ಅಮೃತ ಸರೋವರ ಬಳಿ ಸ್ವಾತಂತ್ರ್ಯೋತ್ಸವ: ರಾಜ್ಯದ 3,552 ಕೆರೆಗಳ ಅಭಿವೃದ್ಧಿ; ಮೋದಿ ಚಾಲನೆ ನೀಡಿದ್ದ ಯೋಜನೆ

Amrutha Sarovara
Published on

| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ 
ಸ್ವಾತಂತ್ರ್ಯೊತ್ಸವ ಅಮೃತ ಮಹೋತ್ಸವದ ಅಂಗವಾಗಿ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದ ‘ಅಮೃತ ಸರೋವರ’ ದೇಶದ ಕೆರೆಗಳ ಅಭಿವೃದ್ಧಿ ಯೋಜನೆಯಡಿ, ಈಗಾಗಲೆ ಪ್ರಗತಿಕಂಡ ಕೆರೆಗಳ ಗ್ರಾಮಗಳಲ್ಲಿ ಆ.15ರಂದು ‘ತಿರಂಗಾಯಾತ್ರೆ’ ಹಮ್ಮಿಕೊಳ್ಳಲಾಗಿದೆ. ಕೆರೆಗಳ ಆವರಣದಲ್ಲಿ 75 ವಿವಿಧ ಸಸಿಗಳನ್ನು ನೆಟ್ಟು ‘ಅಮೃತ ವನ’ವನ್ನು ಅಭಿವೃದ್ಧಿಪಡಿಸುವ ‘ವಸುಧಾವಂದನ’ಸಹಿತ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ನರೇಗಾದಡಿ ‘ಅಮೃತ ಸರೋವರ’ ಅಭಿವೃದ್ಧಿಗೆಂದು ಕಳೆದ ವರ್ಷ ರಾಜ್ಯದಲ್ಲಿ 6,776 ಕೆರೆಗಳನ್ನು ಗುರುತಿಸಲಾಗಿತ್ತು. ಈ ಪೈಕಿ 5,284 ಕೆರೆಗಳಲ್ಲಿ ಹೂಳೆತ್ತುವುದು, ಏರಿ ದುರಸ್ತಿ, ಒತ್ತುವರಿ ತೆರವು ಮತ್ತಿತರ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಸದ್ಯಕ್ಕೆ 3,552 ಕೆರೆಗಳ ಅಭಿವೃದ್ಧಿ ಪೂರ್ಣಗೊಂಡಿದೆ.

ಪ್ರತಿ ಜಿಲ್ಲೆಗೆ ಕನಿಷ್ಠ 75 ಕೆರೆಗಳಂತೆ 2 ವರ್ಷಗಳಲ್ಲಿ 150 ಕೆರೆಗಳ ಅಭಿವೃದ್ಧಿ ಗುರಿ ಆಯಾ ಜಿಲ್ಲಾ ಪಂಚಾಯಿತಿ ಎದುರು ಇತ್ತು. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಅಭಿವೃದ್ಧಿ ಹೊಂದಿದ ಕೆರೆಗಳ ಬಳಿ, ಸ್ವಾತಂತ್ರ್ಯ ಯೋಧರು, ಯೋಧರು, ನಿವೃತ್ತ ಯೋಧರು ಅಥವಾ ಅವರ ಕುಟುಂಬಸ್ಥರು, ಪದ್ಮ ಪುರಸ್ಕೃತರು ಅಥವಾ ಗ್ರಾಮದ ಹಿರಿಯರೊಬ್ಬರಿಂದ ಧ್ವಜಾರೋಹಣ ನೆರವೇರಿಸಲಾಗುತ್ತದೆ.

ಗ್ರಾಮದಲ್ಲಿ ತಿರಂಗಾಯಾತ್ರೆ, ಸ್ವಚ್ಛತೆ ಪ್ರತಿಜ್ಞೆ, ಅರಣ್ಯೀಕರಣ, ಮಕ್ಕಳಿಗೆ ವಿವಿಧ ಸ್ಪರ್ಧೆ, ಗ್ರಾಮೀಣ ಆಟಗಳ ಆಯೋಜನೆ, ಕೆರೆ ನೀರಿನ ಬಳಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಬಳಕೆದಾರರ ಗುಂಪಿಗೆ ಹಕ್ಕುಗಳ ಪ್ರಮಾಣಪತ್ರ ವಿತರಿಸಲಾಗುತ್ತದೆ.

ಇದಲ್ಲದೆ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರರ ಶಿಲಾಫಲಕ ನಿರ್ವಣ, ವಸುಧವಂದನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಸೂಚಿಸಿದೆ.

ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಲ್ಲ ಜಿಪಂ ಸಿಇಒಗಳಿಗೆ ನಿರ್ದೇಶನ ನೀಡಿದೆ. ದೇಶದ ವೀರರಿಗೆ ಗೌರವ ಸಲ್ಲಿಸುವ ‘ನಮ್ಮ ಮಣ್ಣು-ನಮ್ಮ ದೇಶ’ ಕಾರ್ಯಕ್ರಮ ಹಾಗೂ ನರೇಗಾ ಯೋಜನೆ ಕುರಿತಂತೆ ಆ.15ವರೆಗೆ ಪ್ರಚಾರ ನಡೆಸಲಾಗುತ್ತಿದ್ದು, ಇದಕ್ಕಾಗಿ ತಾಲೂಕಿಗೆ ಒಂದರಂತೆ ಪ್ರಚಾರ ವಾಹನಗಳನ್ನು ಒದಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net