ತಸ್ತಿಕ್ ಹೆಚ್ಚಿಸಿ, ಅರ್ಚಕರ ರಕ್ಷಿಸಿ; ಸಾವಿರ ರೂ. ಏರಿಕೆಗೆ ಸರ್ಕಾರಕ್ಕೆ ಒತ್ತಾಯ

Club House
Published on

ಬೆಂಗಳೂರು: ನಿರಂತರ ಬೆಲೆ ಏರಿಕೆಯಿಂದ ದಿನನಿತ್ಯದ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು, ರಾಜ್ಯದ 35 ಸಾವಿರ ದೇವಾಲಯಗಳ ಸುಮಾರು ಒಂದು ಲಕ್ಷ ಅರ್ಚಕರಿಗೆ ಮಾಸಿಕ ತಸ್ತಿಕ್ ಮೊತ್ತವನ್ನು 1 ಸಾವಿರ ರೂ. ಹೆಚ್ಚಿಸಿ ಕಾಪಾಡಬೇಕು ಎಂದು ಅರ್ಚಕ ಸಮುದಾಯ ಆಗ್ರಹಿಸಿದೆ.

ಕ್ಲಬ್​ಹೌಸ್ ಮೊಬೈಲ್ ಆಪ್ ಮೂಲಕ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ ನ್ಯೂಸ್ 247’ ಆಯೋಜಿಸಿದ್ದ ‘ಮುಜರಾಯಿ ಅರ್ಚಕರ ಕಥೆ-ವ್ಯಥೆ’ ಸಂವಾದದಲ್ಲಿ, ನಾಡಿನ ಪ್ರಸಿದ್ಧ ಧಾರ್ವಿುಕ ಕೇಂದ್ರವಾದ ಕೊಳದ ಮಠದ ಪೀಠಾಧಿಪತಿ ಹಾಗೂ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ಗೌರವಾಧ್ಯಕ್ಷರೂ ಆಗಿರುವ ಶ್ರೀ ಶಾಂತವೀರ ಮಹಾಸ್ವಾಮೀಜಿ, ಅಖಿಲ ಕರ್ನಾಟಕ ಹಿಂದು ದೇವಾಲಯಗಳ ಅರ್ಚಕರ ಆಗಮಿಕರ ಉಪಾಧಿವಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಎನ್. ದೀಕ್ಷಿತ್ ಹಾಗೂ ರಾಜ್ಯದ ವಿವಿಧೆಡೆಗಳಿಂದ ಅರ್ಚಕರು, ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಂತವೀರ ಸ್ವಾಮೀಜಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಮೌಲ್ವಿಗಳಿಗೆ 6 ಸಾವಿರ ರೂ. ನೀಡಲಾಗಿತ್ತು. ಆದರೆ, ಸಿ ವರ್ಗದ ಅಂದಾಜು 35 ಸಾವಿರ ದೇವಸ್ಥಾನಗಳ ಅರ್ಚಕರಿಗೆ 10 ಸಾವಿರ ರೂ.ಗೌರವಧನ ನೀಡುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಸದ್ಯ ಪ್ರತಿ ತಿಂಗಳು 4 ಸಾವಿರ ರೂ.ಗೌರವಧನ ನೀಡಲಾಗುತ್ತಿದೆ. ಈ ಹಣವೂ ಪೂಜೆ ಸಾಮಾಗ್ರಿಗಳಿಗೆ ಹಾಗೂ ಅರ್ಚಕರ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ಗೌರವಧನ ಹೆಚ್ಚಿಸುವಂತೆ ಮನವಿ ಮಾಡಿದ್ದರೂ ಈವರೆಗೆ ಸರ್ಕಾರಗಳು ಮುಂದಾಗಲಿಲ್ಲ ಎಂದು ತಿಳಿಸಿದರು. ಮುಜರಾಯಿ ದೇವಾಲಯಗಳಲ್ಲಿ ನಿತ್ಯ ಪೂಜೆ ನೆರವೇರಿಸಲು ಅರ್ಚಕರಿಗೆ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಒಂದು ರೂ. ಕೊಟ್ಟಿದ್ದರು. ಹಲವು ವರ್ಷಗಳ ಹೋರಾಟದ ಫಲವಾಗಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಮೊದಲಿಗೆ ವಾರ್ಷಿಕ 6 ಸಾವಿರ, 12 ಸಾವಿರ, 18 ಸಾವಿರ, 24, ಸಾವಿರ ರೂ. ವರೆಗೂ ತಸ್ತಿಕ್ ಹೆಚ್ಚಿಸಿದರು. ಬಳಿಕ ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲು 34 ಸಾವಿರ ರೂ., ನಂತರ 48 ಸಾವಿರ ರೂ.ಗೆ ಹೆಚ್ಚಳ ಮಾಡಲಾಯಿತು. ಇದಾಗಿ ನಾಲ್ಕು ವರ್ಷಗಳು ಕಳೆದಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದಾಗಿಯೂ ತಸ್ತಿಕ್ ಮೊತ್ತ ಹೆಚ್ಚಳ ಮಾಡುತ್ತಿಲ್ಲ. ಮಾಸಿಕ 1 ಸಾವಿರ ರೂ. ಹೆಚ್ಚಳ ಮಾಡಿದರೂ ಸಾಕು ಅರ್ಚಕರು ಸಾಕಷ್ಟು ಉತ್ತಮ ಜೀವನ ನಡೆಸಬಹುದು. ವರ್ಷಕ್ಕೆ ಮೂರ್ನಾಲ್ಕು ಬಾರಿ ಇದನ್ನು ನೀಡುವುದಕ್ಕಿಂತಲೂ, ವಾರ್ಷಿಕ ಎರಡು ಕಂತಿನಲ್ಲಿ ನೇರವಾಗಿ ಅರ್ಚಕರ ಖಾತೆಗೆ ತಲುಪಿಸುವ ವ್ಯವಸ್ಥೆ ಆಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಶ್ರೀ ನರಸಿಂಹ ಸ್ವಾಮಿ ದೇವಾಲಯಕ್ಕೆ ಪ್ರತಿವರ್ಷ 25 ಸಾವಿರ ರೂ. ಅನುದಾನ ನೀಡಲಾಗುತ್ತಿತ್ತು. ಆದರೆ ಕಳೆದ ನಾಲ್ಕ ವರ್ಷಗಳಿಂದ ಅನುದಾನ ಸ್ಥಗಿತಗೊಂಡಿದೆ. ಈ ಬಗ್ಗೆ ಮುಜರಾಯಿ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರತಿ ವರ್ಷ ದೇವಾಲಯಗಳಲ್ಲಿ ಪೂಜೆಗಾಗಿ ನೀಡಲಾಗುತ್ತಿರುವ ತಸ್ತಿಕ್ ಮೊತ್ತ ಪಡೆಯಲು ಸರ್ಕಾರವೇ ನಿಯಮ ಸಡಿಲಿಸಿ ಆದೇಶ ಹೊರಡಿಸಿದ್ದರೂ, ತಹಸೀಲ್ದಾರದಿಂದ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಇದರಿಂದಾಗಿ ತಸ್ತಿಕ್ ಪಡೆಯಲು ಸಹ ಸಮಸ್ಯೆಯಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.

| ಭೀಮಸೇನಾಚಾರ್ಯ ಜಾಗಿರದಾರ್ ಪ್ರಧಾನ ಅರ್ಚಕ, ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ, ಸುರಪೂರ, ಯಾದಗಿರಿ ಜಿಲ್ಲೆ

ಭೂಮಿ ಅರ್ಚಕರಿಗೇಕಿಲ್ಲ?

ಭೂ ಸುಧಾರಣೆ ಕಾಯ್ದೆಯಿಂದ ಹಿಂದು ದೇವಾಲಯಗಳಿಗೆ ಅನ್ಯಾಯವಾಗಿದ್ದು, ಇದನ್ನು ರದ್ದುಪಡಿಸಬೇಕು. ಚರ್ಚ್, ಮಸೀದಿ ಹಾಗೂ ದೇವಾಲಯಗಳಿಗೆ ಅನ್ವಯವಾಗುವ ಏಕರೂಪ ಕಾಯ್ದೆ ಜಾರಿಗೆ ಬರಬೇಕು. ‘ಉಳುವವನೇ ಭೂಮಿ ಒಡೆಯ’ಯೋಜನೆಯಂತೆ ಅನಾದಿ ಕಾಲದಿಂದಲೂ ದೇವಸ್ಥಾನಗಳಲ್ಲಿ ಪೂಜೆ ಮಾಡುತ್ತಿರುವ ಅರ್ಚಕರ ಹೆಸರಿನಲ್ಲಿ ಅವರ ಅನುಭವ ದಲ್ಲಿರುವ ಭೂಮಿಯ ಪಹಣಿ ಬರಬೇಕು ಎಂದು ಸರ್ಕಾರಕ್ಕೆ ಕೊಳದ ಮಠದ ಶ್ರೀ ಶಾಂತವೀರ ಸ್ವಾಮೀಜಿ ಆಗ್ರಹಿಸಿದರು. ಕೆ.ಎಸ್.ಎನ್. ದೀಕ್ಷಿತ್ ಮಾತನಾಡಿ, ಭೂ ಸುಧಾರಣೆ ಕಾಯ್ದೆ ಅಡಿ ಯಲ್ಲಿ ಅಂದು ರಾಜಮಹಾರಾಜರು ದಾನವಾಗಿ ನೀಡಿದ ಎಲ್ಲ ದೇವಾಲಯಗಳ ಇನಾಮು ಜಮೀ ನುಗಳೂ 1.7.1970ರಿಂದ ರಾಜ್ಯ ಸರ್ಕಾರದ ಪಾಲಾಗಿರುತ್ತದೆ. ಆದರೆ ಈವರೆಗೂ ಯಾವೊಬ್ಬ ಅರ್ಚಕನಿಗೂ ಇದರ ಪರಿಹಾರ ದೊರೆತಿಲ್ಲ. ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕು ಎಂದರು.

ಧಾರ್ವಿುಕ ಪರಿಷತ್ ರದ್ದುಪಡಿಸಿ

ಮುಜರಾಯಿ ಇಲಾಖೆಯ ಕೆಲ ಕಾರ್ಯಗಳನ್ನು ನೋಡಿಕೊಳ್ಳಲು ಆಯುಕ್ತರು, ಕಂದಾಯಾಧಿಕಾರಿಗಳು, ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿ ಇದ್ದಾರೆ. ಹಾಗಾಗಿ ನೂತನವಾಗಿ ರಚನೆಯಾಗಿರುವ ರಾಜ್ಯ ಹಾಗೂ ಜಿಲ್ಲಾ ಧಾರ್ವಿುಕ ಪರಿಷತ್ತನ್ನು ಕೂಡಲೇ ರದ್ದು ಪಡಿಸಿಬೇಕು ಎಂದು ಶಾಂತವೀರ ಸ್ವಾಮೀಜಿ ಆಗ್ರಹಿಸಿದರು. ಈ ಹಿಂದೆ ಗ್ರಾಮೀಣ ಭಾಗಗಳಲ್ಲಿ ದೇವಾಲಯಗಳನ್ನು ನಿರ್ವಿುಸಲು ಯಾವುದೇ ಲೈಸೆನ್ಸ್ ಇರಲಿಲ್ಲ. ಈಗ ಆ ದೇವಸ್ಥಾನಗಳನ್ನು ಕಟ್ಟಿ 70 ವರ್ಷ ಆಗಿರಬಹುದು. ಆದರೆ, ಈಗ ದೇವಸ್ಥಾನಗಳು ಅನಧಿಕೃತ ಎಂದು ಹೇಳುವುದು ಮುರ್ಖತನದ ಪರಮಾವಧಿ. ಯಾವುದೇ ದೇವಸ್ಥಾನಗಳು ಹಾಗೂ ಧಾರ್ವಿುಕ ಸಂಸ್ಥೆಗಳನ್ನು ಕೆಡವಬಾರದು. ಏಳು ಆಗಮ ತಜ್ಞರಿಂದ ಸಮಿತಿ ಹಾಗೂ ಪ್ರಾಧಿಕಾರ ರಚಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

ಸಾಧು ಸಂತರು ಆಯ್ಕೆಯಾಗಲಿ

ಹಿಂದು ಧರ್ಮವನ್ನು ರಕ್ಷಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕಿದೆ. ವಿಧಾನಪರಿಷತ್ ಹಾಗೂ ರಾಜ್ಯಸಭೆಗೆ ಹೆಚ್ಚಿನ ಸಂಖ್ಯೆಯ ಸಾಧು ಸಂತರು, ಪತ್ರಕರ್ತರು ಹಾಗೂ ವಿದ್ಯಾವಂತರು ಆಯ್ಕೆಯಾಗಬೇಕು. 4 ಬಾರಿ ಮಂತ್ರಿ ಆಗಿದ್ದವರು, 4 ಬಾರಿ ಸೋತಿರುವವರು ಆಯ್ಕೆಯಾಗುತ್ತಿದ್ದಾರೆ. ಈ ಹಿಂದೆ ಹೆಚ್ಚಿನ ಸಂಖ್ಯೆಯ ಸಾಧು ಸಂತರು ಆಯ್ಕೆಯಾಗುತ್ತಿದ್ದರು ಎಂದು ಶಾಂತವೀರ ಸ್ವಾಮೀಜಿ ತಿಳಿಸಿದರು.

ಸಿ ವರ್ಗದ ದೇವಾಲಯಗಳಿಂದ 140 ಕೋಟಿ ರೂ. ಆದಾಯ

ರಾಜ್ಯದಲ್ಲಿ ಸಿ ವರ್ಗದ ಅಂದಾಜು 35 ಸಾವಿರದಿಂದ 40 ಸಾವಿರ ದೇವಸ್ಥಾನಗಳಿವೆ. ಇದರಿಂದ ಅಂದಾಜು 140 ಕೋಟಿ ರೂ.ಆದಾಯ ಬರುತ್ತಿದೆ. ಈ ಆದಾಯವನ್ನು ಬೇರೆ ಕೆಲಸಗಳಿಗೆ ವಿನಿಯೋಗಿಸಲಾಗುತ್ತಿದೆ. ಆದರೆ, ಅರ್ಚಕರಿಗೆ ಮಾತ್ರ ಸರಿಯಾಗಿ ಗೌರವಧನ ಸಿಗುತ್ತಿಲ್ಲ ಎಂದು ಶ್ರೀ ಶಾಂತವೀರ ಮಹಾಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದರು. ಎ ಮತ್ತು ಬಿ ವರ್ಗದ 2 ಸಾವಿರ ದೇವಾಲಯಗಳಿವೆ. ಇದರಿಂದ ಕೋಟ್ಯಂತರ ರೂಪಾಯಿ ಅನುದಾನ ಬರುತ್ತಿದೆ. ಹಿಂದು ಧಾರ್ವಿುಕ ದತ್ತಿ ಇಲಾಖೆ ಕಾರ್ಯರೂಪಕ್ಕೆ ಬರದೆ ಕೇವಲ ವಿಭಾಗವಾಗಿ ಉಳಿದಿದೆ. ಇಲಾಖೆಯ ಸಲಹಾ ಸಮಿತಿಗೆ 2 ಬಾರಿ ಅಧ್ಯಕ್ಷನಾಗಿದ್ದೆ. ಈ ವೇಳೆ ಅನೇಕ ಬಾರಿ ಸಮಸ್ಯೆಗಳನ್ನು ಈಡೇರಿಸುವಂತೆ ನೂರಾರು ಹೋರಾಟಗಳನ್ನು ನಡೆಸಿದ್ದೇನೆ. ಈಗಲೂ ಹೋರಾಟ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಎ ಮತ್ತು ಬಿ ವರ್ಗದ ದೇವಾಲಯಗಳಿಗೆ ಕೋಟ್ಯಂತರ ವರಮಾನವಿದ್ದು, ಈ ಅರ್ಚಕರಿಗೆ ಹೆಚ್ಚು ಗೌರವಧನ ಕೊಡಲಾಗುತ್ತಿದೆ. ಆದರೆ, ಸಿ ವರ್ಗದ ದೇವಾಲಯಗಳ ಆರ್ಚಕರಿಗೆ ಸರಿಯಾಗಿ ಗೌರವಧನ ಸಿಗದೆ ಆರ್ಥಿಕ ನಿರ್ವಹಣೆಗೆ ಪರದಾಡುತ್ತಿದ್ದಾರೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಬೇಡಿಕೆಗಳು

  • ಬಡ ಅರ್ಚಕರಿಗೆ ಮನೆ ಮಂಜೂರು
  • ಲೇಬರ್ ಆಕ್ಟ್​ನಡಿ ವೇತನ ಸಿಗಲಿ
  • ಅರ್ಚಕರ ಸುರಕ್ಷತೆಗೆ ಪೊಲೀಸ್ ಔಟ್​ಲೆಟ್ ಸ್ಥಾಪಿಸಿ
  • ಹಿಂದು ದೇವಾಲಯಗಳನ್ನು ಉಳಿಸಿ ಬೆಳೆಸಿ
  • ಹಳೆಯ ದೇವಸ್ಥಾನಗಳ ಕಟ್ಟಡಗಳ ದುರಸ್ತಿ ನಡೆಸಬೇಕು
  • ಮಠಗಳಿಂದ ವಸೂಲಿ ಮಾಡುವ ತೆರಿಗೆ ರದ್ದುಗೊಳಿಸಿ
  • ಬಿಪಿಎಲ್ ಕಾರ್ಡ್ ಮಂಜೂರು ಮಾಡಿ
  • ಅರ್ಚಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯಧನ
  • ಎಲ್ಲ ಧರ್ಮದವರಿಗೂ ಅನ್ವಯವಾಗುವ ಒಂದೇ ಕಾಯ್ದೆ ಜಾರಿಗೆ ಬರಲಿ
  • ಆರೋಗ್ಯ, ಅಪಘಾತ ವಿಮೆ ಸೌಲಭ್ಯ ನೀಡಿ

ನಿವೃತ್ತಿ ಆದೇಶ ಹಿಂಪಡೆಯಿರಿ: ದೇವಾಲಯಗಳನ್ನು ಸರ್ಕಾರದ ವ್ಯಾಪ್ತಿಗೆ ತೆಗೆದುಕೊಂಡಿರುವ ಸರ್ಕಾರ ಅಲ್ಲಿ ಪೂಜೆ ಮಾಡುವ ಅರ್ಚಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಲ್ಲ. ಆದರೆ ಅರ್ಚಕರಿಗೆ 60 ವರ್ಷಕ್ಕೆ ನಿವೃತ್ತಿ ಘೋಷಿಸಿದೆ. ವೇತನವಿಲ್ಲದೆ, ಪಿಂಚಣಿ ಇಲ್ಲದೆ ದೇವರ ಸೇವೆ ಮಾಡುತ್ತಿರುವ ಅರ್ಚಕರಿಗೆ ನಿವೃತ್ತಿ ಘೋಷಿಸಿದರೆ ಮುಂದಿನ ಜೀವನ ನಡೆಸುವುದು ಹೇಗೆ? ಅವರ ಕುಟುಂಬದ ನಿರ್ವಹಣೆ ಮಾಡುವುದು ಹೇಗೆ? ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಇಲ್ಲದ ಈ ನಿಯಮ ಕರ್ನಾಟಕದಲ್ಲಿ ಏಕೆ ಮಾಡಿದ್ದಾರೆ? ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯಬೇಕು. ಇಲ್ಲವೆ ನಿವೃತ್ತಿ ವೇಳೆ ಇಂತಿಷ್ಟು ಹಣವನ್ನು ನೀಡಬೇಕು ಎಂದು ದೀಕ್ಷಿತ್ ಒತ್ತಾಯಿ ಸಿದರು.

ಹಣ ಪಡೆಯಲು ಲಂಚ ಕೊಡಬೇಕು

ಸರ್ಕಾರ ಸಿ ದರ್ಜೆ ದೇವಾಲಯಗಳಿಗೆ ವಾರ್ಷಿಕ 4 ಕಂತುಗಳಲ್ಲಿ ತಸ್ತಿಕ್ ಹಣ ನೀಡುತ್ತಿದೆ. ಆದರೆ ಅದನ್ನು ಪಡೆಯಲು ಅರ್ಚಕರು ತಾಲೂಕು ಕಚೇರಿಗೆ ಹತ್ತಾರು ಬಾರಿ ಅಲೆಯಬೇಕು. ಸಾಲದಂತೆ ಆ ಹಣದಲ್ಲೂ ಅಲ್ಲಿನ ಸಿಬ್ಬಂದಿಗೆ ಅರ್ಧ ನೀಡಬೇಕು. ಇದಕ್ಕೆ ಪರಿಹಾರವಾಗಿ ಸರ್ಕಾರ ವಾರ್ಷಿಕ ಎರಡು ಕಂತಿನಲ್ಲಿ ತಸ್ತಿಕ್ ಹಣವನ್ನು ನೇರವಾಗಿ ಅರ್ಚಕರ ಖಾತೆಗೆ ಹೋಗುವಂತೆ ಮಾಡ ಬೇಕು ಎಂದು ಕೆ.ಎಸ್.ಎನ್. ದೀಕ್ಷಿತ್ ಮನವಿ ಮಾಡಿದರು.

ಹಿಂದು ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಸೇರಿಸಿಕೊಂಡು ಯಾವುದೇ ಲೇಬರ್ ಆಕ್ಟ್ ಬರದಂತೆ ಮಾಡಲಾಗಿದೆ. ಒಂದು ಸಮುದಾಯಕ್ಕೆ ಬೆಣ್ಣೆ, ಮತ್ತೊಂದು ಸಮುದಾಯಕ್ಕೆ ಸುಣ್ಣನೂ ಇಲ್ಲದಂತೆ ಮಾಡಲಾಗಿದೆ. ಭಿಕ್ಷುಕರ ರೀತಿಯಲ್ಲಿ ಅರ್ಚಕರನ್ನು ನೋಡಲಾಗುತ್ತಿದೆ. ಇದರ ವಿರುದ್ಧ ಅರ್ಚಕರು ಬೀದಿಗಿಳಿದು ಹೋರಾಟ ನಡೆಸಬೇಕು.

| ಸ್ವದೇಶಿ ಪ್ರಶಾಂತ್

ಲಾಕ್​ಡೌನ್ ತೆರವು ನಂತರ ಮಾರುಕಟ್ಟೆ, ದಿನಸಿ ಅಂಗಡಿಗಳನ್ನು ತೆರೆಯಲು ಮುಕ್ತ ಅವಕಾಶ ನೀಡಿದ ಸರ್ಕಾರ, ದೇವಸ್ಥಾನಗಳು ಬಾಗಿಲು ತೆರೆಯದಂತೆ ನಿರ್ಬಂಧವನ್ನು ಮುಂದೂಡಿತು. ಈ ತಾರತಮ್ಯವೇಕೆ? ಹಾಗೆ ನೋಡಿದರೆ ಜನರು ನಿಯಮ ಪಾಲಿಸುವ ಮೂಲಕ ಭಯಭಕ್ತಿಯಿಂದ ಬರುವುದು ದೇವಾಲಯಗಳಿಗೆ ಹೊರತು ಮಾರುಕಟ್ಟೆಗಳಿಗಲ್ಲ.

| ಸುಬ್ರಹ್ಮಣ್ಯ ಅರ್ಚಕರು

ರಾಜಕಾರಣಿಗಳು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ, ಕೆಲ ವಿಷಯ ಗಳನ್ನು ಮರೆತು ಬಿಡುತ್ತಾರೆ. ಸಂವಿಧಾನದಲ್ಲಿ ಇರುವ ಹಕ್ಕು ಗಳನ್ನು ಕೇಳುತ್ತಿದ್ದೇವೆ. ಅರ್ಚಕರನ್ನು ಒಂದು ಜಾತಿಗೆ ಸೀಮಿತ ಎನ್ನುತ್ತಾರೆ. ಇದು ತಪು್ಪ. ಅರ್ಚಕರಿಗೆ ನೀಡುವುದು ತಟ್ಟೆಕಾಸು ಅಲ್ಲ. ಅರತಿಯ ದಕ್ಷಣೆ. ಭಕ್ತನು ಪ್ರೀತಿಯಿಂದ ನೀಡುವ ಹಣ.

| ಡಾ.ಉಮೇಶ್ ಶರ್ಮಾ

ಸರ್ಕಾರಕ್ಕೆ ಅರ್ಚಕರ ಅಹವಾಲು

ಖಾಸಗಿ ಅರ್ಚಕರಿಗೆ ನೋಂದಣಿ ಇಲ್ಲ. ಗುರುತಿಸುತ್ತಿಲ್ಲ. ಗುರುತಿಸುವ ಕೆಲಸ ಆಗಬೇಕಿದೆ.

| ಸಚ್ಚಿದಾನಂದ

ಸಿ ವರ್ಗದ ಅರ್ಚಕರಿಗೆ ತಸ್ತಿಕ್ ಹಣ ಸಾಕಾಗುವುದಿಲ್ಲ. ಅರ್ಚಕರಿಗೆ ಬಿಪಿಎಲ್ ಕಾರ್ಡ್, ಮನೆ ಮಂಜೂರು ಮಾಡಬೇಕು. ಅರ್ಚಕರ ಕುಟುಂಬಕ್ಕೆ ಸೇರಿದವರು ಬೇರೆ ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಈಗ ಅನುವಂಶೀಯ ಹಕ್ಕು ಎಂದು ಹೇಳಿ ಡಿಸಿ ಕಚೇರಿಗೆ ತಕರಾರು ಅರ್ಜಿ ಹಾಕುತ್ತಿದ್ದಾರೆ.

| ಕೃಷ್ಣಕುಮಾರ್

ಬಡ ಅರ್ಚಕರ ಮಕ್ಕಳ ಕೆಎಎಸ್ ಹಾಗೂ ಐಎಎಸ್ ವಿದ್ಯಾಭ್ಯಾಸಕ್ಕೆ ಧಾರ್ವಿುಕ ದತ್ತಿ ಇಲಾಖೆಯಿಂದ ನಿಧಿಯನ್ನು ತೆಗೆದು ಇಡಬೇಕು?

| ಉಮೇಶ್ ಶರ್ಮಾ

ದೇವಸ್ಥಾನಗಳ ಜೀಣೋದ್ಧಾರಕ್ಕೆ ಈ ಹಿಂದೆ ಸರ್ಕಾರ 250 ಕೋಟಿ ರೂ. ಅನುದಾನ ನೀಡಿತ್ತು. ಆದರೆ, ಕಾರ್ಯರೂಪಕ್ಕೆ ಬರಲಿಲ್ಲ. ಅನೇಕ ಕಡೆಗಳಲ್ಲಿ ದೇವಸ್ಥಾನಗಳು ಹಾಗೂ ಶತಮಾನದ ರಥಗಳು ಶಿಥಿಲಾವಸ್ಥೆಯಲ್ಲಿವೆ.

| ಹಾರನಹಳ್ಳಿ ನಾಗೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net