು ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ. ಭಾನುವಾರ ವಿಶ್ವಾದ್ಯಂತ 2,826 ಜನರು ಮೃತಪಟ್ಟಿದ್ದು, ಈ ಹಿಂದೆ ಮಾರ್ಚ್ 26ರಂದು 2,945 ಸಾವುಗಳು ವರದಿಯಾಗಿದ್ದವು.