

ಹೈದರಾಬಾದ್: ಕರೊನಾ ವೈರಸ್ ಬಂದ ಮೇಲಂತೂ ಚಿತ್ರರಂಗದ ಬಹುತೇಕ ಕೆಲಸಗಳು ಸ್ಥಗಿತಗೊಂಡಿವೆ. ಚಿತ್ರಮಂದಿರಗಳಂತೂ ಇನ್ನು ತೆರೆದೇ ಇಲ್ಲ. ಹೀಗಾಗಿ ಅನೇಕರು ಒಟಿಟಿ ವೇದಿಕೆಯಲ್ಲಿ ಚಿತ್ರ ಬಿಡುಗಡೆಗೆ ಮುಂದಾಗಿದ್ದು, ಆ ಸಾಲಿಗೆ ಇದೀಗ ನಟಿ ಶಕೀಲಾ ಅವರು ಸೇರಿಕೊಂಡಿದ್ದಾರೆ.
ತಮ್ಮದೇ ನಿರ್ಮಾಣದ "ಲೇಡಿಸ್ ನಾಟ್ ಅಲೌಡ್" ಚಿತ್ರವನ್ನು ಸಿನಿಮಾ ಹೆಸರಿನಲ್ಲೇ ವೆಬ್ಸೈಟ್ ತೆರೆದು ಶಕೀಲಾ ಆ್ಯಂಡ್ ಟೀಮ್ ಬಿಡುಗಡೆ ಮಾಡಿದೆ. ಇದಕ್ಕೂ ಮುನ್ನ ಯೂಟ್ಯೂಬ್ನಲ್ಲಿ ವಿಡಿಯೋ ಸಂದೇಶವನ್ನು ಹರಿಬಿಟ್ಟಿರುವ ಶಕೀಲಾ, ಎಲ್ಲರೂ ಚಿತ್ರ ನೋಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಮಹಿಳೆಯರು ಮಾತ್ರ ಚಿತ್ರವನ್ನು ನೋಡಬೇಡಿ ಎಂದು ಎಚ್ಚರಿಸಿದ್ದಾರೆ.
ಸಾಕಷ್ಟು ಸಾಲ ಪಡೆದು ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರೀಕರಣ ಎರಡು ವರ್ಷದ ಹಿಂದೆ ಮುಗಿದತ್ತು. ಆದರೆ, ಸೆನ್ಸಾರ್ ಇನ್ನೂ ಮುಗಿದಿರಲಿಲ್ಲ. ಇದರ ನಡುವೆ ಕರೊನಾ ಮಹಾಮಾರಿಯಿಂದಾಗಿ ಮತ್ತೆ ಮುಂದಕ್ಕೆ ಹೋಯಿತು. ಇದೀಗ ಚಿತ್ರಮಂದಿರಗಳು ಮುಚ್ಚಿರುವುದರಿಂದ ಒಟಿಟಿಯಲ್ಲಿ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಅಂದಹಾಗೆ ಲೇಡಿಸ್ ನಾಟ್ ಅಲೌಡ್ ಚಿತ್ರ ಅಡಲ್ಟ್ ಕಾಮಿಡಿ-ಹಾರರ್ ಚಿತ್ರವಾಗಿದೆ. ಸಾಯಿ ರಾಮ್ ದಾಸರಿ ಎಂಬುವರು ನಿರ್ದೇಶಿಸಿದ್ದು, ಶಕೀಲಾ ಅವರೇ ಬಂಡವಾಳ ಹೂಡಿದ್ದಾರೆ. ಲೇಡಿಸ್ ನಾಟ್ ಅಲೌಡ್ ವೆಬ್ಸೈಟ್ನಲ್ಲಿ 50 ರೂ. ಪಾವತಿಸಿ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಜುಲೈ 20 ರಾತ್ರಿ 8 ಗಂಟೆಗೆ ಚಿತ್ರ ಬಿಡುಗಡೆಯಾಗಿದೆ. (ಏಜೆನ್ಸೀಸ್)