ಸೂಪ್​ನಲ್ಲಿ ಸತ್ತ ಬಾವಲಿ ಕಂಡ ಕೂಡಲೇ ಆಸ್ಪತ್ರೆಗೆ ಓಡಿದ ಕುಟುಂಬಕ್ಕೆ ಕಾದಿತ್ತು ಸರ್ಪ್ರೈಸ್​!

Soup
Published on

ಬೀಜಿಂಗ್​: ರೆಸ್ಟೋರೆಂಟ್​ ಒಂದರಲ್ಲಿ ಹಂದಿ ಮಾಂಸದ ಸೂಪ್​ನಲ್ಲಿ ಸತ್ತ ಬಾವಲಿಯನ್ನು ನೋಡಿದ ಕುಟುಂಬವೊಂದು ತಕ್ಷಣ ಕರೊನಾ ವೈರಸ್​ ಪರೀಕ್ಷೆ ಮಾಡಿಸಿಕೊಳ್ಳಲು ವೈದ್ಯರ ಬಳಿಗೆ ಧಾವಿಸಿದ ಪ್ರಸಂಗ ಕರೊನಾ ತವರು ಚೀನಾದ ವುಹಾನ್​ನಲ್ಲಿ ನಡೆದಿದೆ.

ಅರ್ಧ ಖಾಲಿಯಾಗಿದ್ದ ಸೂಪ್​ನಲ್ಲಿ ಸತ್ತ ಬಾವಲಿಯೊಂದು ಪತ್ತೆಯಾದಂತಹ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೂಪ್​ ಕುಡಿದ ತಕ್ಷಣ ಕರೊನಾ ಸೋಂಕು ತಗುಲಬಹುದೆಂಬ ಗಾಬರಿಯಿಂದ ಕುಟುಂಬವು ಆಸ್ಪತ್ರೆಗೆ ತೆರಳಿದೆ. ಆದರೆ, ಅವರ ವರದಿ ನೆಗಿಟಿವ್​ ಬಂದಿರುವುದು ನಿಟ್ಟುಸಿರಿಗೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಡಿಸೆಂಬರ್​ನಲ್ಲಿ ಮೊದಲು ಕರೊನಾ ಸ್ಪೋಟಗೊಂಡ ಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರದಲ್ಲಿ ಈ ಪ್ರಸಂಗ ಜರುಗಿದೆ. ಮನೆಯ ಸಮೀಪದ ರೆಸ್ಟೋರೆಂಟ್​ನಿಂದ ಚೆನ್​ ಕುಟುಂಬ ಜುಲೈ 10ರಂದು ಹಂದಿ ಮಾಂಸದ ಸೂಪ್​ ತರಿಸಿಕೊಂಡಿತ್ತು. ಆರಂಭದಲ್ಲಿ ಸ್ವಲ್ಪ ಸೂಪ್​ ಸೇವಿಸಿದಾಗ ಚೆನ್​ ಕುಟುಂಬಕ್ಕೆ ಏನು ಗೊತ್ತಾಗಿಲ್ಲ. ಬಳಿಕ ಎಲ್ಲರು ಒಟ್ಟಾಗಿ ಕುಳಿತು ಆಹಾರ ಸೇವಿಸುವಾಗ ಸೂಪ್​ನಲ್ಲಿ ಸತ್ತ ಸಣ್ಣ ಬಾವಲಿಯನ್ನು ಕಂಡು ಹೌಹಾರಿದ್ದಾರೆ.

ಈ ಬಗ್ಗೆ ರೆಸ್ಟೋರೆಂಟ್​ ಮಾಲೀಕರಿಗೆ ಹೇಳಿದಾಗ ಅವರು ನಿರಾಕರಿಸಿದ್ದಾರೆ. ಸಾಮಾನ್ಯವಾಗಿ ಬಾವಲಿಗಳು ರಾತ್ರಿ ಸಮಯದಲ್ಲಿ ಮಾತ್ರ ಸಕ್ರೀಯವಾಗಿರುತ್ತವೆ. ಆದರೆ, ನಾವು ಬೆಳಗಿನ ಸಮಯದಲ್ಲಿ ಸೂಪ್​ ತಯಾರಿಸುತ್ತೇವೆ. ಸೂಪ್​ ತಯಾರಾದ ತಕ್ಷಣವೇ ನಾವು ಅದನ್ನು ಮುಚ್ಚಿ ಅದನ್ನು ಫ್ರಿಡ್ಜ್​ನಲ್ಲಿ ಇಡುತ್ತೇವೆ. ಯಾವುದೇ ಕಾರಣಕ್ಕೂ ಅದನ್ನು ಹೊರಗಡೆ ಇಡುವುದಿಲ್ಲ. ಹೀಗಾಗಿ ಇದು ನಮ್ಮಿಂದಾದ ತಪ್ಪಲ್ಲ ಎಂದು ಮಾಲೀಕ ಸಮಜಾಯಿಷಿ ನೀಡಿದ್ದಾರೆ.

ಇದೀಗ ಸ್ಥಳೀಯ ಪೊಲೀಸರಿಗೆ ದೂರು ದಾಖಲಾಗಿದ್ದು, ಸೂಪ್​ನಲ್ಲಿ ಬಾವಲಿ ಹೇಗೆ ಬಂತೆಂದು ತಿಳಿಯಲು ತನಿಖೆ ನಡೆಸುತ್ತಿದ್ದಾರೆ. ಬಾವಲಿ ಪತ್ತೆ ಬೆನ್ನಲ್ಲೇ ಕರೊನಾ ಟೆಸ್ಟ್​ ನಡೆಸಿದ ಕುಟುಂಬದಲ್ಲಿ ಕರೊನಾ ನೆಗಿಟಿವ್​ ವರದಿಯಾಗಿದೆ. ಆರೋಪ ಸಾಬೀತಾದರೆ ಪರಿಹಾರ ನೀಡುವುದಾಗಿಯೂ ರೆಸ್ಟೋರೆಂಟ್​ ಮಾಲೀಕರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net