

ತೀರ್ಥಹಳ್ಳಿ: ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಉಪಾಹಾರ ಯೋಜನೆಯಡಿ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರ ವೇತನವನ್ನು ಮುಂಬರುವ ಬಜೆಟ್‌ನಲ್ಲಿ ಪರಿಷ್ಕರಿಸಬೇಕು ಎಂದು ಆಗ್ರಹಿಸಿ ತಾಲೂಕು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೇಡರೇಶನ್ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಕಳೆದ 23 ವರ್ಷಗಳಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತ್ಯಂತ ಕನಿಷ್ಠ ವೇತನದಲ್ಲಿ ಅಡುಗೆ ಕೆಲಸ ಮಾಡುತ್ತಿರುವ ನಮ್ಮ ಬೇಡಿಕೆಗಳನ್ನು ಈಡೇರಿಸುವ ಮೂಲಕ ನ್ಯಾಯ ದೊರಕಿಸಬೇಕು. ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರ ವೇತನವನ್ನು 6 ಸಾವಿರ ರೂ.ಗೆ ಹೆಚ್ಚಿಸುವ ಭರವಸೆಯನ್ನು ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿತ್ತು. ಆದರೆ ಭರವಸೆ ಈಡೇರಿಸಿಲ್ಲ. ನಿವೃತ್ತರಾದ ನಂತರದ ಇಡುಗಂಟನ್ನು 2 ಲಕ್ಷ ರೂ.ಗೆ ಏರಿಸಬೇಕು. ಅನಾರೋಗ್ಯ ಮತ್ತಿತರ ಕಾರಣಗಳಿಂದ ಬಿಡುಗಡೆಗೊಳ್ಳುವ ಸಿಬ್ಬಂದಿಗೂ ಇದು ಅನ್ವಯವಾಗಬೇಕು ಎಂದು ಆಗ್ರಹಿಸಿದರು.
ಆಸ್ಪತ್ರೆ ಚಿಕಿತ್ಸೆ ವೆಚ್ಚವನ್ನು 50 ಸಾವಿರ ರೂ. ಮತ್ತು ಮರಣ ಪರಿಹಾರವನ್ನು 10 ಲಕ್ಷ ರೂ. ನಿಗದಿಗೊಳಿಸಬೇಕು. 1972ರ ಕಾಯ್ದೆಯಂತೆ ಉಪಧನ ಜಾರಿ, ಪ್ರತಿ ತಿಂಗಳ 5 ತಾರೀಕಿಗೆ ವೇತನ ಬಿಡುಗಡೆ ಮಾಡಬೇಕು. ಸಿಬ್ಬಂದಿ ವಿರುದ್ಧ ಏಕ ಪಕ್ಷೀಯವಾಗಿ ಕ್ರಮ ಕೈಗೊಳ್ಳಬಾರದು. ಬರಗಾಲ ಕಾರ್ಯಕ್ರಮದ ಎರಡು ತಿಂಗಳ ವೇತನವನ್ನೂ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೇಡರೇಶನ್ ತಾಲೂಕು ಅಧ್ಯಕ್ಷೆ ಅಕ್ಕಮ್ಮ, ಪದಾಧಿಕಾರಿಗಳಾದ ಪರಮೇಶ್, ಕಲಾವತಿ, ವಿನಂತಿ, ಶೋಭಾ, ಪದ್ಮಾವತಿ, ಜಯಶ್ರೀ, ಮಂಜುಳಾ, ರೂಪಾ ಇತರರಿದ್ದರು.