

ನವದೆಹಲಿ: ಭಾರತದಲ್ಲಿ ಕರೊನಾ ಮಹಾಮಾರಿಯ ಮೂರನೇ ಅಲೆ ಸ್ಪೋಟಗೊಂಡಿದೆ. ಎಂಟು ತಿಂಗಳಲ್ಲೇ ಅತಿ ಹೆಚ್ಚು ನಿತ್ಯದ ಕೇಸ್ ದೃಢಪಟ್ಟಿವೆ. ಗುರುವಾರ ದೇಶದಲ್ಲಿ 3,17,532 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು 491 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಕರೊನಾ ಸೋಂಕಿತರ ಒಟ್ಟು ಸಂಖ್ಯೆ 3,82,18,773ಕ್ಕೆ ಏರಿದ್ದು ಸಾವಿನ ಒಟ್ಟು ಸಂಖ್ಯೆ 4,87,693ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳಲ್ಲಿಯೂ ಭಾರಿ ಹೆಚ್ಚಳವಾಗಿ 19,24,051ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಒಮಿಕ್ರಾನ್ ರೂಪಾಂತರಿಯ ಸಂಖ್ಯೆ 9,287ಕ್ಕೆ ಏರಿದೆ. ಗುರುವಾರ ದಾಖಲಾದ ಪ್ರಕರಣ 249 ದಿನಗಳಲ್ಲಿ ವರದಿಯಾದ ಅತಿ ಹೆಚ್ಚಿನ ನಿತ್ಯದ ಕೇಸ್ ಆಗಿದೆ. 2021ರ ಜೂನ್ 6ರಂದು ಕೊನೆಯ ಬಾರಿಗೆ ಒಂದು ಲಕ್ಷಕ್ಕಿಂತ ಹೆಚ್ಚು ನಿತ್ಯದ ಪ್ರಕರಣ ದಾಖಲಾಗಿತ್ತು. ಜನವರಿ 14ರಂದು 2,64,202 ಕೇಸ್ ಹಾಗೂ 315 ಮರಣ ದಾಖಲಾಗಿತ್ತು.
ಮಹಾರಾಷ್ಟ್ರದಲ್ಲಿ ಶಾಲೆ ಪುನಾರಂಭ: ಮುಂಬೈ ಸಹಿತ ಮಹಾರಾಷ್ಟ್ರದಲ್ಲಿ ಶಾಲೆಗಳು ಸೋಮವಾರ ಪುನಾರಂಭಗೊಳ್ಳಲಿವೆ. ಎಲ್ಲ ಶಾಲೆಗಳು ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ ಎಂದು ರಾಜ್ಯದ ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜನವರಿ 24ರಂದು 1ರಿಂದ 12ನೆ ತರಗತಿಗಳನ್ನು ಪುನಾರಂಭಗೊಳಿಸಲಾಗುತ್ತದೆ.
ಒಮಿಕ್ರಾನ್ನಿಂದ ಇಮ್ಯುನಿಟಿ ಹೆಚ್ಚದು: ಲಸಿಕೆ ಪಡೆಯದವರಲ್ಲಿ ಒಮಿಕ್ರಾನ್ ಸೋಂಕು ತಗಲಿದರೆ ಇತರ ರೂಪಾಂತರಿ ವಿರುದ್ಧ ರೋಗ ನಿರೋಧಕತೆ ಹೆಚ್ಚಿಸುವ ಶಕ್ತಿ (ಇಮ್ಯುನಿಟಿ) ತನ್ನಷ್ಟಕ್ಕೇ ಹೆಚ್ಚಾಗುವುದಿಲ್ಲ. ವ್ಯಾಕ್ಸಿನ್ ಪಡೆದವರಲ್ಲಿ ಈಗಿರುವ ಇಮ್ಯುನಿಟಿ ಹೆಚ್ಚಿಸಲು ಒಮಿಕ್ರಾನ್ ನೆರವಾಗುತ್ತದೆ ಎಂದು ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಧ್ಯಯನ ಹೇಳಿದೆ.
3 ರಾಜ್ಯಗಳಲ್ಲಿ ಏರಿಕೆ: ದೆಹಲಿ, ಮಹಾರಾಷ್ಟ್ರ ಮತ್ತು ಬಂಗಾಳದಲ್ಲಿ ಸೋಂಕಿನ ಹಾವಳಿ ವಿಪರೀತವಾಗಿದೆ. ದೆಹಲಿಯಲ್ಲಿ 13,785 ಕೇಸ್ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ 43,697 ಹಾಗೂ ಬಂಗಾಳದಲ್ಲಿ 11,447 ಜನರು ಹೊಸದಾಗಿ ಸೋಂಕಿತರಾಗಿದ್ದಾರೆ.
ನಿಮಿಷಗಳಲ್ಲಿ ಕರೊನಾ ಫಲಿತಾಂಶ: ಕರೊನಾವೈರಸ್ ಸೋಂಕನ್ನು ಶೇಕಡ 98 ನಿಖರತೆ ಯೊಂದಿಗೆ ಕೆಲವೇ ನಿಮಿಷಗಳಲ್ಲಿ ಪತ್ತೆ ಹಚ್ಚುವ ಸಾಧನವೊಂದನ್ನು ಸ್ಕಾಟ್ಲ್ಯಾಂಡ್ ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಎಕ್ಸ್-ರೇ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಎರಡನ್ನೂ ಈ ಟೆಸ್ಟ್ನಲ್ಲಿ ಬಳಸಲಾಗುತ್ತದೆ. ಪರೀಕ್ಷೆಯ ಫಲಿತಾಂಶ ಶೇಕಡ 98ರಷ್ಟು ನಿಖರವಾಗಿರುತ್ತದೆ ಎಂದು ಯುನಿವರ್ಸಿಟಿ ಆಫ್ ವೆಸ್ಟ್ ಆಫ್ ಸ್ಕಾಟ್ಲ್ಯಾಂಡ್ನ ವಿಜ್ಞಾನಿಗಳು ಹೇಳಿದ್ದಾರೆ.
ಕರೊನಾ ಜತೆ ಸಹಬಾಳ್ವೆ!: ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕರೊನಾ ವೈರಸ್ ಜತೆ ಬಾಳ್ವೆ ನಡೆಸುವುದು ಉತ್ತಮ ಎಂದು ಅನೇಕ ಐರೋಪ್ಯ ದೇಶಗಳು ಅಭಿಪ್ರಾಯಪಡುತ್ತಿವೆ. ಮಹಾಮಾರಿ ಮೊದಲು ಸ್ಪೋಟಗೊಂಡಾಗ ಮೂರು ತಿಂಗಳಿಗೂ ಹೆಚ್ಚು ಕಾಲದ ದೇಶವ್ಯಾಪಿ ಲಾಕ್ಡೌನ್ ವಿಧಿಸಿದ್ದು ಸ್ಪೇಯ್್ನ ಜನರು ಕ್ರಮೇಣ ಇದನ್ನು ತೀವ್ರವಾಗಿ ಪ್ರತಿರೋಧಿಸಿದರೂ ಸೋಂಕು ನಿಯಂತ್ರಿಸಲು ಇಂಥ ಕಠಿಣ ಕ್ರಮಗಳೇ ಕಾರಣ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರು. ಇದೀಗ ಆರ್ಥಿಕತೆಗೆ ಹಾಗೂ ಜೀವನೋಪಾಯಕ್ಕೆ ಮತ್ತೆ ಹಾನಿಯಾಗದ ರೀತಿಯಲ್ಲಿ ವೈರಸ್ ಜೊತೆಜೊತೆಯಲ್ಲಿ ಬದುಕು ಸಾಗಿಸಲು ಅಲ್ಲಿನ ಜನರು ನಿರ್ಧರಿಸಿದ್ದಾರೆ.
ಬ್ಯಾಂಕ್ ಸಿಇಟಿ ಮುಂದಕ್ಕೆ?: ಸರ್ಕಾರಿ ಮತ್ತು ಸಾರ್ವಜನಿಕ ರಂಗದ ಬ್ಯಾಂಕ್ಗಳ ಉದ್ಯೋಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ಕರೊನಾ ಅಬ್ಬರದ ಕಾರಣ ಮತ್ತೆ ಮುಂದಕ್ಕೆ ಹೋಗುವ ಸಂಭವವಿದೆ.