ಎಂಆರ್​ಎಂಸಿ ಮೆಡಿಕಲ್ ಕಾಲೇಜಲ್ಲಿ ಕೋಟ್ಯಂತರ ರೂ. ಲೂಟಿ?

MRMC College
Published on

ರಮೇಶ ಮೇಳಕುಂದಾ ಕಲಬುರಗಿ
ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆ ಮಹಾದೇವಪ್ಪ ರಾಂಪೂರೆ ಮೆಡಿಕಲ್ (ಎಂಆರ್​ಎಂಸಿ) ಕಾಲೇಜಿನಲ್ಲಿ ಕೋಟ್ಯಂತರ ರೂ. ಶಿಷ್ಯವೇತನ ಲೂಟಿ ಆರೋಪ ಕೇಳಿ ಬರುತ್ತಿದೆ. ರಾಜ್ಯದ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಇದೇ ತೆರನಾದ ಸ್ಟೈಪೆಂಡ್ ಮಾಫಿಯಾ ನಡೆಯುತ್ತಿರುವ ಗುಮಾನಿಯೂ ಇದೆ.

ಎಂಆರ್​ಎಂಸಿಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆಯುತ್ತಿರುವ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಖಾತೆಗೆ ಪ್ರತಿ ತಿಂಗಳು ತಲಾ 45ರಿಂದ 55 ಸಾವಿರ ರೂ.ವರೆಗೆ ಶಿಷ್ಯವೇತನ ಜಮಾ ಮಾಡಲಾಗುತ್ತಿದೆ. ಆದರೆ ಅದನ್ನು ಆಡಳಿತ ಮಂಡಳಿ ಅಕ್ರಮವಾಗಿ ಡ್ರಾ ಮಾಡಿಕೊಳ್ಳುತ್ತಿದೆ.

ಪ್ರವೇಶಾತಿ ವೇಳೆಯಲ್ಲಿಯೇ ವಿದ್ಯಾರ್ಥಿಗಳಿಂದ 36 ಬ್ಲ್ಯಾಂಕ್ ಚೆಕ್​ಗಳನ್ನು ಪಡೆಯಲಾಗುತ್ತದೆ. ಇವುಗಳ ಸಹಾಯದಿಂದ ಹಣ ಡ್ರಾ ಮಾಡಿಕೊಳ್ಳಲಾಗುತ್ತಿದೆ. 300 ವಿದ್ಯಾರ್ಥಿಗಳಿಂದ ತಲಾ 45 ಸಾವಿರ ರೂ. ಎಂದರೆ ತಿಂಗಳಿಗೆ 1.35 ಕೋಟಿ ರೂ., ವಾರ್ಷಿಕ 16.20 ಕೋಟಿ ರೂ. ಹೀಗೆ ಐದಾರು ವರ್ಷದಿಂದಲೂ ಅಕ್ರಮ ನಡೆಯುತ್ತಿದ್ದು, ಸುಮಾರು 100 ಕೋಟಿ ರೂ. ಹಗರಣ ಇದಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಪ್ರಶ್ನಿಸಿದ ವಿದ್ಯಾರ್ಥಿಗೆ ಆಂತರಿಕ ಅಂಕ, ಹಾಜರಾತಿ ಕಡಿತದ ಬೆದರಿಕೆ ಹಾಕಲಾಗುತ್ತಿರುವುದರಿಂದ ಇತರರು ಬಹಿರಂಗವಾಗಿ ಪ್ರಶ್ನೆ ಮಾಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಕೇವಲ ಶೇ.20 ಹಣ ನೀಡುತ್ತಿದ್ದು, ಬಾಕಿ ಹಣ ವಿತ್ ಡ್ರಾ ಮಾಡಿಕೊಳ್ಳಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

Scholarship

ಹೈಕೋರ್ಟ್ ಆದೇಶದ ಪ್ರಕಾರ ಶಿಷ್ಯವೇತನ ವಿದ್ಯಾರ್ಥಿಗಳ ಶಾಸನಬದ್ಧ ಹಕ್ಕು, ಅದನ್ನು ನೀಡಬೇಕು. ಆದರೆ, ಇಲ್ಲಿ ವಿದ್ಯಾರ್ಥಿಗಳ ಖಾತೆಗೆ ವೇತನ ಜಮಾ ಮಾಡಿ, ಅದನ್ನು ಆಂತರಿಕ ಅಂಕ ಹಾಗೂ ಹಾಜರಾತಿ ಬೆದರಿಕೆಯಿಂದ ವಾಪಸ್ ಪಡೆಯಲಾಗುತ್ತಿದೆ. ಇದರಲ್ಲಿ ಕಾಲೇಜಿನ ಡೀನ್ ಸೇರಿ ಆಡಳಿತ ಮಂಡಳಿಯ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಸಿಐಡಿ ಅಥವಾ ಇಡಿಯಿಂದ ತನಿಖೆ ನಡೆಸಬೇಕೆಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ನೀಡಬೇಕಾದ ಇಂಟರ್ನ್​ಶಿಪ್ ವೇತನವನ್ನೂ ನೀಡುತ್ತಿಲ್ಲ ಎಂಬ ದೂರುಗಳಿವೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಈ ಕಾಲೇಜಿನ ಹಳೆಯ ವಿದ್ಯಾರ್ಥಿ ಆಗಿದ್ದು, ಅವರ ಪತ್ನಿ ಮತ್ತು ಸಂಬಂಧಿಕರು ಇದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವುದು ಗಮನಾರ್ಹ.

ಪಿಜಿ ಸ್ಟೂಡೆಂಟ್​ಗೆ ಶಿಷ್ಯವೇತನ ನೀಡುತ್ತಿದ್ದೇವೆ. ರಾಜೀವ್​ಗಾಂಧಿ ವಿವಿಯವರು ಕಾಲೇಜಿಗೆ ಬಂದು ತನಿಖೆ ನಡೆಸಿ, ವರದಿ ನೀಡಿದ್ದಾರೆ. ಹಣ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗುತ್ತದೆ. ಆಡಳಿತ ಮಂಡಳಿ ಪಡೆದಿಲ್ಲ. ಶಿಷ್ಯವೇತನ ವಿದ್ಯಾರ್ಥಿಗಳ ಹಕ್ಕು. ನಮ್ಮ ಆಡಳಿತಾವಧಿಯಲ್ಲಿ ಆಗಿಲ್ಲ. ಹಿಂದಿನವರು ಮಾಡಿದ್ದರೆ ಗೊತ್ತಿಲ್ಲ.

| ಭೀಮಾಶಂಕರ ಬಿಲಗುಂದಿ ಅಧ್ಯಕ್ಷ, ಎಚ್​ಕೆಇ ಸಂಸ್ಥೆ

ಎಂಆರ್​ಎಂಸಿ ಕಾಲೇಜಿನ ಶಿಷ್ಯವೇತನ ಅಕ್ರಮ ಕುರಿತು ದೂರು ಬಂದಿದೆ. ಸೆನ್ ಠಾಣೆ ಅಧಿಕಾರಿಗಳಿಗೆ ತನಿಖೆ ನಡೆಸಲು ಸೂಚಿಸಿದ್ದೇನೆ. ವಿಚಾರಣೆ ನಡೆಸಲಾಗುತ್ತಿದೆ.

| ಆರ್.ಚೇತನ್ ನಗರ ಪೊಲೀಸ್ ಆಯುಕ್ತ

ಎಚ್​ಕೆಇ ಸಂಸ್ಥೆ ಅಧ್ಯಕ್ಷ ಮಾಡಿದ ತಪ್ಪಿಗೆ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ. ಈ ಬಗೆಗಿನ ಗೊಂದಲ ಬಗೆಹರಿಸಿ, ಸಂಸ್ಥೆ ಮರ್ಯಾದೆ ಉಳಿಸಬೇಕು.

| ಉದಯಕುಮಾರ ಚಿಂಚೋಳಿ ಎಚ್​ಕೆಇ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net