5,232 ಯಹೂದಿಗಳ ಹತ್ಯೆಗೆ ಸಹಕರಿಸಿದ್ದಕ್ಕೆ 93 ವರ್ಷದ ವೃದ್ಧನಿಗೆ ಜೈಲು ಶಿಕ್ಷೆ

nazi camp
Published on

ನವದೆಹಲಿ: ನಾಜಿ ಕ್ಯಾಂಪ್​ನ ಮಾಜಿ ಗಾರ್ಡ್​ ಆಗಿದ್ದು, 5,232 ಯಹೂದಿ ಬಂಧಿಗಳನ್ನು ಹತ್ಯೆ ಮಾಡಲು ಸಹಕರಿಸಿದ್ದಕ್ಕಾಗಿ ಜರ್ಮನಿಯ ನ್ಯಾಯಾಲಯವೊಂದು 93 ವರ್ಷದ ವೃದ್ಧನಿಗೆ ಜೈಲು ಶಿಕ್ಷೆ ವಿಧಿಸಿದೆ. ಆದರೆ, ವಯಸ್ಸಾಗಿರುವ ಹಿನ್ನೆಲೆಯಲ್ಲಿ ಅವರು ಜೈಲುಶಿಕ್ಷೆ ಅನುಭವಿಸಿದ್ದಾಗಿ ಭಾವಿಸಿ ಬಿಡುಗಡೆ ಮಾಡಿದೆ. ತನ್ಮೂಲಕ ನಾಜಿ ಯುಗದ ಕೊನೆಯ ಪ್ರಕರಣ ಕೂಡ ಇತ್ಯರ್ಥವಾದಂತಾಗಿದೆ.

ಡಿ. ಬ್ರ್ಯೂನೋ (93) ಇಂದು ಪೋಲೆಂಡ್​ ಎಂದು ಗುರುತಿಸಲ್ಪಡುವ ಡಾನ್ಸ್ಕ್​ ಬಳಿಯ ಸ್ಟಟ್​ಆಫ್​ ಕಾನ್ಸೆಂಟ್ರೇಷನ್​ ಕ್ಯಾಂಪ್​ನಲ್ಲಿ ಎಸ್​ಎಸ್ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದರು. 1944ರ ಆಗಸ್ಟ್​ನಿಂದ 1945ರ ಏಪ್ರಿಲ್​ ನಡುವೆ ಈ ಕ್ಯಾಂಪ್​ನಲ್ಲಿದ್ದ 5,232 ಯಹೂದಿಗಳನ್ನು ಹತ್ಯೆ ಮಾಡಲು ಸಹಕರಿಸಿದ್ದರು ಎನ್ನಲಾಗಿದೆ.

ಆ ಸಂದರ್ಭದಲ್ಲಿ ತಾವು ಕ್ಯಾಂಪ್​ನಲ್ಲಿ ಇದ್ದುದಾಗಿಯೂ, ಆದರೆ ಹತ್ಯೆಗೂ ತಮಗೂ ಯಾವುದೇ ಸಂಬಂಧ ಇಲ್ಲವೆಂದು ಡಿ. ಬ್ರ್ಯೂನೋ ವಾದಿಸಿದ್ದರು.

ಸ್ಟಟ್​ಆಫ್​ ಕ್ಯಾಂಪ್​ನಲ್ಲಿ ಯಹೂದಿಗಳು ಸೇರಿ ಒಟ್ಟು 65 ಸಾವಿರಕ್ಕೂ ಹೆಚ್ಚು ಮಂದಿ ಇದ್ದರು. ಇವರೆಲ್ಲರ ತಲೆಗೆ ಹಿಂದಿನಿಂದ ಗುಂಡಿಕ್ಕಿ ಇಲ್ಲವೇ ಮಾರಕ ಝೈಕ್ಲಾನ್​ ಬಿ ವಿಷಾನಿಲದ ಚೇಂಬರ್​ಗೆ ತಳ್ಳಿ ಹತ್ಯೆ ಮಾಡಲಾಗಿದೆ. ಇದು ವಸ್ತುಸಂಗ್ರಹಾಲಯದ ವೆಬ್​ಸೈಟ್​ನಲ್ಲಿ ದಾಖಲಾಗಿದೆ ಎಂದು ಪಬ್ಲಿಕ್​ ಪ್ರಾಸಿಕ್ಯೂಟರ್​ಗಳು ವಾದಿಸಿದ್ದರು.

ಆ ಹತ್ಯೆಗಳು ಆದ ಸಂದರ್ಭದಲ್ಲಿ ಬ್ರ್ಯೂನೋ 17 ಅಥವಾ 18 ವರ್ಷ ವಯಸ್ಸಿನವರಾಗಿದ್ದರು. ಹಾಗಾಗಿ ಅವರ ವಿರುದ್ಧ ಬಾಲನ್ಯಾಯದ ಪ್ರಕಾರ ವಿಚಾರಣೆ ನಡೆಸಿ, ಮೂರು ವರ್ಷದ ಜೈಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದರು.

ಆ ಕ್ಯಾಂಪ್​ನಲ್ಲಿದ್ದ ಬಂಧಿಗಳು ಅನುಭವಿಸಿದ ಸಂಕಷ್ಟಕ್ಕೆ ಮರುಗಿದ್ದ ಬ್ರ್ಯೂನೋ ಇದಕ್ಕಾಗಿ ಕ್ಷಮಾಪಣೆ ಕೋರಿದ್ದರು. ಆದರೆ ಹತ್ಯೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಆದರೂ ಸರ್ಕಾರ ಅವರಿಗೆ ಶಿಕ್ಷೆ ವಿಧಿಸಿ, ವಯಸ್ಸಿನ ಕಾರಣ ಅದನ್ನು ರದ್ದುಗೊಳಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net