

ಎಚ್.ಡಿ.ಕೋಟೆ: ಭಾರತ ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ದೇಶ ಎನ್ನುವುದೇ ದೊಡ್ಡ ಹೆಮ್ಮೆ ಎಂದು ತಹಸೀಲ್ದಾರ್ ಶ್ರೀನಿವಾಸ್ ಅಭಿಪ್ರಾಯ ಪಟ್ಟರು.
ಪಟ್ಟಣದ ತಾಲೂಕು ಆಡಳಿತ ಭವನದ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಜಾಸತ್ತಾತ್ಮಕ ಸಂಪ್ರದಾಯಗಳು, ಮುಕ್ತ ಮತ್ತು ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸುವ ಮೂಲಕ ನಮ್ಮ ದೇಶದ ಘನತೆಯನ್ನು ಎತ್ತಿ ಹಿಡಿಯಲಾಗಿದೆ. ಹಲವು ಜಾತಿ, ಧರ್ಮ, ಪಂಗಡ, ಭಾಷೆ ಇದ್ದರು ಕೂಡ ಯಾವುದೇ ಪ್ರೇರಣೆಗೆ ಒಳಗಾಗದೆ ಮತದಾನ ಮಾಡುವ ಮೂಲಕ ನಮ್ಮ ಘನತೆಯನ್ನು ನಾವು ಎತ್ತಿ ಹಿಡಿದ್ದೇವೆ ಎಂದು ಹೇಳಿದರು.
ಪಟ್ಟಣದ ಬಾಲಕಿಯರ ಪ್ರೌಢಶಾಲೆ ಶಿಕ್ಷಕ ಎಚ್.ಎಸ್.ಪ್ರಕಾಶ್ ಮಾತನಾಡಿ, ಜಗತ್ತಿನಲ್ಲೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಯಾವುದೇ ಅಹಿತಕರ ಘಟನೆ ನಡೆಯದೆ ದೇಶದಲ್ಲಿ ಸದಾ ಶಾಂತಿಯುತ ಮತದಾನವಾಗುತ್ತಿದೆ. ಈವರೆಗೆ ಯಾವುದೇ ಚುನಾವಣೆಗಳಲ್ಲಿ ಶೇ.100 ಮತದಾನ ನಡೆದಿಲ್ಲ. ಇದಕ್ಕೆ ನಮ್ಮ ಕರ್ತವ್ಯವನ್ನು ನಾವು ಮರೆಯುತ್ತಿರುವುದು ಕಾರಣವೂ ಆಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಿಂದಿನ ಚುನಾವಣೆಗಳಲ್ಲಿ ಮತಗಟ್ಟೆ ಅಧಿಕಾರಿಗಳಾಗಿ ಉತ್ತಮವಾಗಿ ಕಾರ್ಯನಿವರ್ಹಿಸಿದ ಯಮುನಾ, ಗೀತಾರಾಣಿ ಅವರನ್ನು ಅಭಿನಂದಿಸಲಾಯಿತು. ಮಕ್ಕಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಇಒ ಧರಣೀಶ್, ಬಿಇಒ ಮರಯ್ಯ, ಗ್ರೇಡ್ 2 ತಹಸೀಲ್ದಾರ್ ಸಣ್ಣರಾಮಪ್ಪ, ಸಿದ್ದರಾಜು, ರಾಮಪ್ರಸಾದ್, ರಾಮಸ್ವಾಮಿ, ಮಹಾದೇವಯ್ಯ, ಮಹೇಶ್, ಕುಮಾರ್, ಸಿದ್ದರಾಜು ಇದ್ದರು.