

ಜೈಪುರ: ಸನಾತನ ಧರ್ಮದ ಕುರಿತು ಹೇಳಿಕೆ ನೀಡುವ ಮೂಲಕ ವಿರೋಧ ಪಕ್ಷದ ನಾಯಕರು ತಮ್ಮ ಹಿಂದೂ ವಿರೋಧಿ ನಡೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ವೋಟ್ ಬ್ಯಾಂಕ್ ಹಾಗೂ ಓಲೈಕೆ ರಾಜಕಾರಣಕ್ಕಾಗಿ ಇವರು ಯಾವ ಮಟ್ಟಕ್ಕೆ ಇಳಿಯುತ್ತಾರೆ ಎಂಬುದಕ್ಕೆ ಇದು ಪ್ರಮುಖ ಉದಾಹರಣೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಆರೋಪಿಸಿದ್ದಾರೆ.
ವರ್ಷಾಂತ್ಯದಲ್ಲಿ ವಿಧಾನಸಬೆ ಚುನಾವಣೆ ನಡೆಯಲಿರುವ ರಾಜಸ್ಥಾನದ ಡುಂಗರ್ಪುರದಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಷಾ ತಮಿಳುನಾಡು ಸಚಿವ ಉದಯ್ನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ವಿಪಕ್ಷಗಳ ಒಕ್ಕೂಟ I.N.D.I.A ವಿರುದ್ಧ ಹರಿಹಾಯ್ದಿದ್ದಾರೆ.
ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ತಮಿಳುನಾಡು ಸಿಎಂ ಸೇರಿದಂತೆ ಡಿಎಂಕೆ ಪಕ್ಷದ ನಾಯಕರೆಲ್ಲರೂ ಸರಣಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕ್ಕಾರಣಕ್ಕಾಗಿ ಸನಾತನ ಧರ್ಮದ ವಿರುದ್ಧ ಮಾತನಾಡುವ ಮೂಲಕ ಇವರು ಅಪಮಾನ ಎಸಗಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ನೀಡುವವವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ.
ವಿಪಕ್ಷಗಳ ಒಕ್ಕೂಟ I.N.D.I.Aವನ್ನು ಘಮಂಡಿಯಾ ಘಟಬಂಧನ್ ಎಂದಿರುವ ಅವರು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇವರ ಮೈತ್ರಿ ಯಾವ ಮಟ್ಟಿಗೆ ಹೋಗುತ್ತದೆ ಎಂದರೆ ಸನಾತನ ಧರ್ಮ ಕೂಡ ಇವರ ಪಾಲಿಗೆ ಕೇವಲವಾಗಿ ಬಿಟ್ಟಿದೆ. ವೋಟ್ ಬ್ಯಾಂಕ್ ಹಾಗೂ ಓಲೈಕೆ ರಾಜಕಾರಣಕ್ಕಾಗಿ ಇವರು ಯಾವ ಮಟ್ಟಕ್ಕೆ ಇಳಿಯುತ್ತಾರೆ ಎಂಬುದಕ್ಕೆ ಇದು ಪ್ರಮುಖ ಉದಾಹರಣೆಯಾಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಗೆದ್ದರೆ ಸನಾತನ ಧರ್ಮ ಉಳಿಯಲಿದೆ. ಸನಾತನವು ಜನರ ಹೃದಯದಲ್ಲಿ ನೆಲೆಯೂರಿದ್ದು, ಸಂವಿಧಾನದ ಆಧಾರದಲ್ಲಿ ದೇಶ ಮುನ್ನಡೆಯಲಿದೆ ಎಂದು ಕೇಂದ್ರ ಸಚಿವ ಅಮಿತ್ ಷಾ ವಿಪಕ್ಷಗಳ ಒಕ್ಕೂಟದ ವಿರುದ್ಧ ರಾಜಸ್ಥಾನದ ಡುಂಗರ್ಪುರದಲ್ಲಿ ವಾಗ್ದಾಳಿ ನಡೆಸಿದ್ದಾರೆ.