ಭಾರತೀಯ ನೌಕಾಪಡೆಯಲ್ಲಿ ಹೆಚ್ಚಿದ ಸ್ವದೇಶಿ ಬಲ; ಪ್ರಧಾನಿಯಿಂದ ಜಲಾಂತರ್ಗಾಮಿ, 2 ಸಮರ ನೌಕೆ ಲೋಕಾರ್ಪಣೆ

Indian Navy
Published on

ಮುಂಬೈ: ಸ್ವದೇಶಿ ನಿರ್ವಿುತ ಎರಡು ಯುದ್ಧ ನೌಕೆಗಳು ಮತ್ತು ಒಂದು ಜಲಾಂತರ್ಗಾಮಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಿದರು. ಮುಂಬೈನ ನೇವಲ್ ಡಾಕ್​ಯಾರ್ಡ್​ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಐಎನ್​ಎಸ್ ಸೂರತ್, ಐಎನ್​ಎಸ್ ನೀಲಗಿರಿ ನೌಕೆಗಳು ಮತ್ತು ಐಎನ್​ಎಸ್ ವಾಘಶೀರ್ ಜಲಾಂತರ್ಗಾಮಿಯನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಮೋದಿ ‘ಭಾರತ ಪ್ರಮುಖ ಕಡಲ ಶಕ್ತಿಯಾಗಿ ಬೆಳೆಯುತ್ತಿದ್ದು, ಪ್ರಪಂಚದಾದ್ಯಂತ ವಿಶ್ವಾಸಾರ್ಹ ಪಾಲುದಾರನಾಗಿ ಗುರುತಿಸಿಕೊಂಡಿದೆ. ಇಂಡೋ- ಫೆಸಿಫಿಕ್ ಪ್ರದೇಶದಲ್ಲಿ ಭಾರತ ಸದಾ ತನ್ನ ನೆರವು ನೀಡುತ್ತ ಬಂದಿದೆ. ಸಮುದ್ರವನ್ನು ಡ್ರಗ್ಸ್, ಶಸ್ತ್ರಾಸ್ತ್ರಗಳು ಮತ್ತು ಭಯೋತ್ಪಾದನೆ ಮುಕ್ತವಾಗಿಸಲು ಜಾಗತಿಕ ಪಾಲುದಾರರಾಗಬೇಕಿದೆ ಎಂದು ಅವರು ತಿಳಿಸಿದರು.

‘ಆತ್ಮನಿರ್ಭರ ಭಾರತ’ ದೇಶವನ್ನು ಸಶಕ್ತ ಮತ್ತು ಸ್ವಾವಲಂಬಿ ಯಾಗಿಸುತ್ತಿದೆ. ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ವಿುತ ಒಂದು ಡಿಸ್ಟ್ರಾಯರ್, ಒಂದು ಯುದ್ಧ ನೌಕೆ ಮತ್ತು ಒಂದು ಜಲಾಂತರ್ಗಾಮಿ ಯನ್ನು ಒಟ್ಟಿಗೆ ಲೋಕಾರ್ಪಣೆ ಮಾಡಲಾಗುತ್ತಿದೆ. ಕಳೆದ 10 ವರ್ಷದಲ್ಲಿ 33 ಯುದ್ಧ ನೌಕೆಗಳು ಮತ್ತು 7 ಜಲಾಂತರ್ಗಾಮಿಗಳನ್ನು ನೌಕಾಪಡೆಗೆ ಸೇರ್ಪಡೆಯಾಗಿವೆ. ಭಾರತದ ರಕ್ಷಣಾ ಉತ್ಪಾದನೆ ಮೌಲ್ಯ 1.25 ಲಕ್ಷ ಕೋಟಿ ರೂ. ಮೀರಿದೆ ಮತ್ತು 100 ಕ್ಕೂ ಹೆಚ್ಚು ದೇಶಗಳಿಗೆ ಇವುಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ಮೋದಿ ಮಾಹಿತಿ ನೀಡಿದರು.

ಐಎನ್​ಎಸ್ ನೀಲಗಿರಿ: ಪ್ರಾಜೆಕ್ಟ್ 17 ಎ ಸ್ಟೆಲ್ತ್ ಫ್ರಿಗೇಟ್ ವರ್ಗದ ಹಡಗು, ಅತ್ಯಾಧುನಿಕ ಸ್ಟೆಲ್ತ್ ತಂತ್ರಜ್ಞಾನ ಹೊಂದಿದೆ, ರೇಡಾರ್​ನಲ್ಲಿ ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಿಲ್ಲ. ವಿವಿಧ ಬಗೆಯ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಸಾಮರ್ಥ್ಯ ಹೊಂದಿರುವ ಸಮರ ನೌಕೆ.

Indian Navy 1

ಐಎನ್​ಎಸ್ ವಾಘಶೀರ್: ಸ್ಕಾರ್ಪಿನ್ ವರ್ಗದ ಪ್ರಾಜೆಕ್ಟ್ 75 ರ 6ನೇ ಮತ್ತು ಅಂತಿಮ ಜಲಾಂತರ್ಗಾಮಿ. ಡೀಸೆಲ್ ಎಲೆಕ್ಟ್ರಿಕ್ ಜಲಾಂತರ್ಗಾಮಿಯಾಗಿರುವ ಇದು ವಿವಿದೋದ್ಧೇಶ ಕಾರ್ಯಾಚರಣೆಗೆ ಸೂಕ್ತವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ನೌಕೆ ಭವಿಷ್ಯದಲ್ಲಿ ಮೇಲ್ದರ್ಜೆರಿಸಲು ಸೂಕ್ತವಾದ ವ್ಯವಸ್ಥೆ ಹೊಂದಿದೆ.

ಐಎನ್​ಎಸ್ ಸೂರತ್: ಪ್ರಾಜೆಕ್ಟ್ 15 ಬಿ ಸ್ಟೆಲ್ತ್ ಡಿಸ್ಟ್ರಾಯರ್ ವರ್ಗಕ್ಕೆ ಸೇರಿದ್ದು, ಕೋಲ್ಕತ್ತ ವರ್ಗದ ಡಿಸ್ಟ್ರಾಯರ್ ನಂತರ ಅಭಿವೃದ್ಧಿಪಡಿಸಿದ ನೌಕೆ. ಈ ನೌಕೆಯಲ್ಲಿ ಎಐ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದ್ದು, ಇದರಲ್ಲಿ ಬಳಕೆಯಾಗಿರುವ ಶೇ.75ರಷ್ಟು ಸಾಧನಗಳು ಸ್ವದೇಶಿ ನಿರ್ವಿುತ.

ಸೇನಾ ದಿನ ಪರೇಡ್​ನಲ್ಲಿ ರೋಬೋ ಶ್ವಾನ ಕಸರತ್ತು: ಬೈಕ್​ಗಳ ಮೂಲಕ ರೋಮಾಂಚಕ ಕಸರತ್ತಿಗೆ ಹೆಸರಾಗಿರುವ ಭಾರತೀಯ ಸೇನಾಪಡೆ ಈಗ ರೋಬೋ ಶ್ವಾನಗಳ ಕಸರತ್ತು ಪ್ರದರ್ಶಿಸಿದೆ. ಬುಧವಾರ ನಡೆದ 77ನೇ ಭಾರತೀಯ ಸೇನಾ ದಿನಾಚರಣೆಯಲ್ಲಿ ರೋಬೋ ನಾಯಿಗಳ ಪ್ರದರ್ಶನ ಗಮನ ಸೆಳೆಯಿತು. ಇದಲ್ಲದೆ, ಭಾರತೀಯ ಯುದ್ಧ ಕಲೆ ವಿಕಾಸ ಕುರಿತ ‘ಗೌರವ್ ಗಾಥಾ’ ಎಂಬ ಧ್ವನಿ ಬೆಳಕಿನ ಕಾರ್ಯಕ್ರಮ ಆಕರ್ಷಣೆಯಾಗಿತ್ತು. ದಕ್ಷಿಣ ಕಮಾಂಡ್ ವ್ಯಾಪ್ತಿಯ ಬಾಂಬೆ ಎಂಜಿನಿಯರ್ಸ್ ಗ್ರೂಪ್ ಆಂಡ್ ಸೆಂಟರ್​ನ ಭಗತ್ ಪೆವಿಲಿಯನ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು.

Robot Dog
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net