

ಬೆಂಗಳೂರು: ಹವಾಮಾನ ವೈಪರಿತ್ಯ ಹಾಗೂ ನಿರಂತರ ಮಳೆಯಿಂದ ರಾಜ್ಯದಲ್ಲಿ ಕಂಜಕ್ಟಿವೈಟಿಸ್ (ಮದ್ರಾಸ್ ಐ, ಪಿಂಕ್ ಐ) ಏರಿಕೆಯಾಗುತ್ತಿದ್ದು, ಜುಲೈ 25ರಿಂದ ಆ.4ರ ಅವಧಿಯಲ್ಲಿ 40,477 ಪ್ರಕರಣ ದೃಢಪಟ್ಟಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಆರೋಗ್ಯ ಸೌಧದಲ್ಲಿ ಶನಿವಾರ ಮಾತನಾಡಿ, ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಕಣ್ಣಿನ ಸಮಸ್ಯೆ ವರದಿಯಾಗಿದೆ. ರಾಜ್ಯದಲ್ಲಿ ಕಳೆದ 10 ದಿನಗಳ ಅವಧಿಯಲ್ಲಿ ಕಣ್ಣಿನ ಆಸ್ಪತ್ರೆಯ ಹೋರರೋಗಿಗಳ ವಿಭಾಗದಲ್ಲಿ 1.22 ಲಕ್ಷ ಮಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚು (7,693) ಮಂದಿಗೆ ಕಂಜಕ್ಟಿವೈಟಿಸ್ ಸಮಸ್ಯೆ ಎದುರಿಸಿದ್ದಾರೆ. ಹಾವೇರಿ (6,558) ಹಾಗೂ ರಾಯಚೂರಿನಲ್ಲಿ (6,493) ಅಧಿಕ ಪ್ರಕರಣಗಳು ವರದಿಯಾಗಿವೆ. ಆಸ್ಪತ್ರೆಗಳಲ್ಲಿ ನೋವು ನಿವಾರಕ ಮಾತ್ರೆ, ಕಣ್ಣಿನ ಡ್ರಾಪ್ಸ್ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಪಾಲಕರು ಎಚ್ಚರಿಕೆ ವಹಿಸಿ: ಕಣ್ಣಿನ ಬಿಳಿ ಭಾಗ ಕೆಂಪಾಗುವುದು, ಕಣ್ಣುಗಳಲ್ಲಿ ಉರಿ ಮತ್ತು ನೋವು, ಕಣ್ಣುಗಳಲ್ಲಿ ನಿರಂತರ ನೀರು ಬರುವಿಕೆ, ಕಣ್ಣುಗಳು ಊದಿಕೊಳ್ಳುವಿಕೆ ಈ ಸಮಸ್ಯೆಯ ಪ್ರಮುಖ ಲಕ್ಷಣಗಳಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಜನರು ಇರುವ ಪ್ರದೇಶಗಳಿಗೆ ಹೋಗುವುದನ್ನು ಕಡಿಮೆ ಮಾಡಬೇಕು. ಪದೇಪದೆ ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು. ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು. ಸಮಸ್ಯೆ ಇರುವವರು ಉಪಯೋಗಿಸಿದ ಟವೆಲ್ ಸೇರಿ ಯಾವುದೇ ವಸ್ತುಗಳನ್ನು ಬಳಸಬಾರದು, ವಿಶೇಷವಾಗಿ ಶಾಲೆಗೆ ಹೋಗುವ ಮಕ್ಕಳ ಕಣ್ಣಿನ ಆರೋಗ್ಯದ ಬಗ್ಗೆ ಪಾಲಕರು ಎಚ್ಚರಿಕೆ ವಹಿಸಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.