

ದುಬೈ: ಅಬುಧಾಬಿಯಲ್ಲಿನ ಮೊದಲ ಹಿಂದು ದೇಗುಲವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು. ಆಕರ್ಷಕ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಪ್ರಧಾನಿ ಮೋದಿ, ಬೊಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ (ಬಿಎಪಿಎಸ್) ಮಂದಿರವನ್ನು ಸ್ವಾಮಿನಾರಾಯಣ ಪಂಥದ ಆಧ್ಯಾತ್ಮಿಕ ಗುರುಗಳ ಸಮ್ಮುಖದಲ್ಲಿ ಧಾರ್ವಿುಕ ಘೋಷಗಳೊಂದಿಗೆ ಉದ್ಘಾಟಿಸಿದರು.
ಜಗತ್ತಿನಾದ್ಯಂತ ಇರುವ ಸ್ವಾಮಿನಾರಾಯಣ ಪಂಥದ 1,200ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಏಕಕಾಲಕ್ಕೆ ಜರುಗಿದ ಗ್ಲೋಬರ್ ಆರತಿಯಲ್ಲೂ ಪ್ರಧಾನಿ ಪಾಲ್ಗೊಂಡರು. ಅಲ್ಲದೆ ಗಂಗಾ ಮತ್ತು ಯಮುನಾ ನದಿ ತೀರ್ಥವನ್ನೂ ವರ್ಚುವಲ್ ಆಗಿ ಪ್ರಧಾನಿ ಈ ಮಂದಿರಕ್ಕೆ ಅರ್ಪಿಸಿದರು. ಇದು ಗಲ್ಪ್ ಪ್ರದೇಶದಲ್ಲಿನ ಅತಿದೊಡ್ಡ ದೇವಾಲಯವಾಗಿದೆ.
ಯಾರಿವರು ಮಹಾಂತ ಸ್ವಾಮಿ ಮಹಾರಾಜ್?: ಬಿಎಪಿಎಸ್ನ ಆಧ್ಯಾತ್ಮಿಕ ಗುರು ಮಹಾಂತ ಸ್ವಾಮಿ ಮಹಾರಾಜ್ ಅವರನ್ನು ಸ್ವಾಮಿ ಕೇಶವಜೀವನ್ದಾಸ್ ಜೀ ಎಂದೂ ಕರೆಯಲಾಗುತ್ತದೆ. ಇವರು ಈ ಸಂಸ್ಥೆಯ ಆರನೇ ಆಧ್ಯಾತ್ಮಿಕ ಗುರುವಾಗಿದ್ದಾರೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ 1933ರ ಸೆ.13ರಂದು ಇವರು ಜನಿಸಿದರು. ಇವರ ಪಾಲಕರು ಮೂಲತಃ ಗುಜರಾತ್ನವರಾಗಿದ್ದು, ಉದ್ಯಮದ ಕಾರಣಕ್ಕೆ ಜಬಲ್ಪುರದಲ್ಲಿ ನೆಲೆಸಿದ್ದರು. ಮಹಾಂತ ಸ್ವಾಮಿ 1951-52ರಲ್ಲಿ ಬಿಎಪಿಎಸ್ನ ಯೋಗಿ ಮಹಾರಾಜ್ ಅವರ ಸಂಪರ್ಕಕ್ಕೆ ಬಂದಿದ್ದು, ಅವರೊಂದಿಗೆ ಸಂಚರಿಸಲಾರಂಭಿಸಿದರು. ಕುಟುಂಬ ದವರು ಇವರನ್ನು ವಿನು ಎಂದು ಕರೆಯುತ್ತಿದ್ದು, ಬಿಎಪಿಎಸ್ನವರು ಕೇಶವ್ ಎಂದು ಮರುನಾಮಕರಣ ಮಾಡಿದ್ದರು. 1957ರಲ್ಲಿ ಇವರಿಗೆ ಯೋಗಿ ಮಹಾರಾಜ್ ದೀಕ್ಷೆ ನೀಡಿದರು.
ಯುಎಇನಲ್ಲಿ ಭಾರತ್ ಮಾರ್ಟ್: ಭಾರತವು ಯುಎಇನಲ್ಲಿ ತನ್ನದೇ ಆದ ಉಗ್ರಾಣ ಸೌಲಭ್ಯವಾದ ಭಾರತ್ ಮಾರ್ಟ್ ಸ್ಥಾಪಿಸಲಿದ್ದು, ಇಲ್ಲಿನ ಜೆಬೆಲ್ ಅಲಿ ಮುಕ್ತ ವ್ಯಾಪಾರ ವಲಯದಲ್ಲಿ ಇದಕ್ಕೆ ಪ್ರಧಾನಿ ಮೋದಿ ಮತ್ತು ಅವರ ಯುಎಇ ಸಹವರ್ತಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಜತೆಯಾಗಿ ವರ್ಚುವಲ್ ಆಗಿ ಶಿಲಾನ್ಯಾಸ ನೆರವೇರಿಸಿದರು. ಇದು ಗಲ್ಪ್, ಪಶ್ಚಿಮ ಏಷ್ಯಾ, ಆಫ್ರಿಕ ಮತ್ತು ಯುರೇಷ್ಯಾದ ಅಂತಾರಾಷ್ಟ್ರೀಯ ಖರೀದಿದಾರರನ್ನು ತಲುಪಲು ಪರಿಣಾಮಕಾರಿ ವೇದಿಕೆ ಒದಗಿಸುವ ಮೂಲಕ ಭಾರತದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ(ಎಂಎಸ್ಎಂಇ) ವಲಯಗಳ ರಫ್ತುಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದು ರಫ್ತುದಾರರಿಗೆ ಚೀನಾದ ಡ್ರಾ್ಯಗನ್ ಮಾರ್ಟ್ನಂತೆ ಒಂದೇ ಸೂರಿನಡಿ ವೈವಿಧ್ಯಮಯ ಉತ್ಪನ್ನಗಳನ್ನು ಪ್ರದರ್ಶಿಸುವ ಏಕೀಕೃತ ವೇದಿಕೆ ಆಗಿರಲಿದ್ದು, 2025ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭವ್ಯಸ್ವಾಗತ: ವಿಶ್ವ ಸರ್ಕಾರಿ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವುದಕ್ಕೂ ಮುನ್ನ ದುಬೈನ ಬುರ್ಜ್ ಖಲೀಫಾ ಮೂಲಕ ಮೋದಿಗೆ ಭವ್ಯಸ್ವಾಗತ ಕೋರಲಾಯಿತು. ತ್ರಿವರ್ಣದಿಂದ ಕಂಗೊಳಿಸಿದ ಬುರ್ಜ್ ಖಲೀಫಾ ಮೇಲೆ ‘ಗೌರವದ ಅತಿಥಿ, ಭಾರತ ಗಣರಾಜ್ಯ’ (ಗೆಸ್ಟ್ ಆಫ್ ಆನರ್, ರಿಪಬ್ಲಿಕ್ ಆಫ್ ಇಂಡಿಯಾ) ಎಂಬ ಬರಹ ಮೂಡಿಸಿ ಮೋದಿಯನ್ನು ಸ್ವಾಗತಿಸಲಾಯಿತು. ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಉಭಯ ರಾಷ್ಟ್ರಗಳ ನಡುವಿನ ನಿರಂತರ ಬಾಂಧವ್ಯ ಕುರಿತು ಪ್ರಸ್ತಾಪಿಸಿ, ಇಂದು ಅಂತಾರಾಷ್ಟ್ರೀಯ ಸಹಕಾರದ ದಾರಿದೀಪ ಎಂದೂ ಶ್ಲಾಘಿಸಿದರು.