ಟ್ರುಡೊ ತಲೆದಂಡಕ್ಕೆ ಹೆಚ್ಚಿದ ಒತ್ತಡ; ಪಕ್ಷದ ಆಂತರಿಕ ಸಭೆಯಲ್ಲಿ ನಿಲುವಳಿ

Canada PM
Published on

ಒಟ್ಟಾವಾ: ಭಾರತ ವಿರೋಧಿ ನಿಲುವು, ಖಲಿಸ್ತಾನಿ ಉಗ್ರರ ಜತೆಗಿನ ಮೈತ್ರಿ ಹಿನ್ನೆಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ಸ್ವಪಕ್ಷವಾದ ಲಿಬರಲ್ ಪಾರ್ಟಿ ಸಂಸದರೇ ರಾಜೀನಾಮೆಗೆ ಆಗ್ರಹಿಸಿ ದ್ದಾರೆ. ಬುಧವಾರ ನಡೆದ ಪಕ್ಷದ ಆಂತರಿಕ ಸಭೆಯಲ್ಲಿ ಭಿನ್ನಮತೀಯ ಸಂಸದರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆನಡಾದ ಹೌಸ್ ಆಫ್ ಕಾಮನ್ಸ್ ಅಧಿವೇಶನ ನಡೆಯುತ್ತಿದ್ದಾಗ ಸಾಪ್ತಾಹಿಕ ಕಾಕಸ್ ಸಭೆಗಳು ನಡೆಯುತ್ತವೆ. ಈ ವೇಳೆ ಸಂಸದರು ತಮ್ಮ ಕಳವಳಗಳು ಮತ್ತು ಹತಾಶೆಗಳನ್ನು ಹೊರಹಾಕಿದರು. ಪಕ್ಷದೊಳಗೆ ಅಸಮಾಧಾನ ಸ್ಪೋಟಕ್ಕೆ ಈ ಸಭೆ ಸಾಕ್ಷಿಯಾಯಿತು. ಅ. 28ರೊಳಗೆ ರಾಜೀನಾಮೆ ನೀಡುವಂತೆ ಭಿನ್ನಮತೀಯ ಲಿಬರಲ್ ಸಂಸದರು ಗಡುವು ನೀಡಿದ್ದಾರೆ. ಟ್ರುಡೊ ರಾಜೀನಾಮೆಗೆ ಆಗ್ರಹಿಸಿ 24 ಸಂಸದರು ಸಂಸದರು ಸಹಿ ಮಾಡಿರುವ ನಿಲುವಳಿ ಪತ್ರವನ್ನೂ ಸಭೆಯಲ್ಲಿ ಮಂಡನೆ ಮಾಡಲಾಯಿತು. ಮೂರು ಗಂಟೆಗಳ ಕಾಲ ಈ ಸಭೆ ನಡೆದಿದ್ದು, ಸುಮಾರು 20 ಮಂದಿ ಟ್ರುಡೊ ವಿರುದ್ಧ ಭಾಷಣ ಮಾಡಿದರು. ಮುಂದಿನ ಸಾರ್ವತ್ರಿಕ ಚುನಾವಣೆಗೂ ಮುನ್ನ ಟ್ರುಡೊ ಹುದ್ದೆಯಿಂದ ಕೆಳಗಿಳಿಯಬೇಕು. ಚುನಾವಣಾ ಪ್ರಕ್ರಿಯೆಯಿಂದಲೂ ದೂರ ಇರಬೇಕೆಂದು ಆಗ್ರಹಿಸಿದರು.

ಖಲಿಸ್ತಾನಿಗಳಿಗೆ ಅಪರಾಧವೇ ಉದ್ಯಮ!: ಕೆನಡಾದ ದೇಶ ಭಾರತದ ಬೆನ್ನಿಗೆ ಚೂರಿ ಇರಿದು, ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದೆ ಎಂದು ಭಾರತದ ಹೈಕಮಿಷನರ್ ಸಂಜಯ್ ವರ್ವ ಹೇಳಿದ್ದಾರೆ. ಕೆನಡಾದಲ್ಲಿ ಭಾರತೀಯ ರಾಯಭಾರಿಯಾಗಿದ್ದ ಅವರು, ಎರಡೂ ದೇಶಗಳ ನಡುವೆ ಘರ್ಷಣೆ ತೀವ್ರಗೊಳ್ಳುತ್ತಿದ್ದಂತೆ ಭಾರತಕ್ಕೆ ವಾಪಸಾಗಿದ್ದರು. ಬೆರಳೆಣಿಕೆಯಷ್ಟು ಖಲಿಸ್ತಾನಿ ಬೆಂಬಲಿಗರು ಅಪರಾಧವನ್ನೇ ಉದ್ಯಮವನ್ನಾಗಿ ಪರಿವರ್ತಿಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಮತ್ತು ಮಾನವ ಕಳ್ಳಸಾಗಣೆಯಂತಹ ಹಲವಾರು ಚಟುವಟಿಕೆಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಆದರೆ ಕೆನಡಾದ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡಿದ್ದಾರೆ. ಸ್ಥಳೀಯ ರಾಜಕಾರಣಿಗಳಿಗೆ ಇವರು ಮತ ಬ್ಯಾಂಕ್ ಆಗಿರುವ ಕಾರಣ ಇವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಅವರು ತಿಳಿಸಿದ್ದಾರೆ. ಖಲಿಸ್ತಾನಿಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಾರೆ. ಕೆನಡಾದಲ್ಲಿ ಸುಮಾರು 8 ಲಕ್ಷ ಸಿಖ್ ಜನಸಂಖ್ಯೆ ಇದೆ. ಇದರಲ್ಲಿ ಖಲಿಸ್ತಾನಿಗಳು 10,000 ಸಂಖ್ಯೆಯಲ್ಲಿ ಇರಬಹುದು. ಇದು ಒಟ್ಟು ಸಿಖ್ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ತೀರಾ ಕಡಿಮೆ. ಆದರೆ ಸಾಮಾನ್ಯ ಸಿಖ್ಖರನ್ನು ಬೆದರಿಸಿ, ತಮಗೆ ಬೆಂಬಲ ನೀಡುವಂತೆ ಅವರು ನೋಡಿಕೊಳ್ಳುತ್ತಾರೆ. ಖಲಿಸ್ತಾನ್ ಹೆಸರಿನಲ್ಲಿ ಮಾನವ ಕಳ್ಳಸಾಗಣೆ, ಮಾದಕವಸ್ತು ಕಳ್ಳಸಾಗಣೆ, ವೇಶ್ಯಾವಾಟಿಕೆಗಳನ್ನೂ ಅವರು ನಡೆಸುತ್ತಾರೆ. ಗುರುದ್ವಾರಗಳ ಮೂಲಕ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಇದನ್ನು ಅಪರಾಧ ಕೃತ್ಯಗಳಿಗೆ ಬಳಕೆ ಮಾಡುತ್ತಾರೆ.

ರಾಜೀನಾಮೆ ಒತ್ತಡ ಏಕೆ?

  • ಟ್ರುಡೊ ನಾಯಕತ್ವ ಮತ್ತು ನೀತಿಗಳ ವಿರುದ್ಧ ದೇಶದಲ್ಲಿ ಅಸಮಾಧಾನ ಹೆಚ್ಚಳ
  • ಆರ್ಥಿಕ ಬಿಕ್ಕಟ್ಟು, ಹೆಚ್ಚುತ್ತಿರುವ ಬಡ್ಡಿದರ ಕಾರಣ ಅವರ ಆರ್ಥಿಕ ನೀತಿಗಳ ಬಗ್ಗೆ ಟೀಕೆ
  • ಮನೆ, ಆಸ್ತಿ ಬೆಲೆ ಏರಿಕೆ ಕಾರಣ ಅನೇಕ ಕೆನಡಿಯನ್ನರು ಮನೆ ಖರೀದಿಗೆ ಹೆಣಗಾಡುತ್ತಿ ದ್ದಾರೆ. ವಸತಿ ಸಮಸ್ಯೆ ತಲೆದೋರಿದೆ.
  • ಟ್ರೂಡೊ ಜನಪ್ರಿಯತೆ ಕ್ಷೀಣಿಸುತ್ತಿದ್ದು, ಅವರ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆಂಬ ಆರೋಪ
  • ಈ ಸಂಗತಿ ಮುಂದಿನ ಚುನಾವಣೆ ವೇಳೆ ಸೋಲಿಗೆ ಕಾರಣವಾಗಬಹುದು ಎಂಬ ಭೀತಿ.

ಭಾರತ ವಿರೋಧಿ ನಿಲುವು

  • ಖಲಿಸ್ತಾನಿ ಬೆಂಬಲಿಗ ನಿಜ್ಜರ್ ಹತ್ಯೆಯ ಹಿಂದೆ ಭಾರತ ಇದೆ ಎಂದು ಆರೋಪ
  • 2018 ರಲ್ಲಿ ಟೊರೊಂಟೊದಲ್ಲಿ ನಡೆದ ಟ್ರುಡೊ ಈವೆಂಟ್​ನಲ್ಲಿ ಖಲಿಸ್ತಾನಿ ಧ್ವಜ ಹಾರಾಟ
  • ಪ್ರತ್ಯೇಕತಾವಾದಿ ಗುಂಪುಗಳ ಜತೆ ನಿಕಟ ಸಂಬಂಧ
  • 2018ರ ಭಾರತ ಭೇಟಿಯ ಸಮಯದಲ್ಲಿ ಕೆಲವು ಖಲಿಸ್ತಾನಿ ನಾಯಕರ ಜತೆ ಸಭೆ
  • ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಆಂದೋಲನಕ್ಕೆ ಬೆಂಬಲ ಸರ್ಕಾರದಿಂದ ಧನಸಹಾಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net