

ನವದೆಹಲಿ: ಸಂಸತ್ ಭವನದಲ್ಲಿಂದು ಕಲಾಪ ನಡೆಯುವ ಸಮಯದಲ್ಲೇ ಅಪರಿಚಿತರಿಬ್ಬರು ಹಳದಿ ಬಣ್ಣ ಹೊರ ಸೂಸುವ ವಸ್ತುವನ್ನು ಹಿಡಿದು ಪ್ರೇಕ್ಷಕರ ಗ್ಯಾಲರಿಯಿಂದ ಸ್ಪೀಕರ್ ಕಚೇರಿಯತ್ತು ನುಗ್ಗುವ ಮೂಲಕ ಆತಂಕದ ವಾತಾವರಣ ಸೃಷ್ಟಿಮಾಡಿದರು. 2001ರಲ್ಲಿ ಹಳೆಯ ಸಂಸತ್ ಭವನದ ಮೇಲೆ ನಡೆದ ಉಗ್ರ ದಾಳಿ ಇಂದು 22 ವರ್ಷ ಪೂರೈಸಿದೆ. ಇದೇ ದಿನ ಮತ್ತೊಂದು ಕರಾಳ ಘಟನೆಗೆ ದೇಶದ ಜನತೆ ಸಾಕ್ಷಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.
ಆರೋಪಿಗಳು ಹಸಿರು ಬಣ್ಣ ಹೊರ ಸೂಸುವ ಡಬ್ಬಿ ಅಥವಾ ಕಲರ್ ಗ್ಯಾಸ್ ಕ್ಯಾನಿಸ್ಟರ್ಗಳನ್ನು ಹಿಡಿದು ಏಕಾಏಕಿ ನುಗ್ಗಿದರು. ಇದನ್ನು ಕಂಡು ಭಯಭೀತರಾದ ಸಂಸದರು ದಿಕ್ಕಾಪಾಲಾಗಿ ಓಡಿದರು. ಇಡೀ ಸದನವೇ ಹಳದಿ ಹೊಗೆಯಿಂದ ಆವೃತಗೊಂಡಿತ್ತು. ಕೊನೆಗೂ ಸಂಸದರು ಮತ್ತು ಭದ್ರತಾ ಸಿಬ್ಬಂದಿಗಳ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಗಿದೆ.
ಕಲರ್ ಗ್ಯಾಸ್ ಕ್ಯಾನಿಸ್ಟರ್ ಕುರಿತು
ಹೊಗೆ ಡಬ್ಬಿ ಅಥವಾ ಹೊಗೆ ಕ್ಯಾನ್ಗಳೆಂದು ಕರೆಯಲ್ಪಡುವ ಕಲರ್ ಗ್ಯಾಸ್ ಕ್ಯಾನಿಸ್ಟರ್ಗಳನ್ನು ಅನೇಕ ದೇಶಗಳಲ್ಲಿ ಕಾನೂನುಬದ್ಧಗೊಳಿಸಲಾಗಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲೂ ಇದು ಸುಲಭವಾಗಿ ದೊರೆಯುತ್ತದೆ. ಇದರ ಉದ್ದೇಶವನ್ನು ಅವಲಂಬಿಸಿ ಬಳಕೆ ಮಾಡಲಾಗುತ್ತದೆ. ಇನ್ನೂ ಈ ಕ್ಯಾನ್‌ಗಳನ್ನು ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು, ಕ್ರೀಡಾ ಕಾರ್ಯಕ್ರಮ ಅಥವಾ ಫೋಟೋಶೂಟ್‌ನಲ್ಲೂ ಬಳಸುತ್ತಾರೆ.
ಹೊಗೆ ಕ್ಯಾನ್ಗಳಿಂದ ಹೊರಸೂಸುವ ದಪ್ಪ ಹೊಗೆಯಿಂದ ರೂಪುಗೊಂಡ ಹೊಗೆ ಪರದೆಗಳನ್ನು ಮಿಲಿಟರಿ ಕಾರ್ಯಾಚರಣೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ದಟ್ಟವಾದ ಹೊಗೆಯು ಸೈನ್ಯದ ಚಲನೆಯನ್ನು ಅಸ್ಪಷ್ಟಗೊಳಿಸುತ್ತವೆ. ಇದರಿಂದ ಶತ್ರುಗಳ ಕಣ್ಣುಗಳಿಗೆ ಅಗೋಚರವಾಗುವಂತೆ ಮಾಡುತ್ತವೆ. ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಇವು ನಿರ್ಣಾಯಕ ರಕ್ಷಣೆಯನ್ನು ಒದಗಿಸುತ್ತವೆ. ವಾಯುದಾಳಿಗಳು, ಸೈನ್ಯದ ಇಳಿಯುವಿಕೆ ಮತ್ತು ಸ್ಥಳಾಂತರಿಸುವ ಸಂದರ್ಭದಲ್ಲಿ ಈ ಹೊಗೆ ಕ್ಯಾನ್‌ಗಳನ್ನು ಬಳಸಲಾಗುತ್ತದೆ. ಫೋಟೋಗ್ರಫಿಯಲ್ಲಿ ಒಳ್ಳೆಯ ಎಫೆಕ್ಟ್ ಮತ್ತು ಭ್ರಮೆಗಳನ್ನು ಸೃಷ್ಟಿಸಲು ಹೊಗೆ ಕ್ಯಾನ್‌ಗಳು ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ. ಕ್ರೀಡೆಗಳಲ್ಲಿ ವಿಶೇಷವಾಗಿ ಫುಟ್ಬಾಲ್ನಲ್ಲಿ ಅಭಿಮಾನಿಗಳು ತಮ್ಮ ಕ್ಲಬ್‌ಗಳ ಬಣ್ಣಗಳನ್ನು ಪ್ರದರ್ಶಿಸಲು ಹೊಗೆ ಡಬ್ಬಿಗಳನ್ನು ಬಳಸುತ್ತಾರೆ.
ನಾಲ್ವರ ಬಂಧನ
ಪ್ರಾಥಮಿಕ ತನಿಖೆಯ ಪ್ರಕಾರ ಸದನದ ಒಳಗಡೆ ನುಗ್ಗಿದ ಇಬ್ಬರು ಆರೋಪಿಗಳನ್ನು ಸಾಗರ್ ಶರ್ಮ ಮತ್ತು ಮನೋರಂಜ್ ಡಿ ಎಂದು ಗುರುತಿಸಲಾಗಿದೆ. ಸಾಗರ್ ಶರ್ಮ ಎಂಬಾತ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹೆಸರಲ್ಲಿ ಪಾಸ್ ಪಡೆದರೆ, ಮತ್ತೊಬ್ಬ ಆರೋಪಿ ಮೈಸೂರು ಮೂಲದ ಇಂಜಿನಿಯರ್ ಮನೋರಂಜನ್ ಡಿ ಎಂದು ಗುರುತಿಸಲಾಗಿದೆ. ಇದೇ ಸಮಯದಲ್ಲಿ ಓರ್ವ ಪುರುಷ ಮತ್ತು ಮಹಿಳೆ ಸಂಸತ್ತಿನ ಹೊರಭಾಗದಲ್ಲಿ ಹಳದಿ ಬಣ್ಣ ಹೊರಸೂಸುವ ವಸ್ತುವನ್ನು ಹಿಡಿದು ಪ್ರತಿಭಟನೆ ನಡೆಸಿದರು. ಇಬ್ಬರು ಸಾರಿಗೆ ಭವನದ ಎದುರು ಪೊಲೀಸರು ಬಂಧಿಸಿದ್ದು, ಅವರನ್ನು 42 ವರ್ಷದ ನೀಲಂ ಮತ್ತು 25 ವರ್ಷದ ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ನೀಲಂ ಹರಿಯಾಣದ ಹಿಸಾರ್ ನಿವಾಸಿ ಮತ್ತು ಅಮೋಲ್ ಶಿಂಧೆ ಮಹಾರಾಷ್ಟ್ರದ ಲಾತೂರ್ ನಿವಾಸಿಯಾಗಿದ್ದು, ಒಟ್ಟು ನಾಲ್ವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಲೋಕಸಭೆ ಸ್ಪೀಕರ್ ಹೇಳಿದ್ದೇನು?
ಘಟನೆಯ ಬಗ್ಗೆ ಮಾತನಾಡಿರುವ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಶೂನ್ಯ ಸಮಯದಲ್ಲಿ ನಡೆದ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ಸಹ ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಇದು ಕೇವಲ ಹೊಗೆ ಎಂದು ಕಂಡುಬಂದಿದೆ. ಹೊಗೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು ಹೇಳಿದರು. ಸದ್ಯ ಇಬ್ಬರನ್ನೂ ಬಂಧಿಸಲಾಗಿದ್ದು, ಅವರಲ್ಲಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಸತ್ತಿನ ಹೊರಗಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು. (ಏಜೆನ್ಸೀಸ್)