

ರಾಯಚೂರು: ಇತ್ತೀಚಿನ ಕೆಲ ತಿಂಗಳುಗಳಿಂದ ಹದಿ ಹರೆಯದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಕ್ಷುಲ್ಲಕ ಎಂಬಂತಹ ಕಾರಣಕ್ಕೆ ಉನ್ನತ ಭವಿಷ್ಯ ಕಾಣಬೇಕಿದ್ದ ವಿದ್ಯಾರ್ಥಿಗಳು ಜೀವನವನ್ನೇ ಕೊನೆಗಾಣಿಸುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ವಿದ್ಯಾರ್ಥಿನಿಯೊಬ್ಬಳು ತರಗತಿಯನ್ನು ಅರ್ಧಕ್ಕೆ ಬಿಟ್ಟು ಬಂದಿದ್ದಾಳೆ. ನೇರವಾಗಿ ಹಾಸ್ಟೆಲ್ಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜಿಲ್ಲೆಯ ಲಿಂಗಸೂಗೂರು ಪಟ್ಟಣದ ವಿಸಿಬಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಐಶ್ವರ್ಯ (18) ನೇಣು ಹಾಕಿಕೊಂಡ ವಿದ್ಯಾರ್ಥಿನಿ. ಗೋನವಾಟ್ಲ ತಾಂಡಾದ ನಿವಾಸಿಯಾಗಿರುವ ವಿದ್ಯಾರ್ಥಿನಿ ಐಶ್ವರ್ಯ ನೇರವಾಗಿ ಹಾಸ್ಟೆಲ್ ಕೋಣೆಗೆ ಬಂದು ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಳೆ.
ವಿದ್ಯಾರ್ಥಿನಿ ಐಶ್ವರ್ಯ ಆತ್ಮಹತ್ಯೆಗೆ ಶರಣಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಲಿಂಗಸೂಗೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರ ತನಿಖೆಯಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಬಹಿರಂಗವಾಗಬೇಕಿದೆ.