ಕಳ್ಳತನ ಶಂಕೆ; ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ

Dalit Man Torture
Published on

ಹೈದರಾಬಾದ್​: ತಮ್ಮ ಮನೆಯಲ್ಲಿ ಸಾಕಲಾಗಿದ್ದ ಮೇಕೆಗಳನ್ನು ಕದ್ದಿದ್ದಾರೆ ಎಂದು ಶಂಕೆಯ ಮೇರೆಗೆ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಯುವಕರನ್ನು ಅಮಾನುಷವಾಗಿ ಥಳಿಸಿರುವ ಘಟನೆ ತೆಲಂಗಾಣದ ಮಂಚಿರಿಯಾಲ್​ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಪೊಲೀಸರು ಕೊಮುರಾಜುಲು ರಾಮುಲು, ಸ್ವರೂಪ ಮತ್ತು ಶ್ರೀನಿವಾಸ್​ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್​ ಅಧಿಕಾರಿಯೊಬ್ಬರು ಸಂತ್ರಸ್ತರಾದ ತೇಜ ಹಾಗೂ ಚಿಲುಮುಲ ಕಿರಣ್​ ಇಬ್ಬರು ಕುರಿಗಾಹಿ ಕೆಲಸ ಮಾಡುತ್ತಿದ್ದು, ರಾಮುಲು ಅವರು ಸಾಕಿದ್ದ ಮೇಕೆ ಕಾಣೆಯಾಗಿದೆ. ಶಂಕೆಯ ಮೇರೆಗೆ ತೇಜ ಹಾಗೂ ಕಿರಣ್​ನನ್ನು ತಮ್ಮ ಮನೆಗೆ ಕರೆಸಿ ಏಕಾಏಕಿ ಅವರನ್ನು ದನದ ಕೊಟ್ಟಿಗೆಯಲ್ಲಿ ಉಲ್ಟಾ ನೇತು ಹಾಕಿ ರಾಮುಲು ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಬಂಧಿತ ಆರೋಪಿಗಳು ಹಲ್ಲೆ ನಡೆಸುವ ವೇಳೆ ಸಂತ್ರಸ್ತರಿಬ್ಬರ ಮೇಲೆ ಖಾರದಪುಡಿ ಎರಚಿ ಮೆಣಸಿನಕಾಯಿಯ ಹೊಗೆಯನ್ನು ಹಾಕಿ ನಿಜವನ್ನು ಒಪ್ಪಿಕೊಳ್ಳುವಂತೆ ಬಲವಂತ ಮಾಡಿದ್ದಾರೆ. ಇದಲ್ಲದೆ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡಿ ವಿಕೃತಿ ಮೆರೆದಿದ್ದಾರೆ.

ಘಟನೆ ಸಂಬಂಧ ಬಂಧಿತ ಆರೋಪಿಗಳ ವಿರುದ್ಧ ಜಾತಿ ನಿಂದನೆ ಹಾಗೂ ಕೊಲೆ ಯತ್ನ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಚಾರ್ಜ್​ಶೀಟ್​ ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸ್ಥಳೀಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ಧಾರೆ.

ಹಲ್ಲೆ ಪ್ರಕರಣವು ತೆಲಂಗಾಣ ರಾಜಕೀಯದಲ್ಲಿ ಗದ್ದಲವನ್ನು ಎಬ್ಬಿಸಿದ್ದು, ಆಡಳಿತರೂಢ ಬಿಆರ್​ಎಸ್​ ಹಾಗೂ ವಿಪಕ್ಷಗಳಾದ ಬಿಜೆಪಿ, ಕಾಂಗ್ರೆಸ್​ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ. ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ಈ ಪ್ರಕರಣ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net