ಕರೊನಾ ಹರಡಿಸುತ್ತಿದೆ ಎಂದು ಲಕ್ಷಾಂತರ ಮಿಂಕ್‌ಗಳ ಮಾರಣಹೋಮ!

mink1
Published on

ಸ್ಪೇನ್: ಕರೊನಾ ವೈರಸ್‌ನ ಮೂಲ ಯಾವುದು, ಇದು ಹೇಗೆ ಬಂತು ಎಂಬ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಲೇ ಇವೆ. ಒಬ್ಬೊಬ್ಬರೂ ಒಂದೊಂದು ತೆರನಾಗಿ ಈ ಕುರಿತು ವಿಶ್ಲೇಷಿಸುತ್ತಿದ್ದಾರೆ.

ಆದರೆ ಈ ನಡುವೆಯೇ ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಸ್ಪೇನ್‌ನಲ್ಲಿ ಮಿಂಕ್‌ ಎನ್ನುವ ಪ್ರಾಣಿಯ ಮಾರಣಹೋಮ ನಡೆಯುತ್ತಿದೆ. ಇದಾಗಲೇ ಲಕ್ಷಕ್ಕೂ ಅಧಿಕ ಮಿಂಕ್‌ಗಳನ್ನು ಸಾಯಿಸಲಾಗಿದೆ, ಅತ್ತ ನೆದರ್ಲೆಂಡ್‌ನಲ್ಲಿಯೂ ಇವುಗಳ ಹತ್ಯೆಯ ಕಾರ್ಯ ಮುಂದುವರೆದಿದೆ.

ಮುಂಗುಸಿಯನ್ನು ಹೋಲುವ ಮಿಂಕ್‌ ಪ್ರಾಣಿಯಲ್ಲಿ ಸ್ಪೇನ್‌ನಲ್ಲಿ ತಿನ್ನುವುದಕ್ಕಾಗಿ ಸಾಕುತ್ತಾರೆ. ಆದರೆ ಕರೊನಾ ಹರಡಲು ಈ ಪ್ರಾಣಿಯೇ ಕಾರಣ ಇರಬಹುದು ಎಂಬ ಸಂದೇಹದಿಂದ ಈ ಪ್ರಾಣಿಯನ್ನು ಕೊಲ್ಲಲಾಗುತ್ತಿದೆ.

ಸ್ಪೇನ್‌ನ ಫರ್ ಫಾರ್ಮ್‌ನಲ್ಲಿದ್ದ ಸಿಬ್ಬಂದಿ ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಅದೇ ಇನ್ನೊಂದೆಡೆ ನೆದರ್ಲೆಂಡ್ ಸೇರಿದಂತೆ ಕೆಲ ದೇಶಗಳಲ್ಲೂ ಮಿಂಕ್ ಪ್ರಾಣಿಗಳನ್ನು ಸಾಕುತ್ತಿದ್ದ ಫಾರ್ಮ್‌ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಸೋಂಕಿಗೆ ಈ ಪ್ರಾಣಿಯೇ ಕಾರಣ ಎಂಬ ತೀರ್ಮಾನಕ್ಕೆ ಬರಲಾಗಿತ್ತು.

ಈ ವೇಳೆ ಈ ಪ್ರಾಣಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಶೇಕಡ 90 ರಷ್ಟು ಪ್ರಾಣಿಗಳಲ್ಲಿ ಸೋಂಕು ದೃಢಪಟ್ಟಿತು. ಇದರಿಂದಲೇ ಮನುಷ್ಯರಿಗೂ ಹರಡುತ್ತಿದೆ ಎಂದು ತೀರ್ಮಾನಕ್ಕೆ ಬಂದಿದ್ದು, ಸ್ಪೇನ್‌ ಸರ್ಕಾರ ಎಲ್ಲಾ ಮಿಂಕ್‌ಗಳನ್ನು ಹತ್ಯೆ ಮಾಡಲು ಆದೇಶಿಸಿದೆ.

ಸ್ಪೇನ್‌ನಲ್ಲಿ 1 ಲಕ್ಷಕ್ಕೂ ಅಧಿಕ ಮಿಂಕ್ ಪ್ರಾಣಿಗಳನ್ನು ಕೊಂದಿದ್ದರೆ ಅತ್ತ ನೆದರ್ಲೆಂಡ್‌ನಲ್ಲೂ ಇವುಗಳನ್ನು ಕೊಲ್ಲಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಪ್ರಾಣಿಯಿಂದ ಕರೊನಾ ವೈರಸ್ ಮನುಷ್ಯದ ದೇಹಕ್ಕೆ ಹರಡುವ ಸಾಧ್ಯತೆ ಹೆಚ್ಚು ಎಂದಿದೆ. ಚೀನಾ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಮಿಂಕ್ ಪ್ರಾಣಿಗಳ ಪರೀಕ್ಷೆ ನಡೆಸಲಾಗಿದೆ. ಶೇಕಡ 87 ರಷ್ಟು ಮಿಂಕ್ ಪ್ರಾಣಿಗಳಲ್ಲಿ ವೈರಸ್ ಇರುವುದು ದೃಢಪಟ್ಟಿದೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net