

ಬೆಂಗಳೂರು: ಬಹುತೇಕ ಮಂದಿ ನಗರ ಪ್ರದೇಶಗಳಲ್ಲಿ ಕಂಡಿರುತ್ತೀರಿ... ಹೊರಗೆ ಸುತ್ತಾಡಲು ಹೋಗುವಾಗ ತಮ್ಮ ಪ್ರೀತಿಯ ನಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿರುವ ದೃಶ್ಯ. ಸಾಮಾನ್ಯವಾಗಿ ಭದ್ರತೆಯಿಂದ ದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸಿಕೊಂಡು ನಾಯಿಯನ್ನು ಕಾರಿನಲ್ಲಿ ಕೂರಿಸಿ ಕರೆದುಕೊಂಡು ಹೋಗುತ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ತನ್ನ ಕಾರಿನ ಮೇಲೆ (top of a car) ನಾಯಿಯನ್ನು ಹತ್ತಿಸಿಕೊಂಡು ನಗರವೆಲ್ಲಾ ಸುತ್ತಾಡಿದ್ದಾನೆ.
ನಾಯಿ ಕಾರಿನ ಟಾಪ್ನ ಮೇಲೆ ಕುಳಿತುಕೊಂಡು ರಾತ್ರಿ ಹೊತ್ತಿನಲ್ಲಿ ಸಂಚರಿಸುತ್ತಿರುವುದನ್ನು ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಜತೆಗೆ ತರಹೇವಾರಿ ಪ್ರತಿಕ್ರಿಯೆಗಳು ಕೂಡ ಬರುತ್ತಿವೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಈಗಾಗಲೇ 35 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಈ ವೀಡಿಯೋ ನೋಡಿದ ನಾಯಿ ಪ್ರೇಮಿಗಳು ಕಾರಿನ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳಿಗೆ ತಿಳುವಳಿಕೆ ಕಡಿಮೆ ಇರುತ್ತದೆ. ಅದರಲ್ಲೂ ಕಾರಿನ ಟಾಪ್ನ ಮೇಲೆ ಹತ್ತಿಸಿಕೊಂಡು ಪ್ರಯಾಣಿಸುವಾಗ ಒಂದೇ ಬಾರಿಗೆ ನಾಯಿ ರಸ್ತೆಗೆ ಎಸೆಯಲ್ಪಟ್ಟರೆ ದೊಡ್ಡ ಗಂಢಾಂತರವೇ ಸಂಭವಿಸಬಹುದು ಎಂದು ಕಮೆಂಟ್ ಮಾಡಿದ್ದಾರೆ. ಈ ವೇಳೆ ನಾಯಿಯ ಜೀವಕ್ಕೆ ಆಪತ್ತು ಎದುರಾಗುತ್ತಿದ್ದರೆ ಏನು ಕಥೆ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದು ತಮಾಷೆಯಲ್ಲ ಎಂದು ಹಲವು ಮಂದಿ ಹೇಳಿದ್ದಾರೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರು ನಗರ ಸಂಚಾರಿ ಪೊಲೀಸರನ್ನು ಟ್ವಿಟರ್ನಲ್ಲಿ ಟ್ಯಾಗ್ ಮಾಡಿದ್ದಾರೆ. ಕಾರಿನ ಚಾಲಕನನ್ನು ಪತ್ತೆ ಮಾಡಿ ಕ್ರಮ ಜರುಗಿಸಿ ಎಂದು ಕೇಳಿಕೊಂಡಿದ್ದಾರೆ.