

ಮೂಗೂರು: ಗ್ರಾಮದ ಹೂವಿನ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಮಂಟೇಸ್ವಾಮಿ (ಗದ್ದಿಗೆ) ದೇವಾಲಯವನ್ನು ಸೋಮವಾರ ಬೋಪ್ಪೆಗೌಡನಪುರದ ಮಠಾಧೀಶ ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ ಉದ್ಘಾಟಿಸಿದರು.
ಬೆಳಗ್ಗೆ ದೇಗುಲದಲ್ಲಿ ಪಂಚ ಕಳಸ ಪ್ರತಿಷ್ಠಾಪನೆ, ಹೋಮ ನೆರವೇರಿಸಲಾಯಿತು. ಶ್ರೀ ದೇಶೇಶ್ವರಸ್ವಾಮಿ ದೇವಸ್ಥಾನದಲ್ಲಿ ಶ್ರೀ ಮಂಟೇಸ್ವಾಮಿ ಅವರ ಕಂಡಾಯವನ್ನು ಹೂ, ಹೊಂಬಾಳೆಯಿಂದ ಅಲಂಕರಿಸಿ ಕಳಸ ಹೊತ್ತ ಮಹಿಳೆಯರು ಮೆರವಣಿಗೆ ಮೂಲಕ ಗದ್ದಿಗೆಗೆ ತಂದರು.
ಮಠಾಧೀಶ ಶ್ರೀ ಜ್ಞಾನಾನಂದ ಚೆನ್ನರಾಜೇಅರಸ್ ತ್ರಿಪುರಸುಂದರಿ ಅಮ್ಮನವರಿಗೆ ಪೂಜೆ ಸಲ್ಲಿಸಿ, ಗ್ರಾಮಕ್ಕೆ ತೆರಳಿದರು. ಗ್ರಾಮದ ಪ್ರಮುಖರು ಹಾಗೂ ಭಕ್ತರು ದಾರಿಯುದ್ದಕ್ಕೂ ಮಡಿ ಹಾಸಿ, ಹೂ ಚೆಲ್ಲಿ ಮಂಗಳವಾದ್ಯದೊಂದಿಗೆ ಸಕಲ ಗೌರವಗಳೊಂದಿಗೆ ಸ್ವಾಮೀಜಿಯನ್ನು ಸ್ವಾಗತಿಸಿದರು.
ಗ್ರಾಮದ ಪ್ರಮುಖರಾದ ಎಂ.ಡಿ. ಬಸವರಾಜು, ಎಂ.ಬಿ. ಸಾಗರ್, ಶಿವಮೂರ್ತಿ, ಪುಟ್ಟರಾಜು, ನಾಗೇಂದ್ರ, ಮಹಾದೇವ ನಾಯ್ಕ, ಶಂಕರ, ಮಾದೇಶ್, ಎಂ.ಡಿ. ಬಸವರಾಜು ಇತರರು ಇದ್ದರು.