

ನವದೆಹಲಿ: ಹಬ್ಬಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರಯಾಣ ಹೆಚ್ಚಾದ ಪರಿಣಾಮ ದೇಶದಲ್ಲಿ ಪೆಟ್ರೋಲ್ ಮಾರಾಟ ಅಕ್ಟೋಬರ್ನಲ್ಲಿ ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಆದರೆ ಡೀಸೆಲ್ ಬಳಕೆಯಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ ಎಂದು ಉದ್ಯಮ ವಲಯದ ಪ್ರಾಥಮಿಕ ದತ್ತಾಂಶಗಳು ತಿಳಿಸಿವೆ.
ಹಬ್ಬಗಳ ಋತುವಿನ ಆರಂಭದೊಂದಿಗೆ ಇಂಧನ ಬೇಡಿಕೆ ಹೆಚ್ಚಿದ ಕಾರಣ ಪೆಟ್ರೋಲ್ ಬಳಕೆ ಕಳೆದ ವರ್ಷಕ್ಕಿಂತ ಶೇ.7ರಷ್ಟು ಏರಿಕೆಯಾಗಿ ಅಕ್ಟೋಬರ್ನಲ್ಲಿ 3.65 ದಶಲಕ್ಷ ಟನ್ಗೆ ತಲುಪಿತು. ಸೆಪ್ಟೆಂಬರ್ನಲ್ಲಿ ಆಗಿದ್ದ 3.4 ದಶಲಕ್ಷ ಟನ್ಗೆ ಹೋಲಿಸಿದರೂ ಈ ಮಾರಾಟ ಪ್ರಮಾಣ ಹೆಚ್ಚೇ ಆಗಿದೆ. ದೇಶದಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವ ಇಂಧನ ಡೀಸೆಲ್. ಒಟ್ಟಾರೆ ಇಂಧನ ಬಳಕೆಯಲ್ಲಿ ಇದರ ಪಾಲು ಶೇ. 40ರಷ್ಟಿದೆ. ಅಕ್ಟೋಬರ್ನಲ್ಲಿ ಇದರ ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡು 7.6 ದಶಲಕ್ಷ ಟನ್ಗೆ ತಲುಪಿದೆ. ಹಿಂದಿನ ವರ್ಷದ ಅಕ್ಟೋಬರ್ನಲ್ಲಿ ಇದು 7.64 ದಶಲಕ್ಷ ಟನ್ ಇತ್ತು.
ಸಾಮಾನ್ಯವಾಗಿ ಜೂನ್ನಲ್ಲಿ ಮಳೆಗಾಲದ ಆಗಮನದೊಂದಿಗೆ ನೀರಾವರಿ ಪಂಪ್ಗಳಿಗೆ ಇಂಧನ ಬೇಡಿಕೆ ಕಡಿಮೆಯಾಗುವುದು ಮತ್ತು ವಾಹನ ಸಂಚಾರ ನಿಧಾನಗೊಳ್ಳುವುದರಿಂದ ಡೀಸೆಲ್ ಬಳಕೆ ಕುಸಿಯುತ್ತದೆ. ಆದರೆ ಮಳೆ ಕಡಿಮೆಯಾದ ನಂತರ ಅಕ್ಟೋಬರ್ನಿಂದ ಮಾರಾಟ ಜಾಸ್ತಿಯಾಗುತ್ತದೆ. ಹಬ್ಬಗಳ ಋತುವಿನಿಂದಾಗಿ ಸರಕುಸಾಗಣೆ ಹೆಚ್ಚಾಗುತ್ತದೆ. ಆದರೆ ಈ ವರ್ಷ, ಈ ರೀತಿ ಆಗಿಲ್ಲ. ಅಕ್ಟೋಬರ್ನಲ್ಲಿ ಡೀಸೆಲ್ ಬಳಕೆ ಏರಿಕೆಯ ಬದಲಿಗೆ ಸ್ವಲ್ಪ ಕುಸಿತ ಕಂಡಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ವರದಿ ತಿಳಿಸಿದೆ. ವಿಮಾನ ಇಂಧನ ಬಳಕೆ ಅಕ್ಟೋಬರ್ನಲ್ಲಿ ಶೇ.1.6ರಷ್ಟು, ಎಲ್ಪಿಜಿ ಮಾರಾಟ ಶೇ.5.4ರಷ್ಟು ಏರಿಕೆಯಾಗಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ.