

ಕುಂದಾಪುರ: ತಡರಾತ್ರಿಯಲ್ಲಿ ನಾಯಿಯೊಂದಕ್ಕೆ ಹೆದರಿ ಓಡಿ ಹೋದ ಚಿರತೆ ತೆರೆದ ಬಾವಿಯೊಳಕ್ಕೆ ಬಿದ್ದು ಪರದಾಡಿದ ಪ್ರಸಂಗವೊಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರ ತಾಲೂಕು ಹೆಮ್ಮಾಡಿಯ ಕಟ್ ಬೆಲ್ತೂರು ಗ್ರಾಮದ ಸುಳ್ಸೆ ಬಳಿ ಶುಕ್ರವಾರ ತಡರಾತ್ರಿ ಈ ಪ್ರಸಂಗ ನಡೆದಿದೆ. ನಾಯಿಯೊಂದು ಓಡಿಸಿಕೊಂಡು ಬಂದಿದ್ದರಿಂದ ಹೆದರಿ ಓಡಿ ಹೋದ ಚಿರತೆ ತೋಟದಲ್ಲಿನ ಆವರಣವಿಲ್ಲದ ಬಾವಿಗೆ ಬಿದ್ದಿದೆ. ಹೀಗೆ ಬಿದ್ದ ಎರಡು ವರ್ಷದ ಗಂಡು ಚಿರತೆಯನ್ನು ಕಾರ್ಯಾಚರಣೆ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.
ಸುಳ್ಸೆ ನಿವಾಸಿ ಬಾಬು ಪೂಜಾರಿ ಎಂಬವರ ಮನೆ ಸಮೀಪದ ತೋಟದಲ್ಲಿನ ಬಾವಿಗೆ ಚಿರತೆ ಬಿದ್ದಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದ್ದು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ಬಾವಿಗೆ ಬೋನು ಇಳಿಸಿ ಚಿರತೆ ಬೋನಿನೊಳಕ್ಕೆ ಹೋದಾಗ ಮೇಲಕ್ಕೆತ್ತಿದ್ದಾರೆ. ಎರಡು ವರ್ಷ ಪ್ರಾಯದ ಗಂಡು ಚಿರತೆಯನ್ನು ರಕ್ಷಣೆ ಮಾಡಲಾಗಿದ್ದು, ಅದು ಆರೋಗ್ಯವಾಗಿದೆ. ಬಾವಿಯಲ್ಲಿ ಹೆಚ್ಚು ನೀರಿಲ್ಲದೆ ಇದ್ದಿದ್ದರಿಂದ ಚಿರತೆ ಜೀವ ಉಳಿದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕುಂದಾಪುರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ. ನಾಯಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಪರ್ಡ್ ಲೊಬೋ ಮಾರ್ಗದರ್ಶನದಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು, ಉಪ ವಲಯ ಅರಣ್ಯಾಧಿಕಾರಿಗಳಾದ ಉದಯ್, ಶರತ್, ಗುರುರಾಜ್, ದಿಲೀಪ್, ಸುನೀಲ್, ಗೀತಾ, ಅರಣ್ಯ ಇಲಾಖೆ ಸಿಬ್ಬಂದಿ ದೀಪಶ್ರೀ, ಮಾಲತಿ, ಉದಯ, ಬಸವರಾಜ್, ಚಂದ್ರಾವತಿ, ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದರು.