

ನವದೆಹಲಿ: ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ನಿಫಾ ವೈರಸ್ ಹಾವಳಿ ಉಂಟಾಗಿದ್ದು, ಈಗಾಗಲೇ ಇಬ್ಬರು ಸಾವಿಗೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆತಂಕ ಆವರಿಸಿದ್ದು, ಅದನ್ನು ಹೆಚ್ಚಿಸುವಂಥ ಇನ್ನೊಂದು ಸುದ್ದಿ ಹೊರಬಿದ್ದಿದೆ.
ಅದೇನೆಂದರೆ ನಿಫಾ ವೈರಸ್ ಕೋವಿಡ್ಗಿಂತಲೂ ಮಾರಕ. ಇಂಥದ್ದೊಂದು ಮಾಹಿತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಕೋವಿಡ್ ಸಾಂಕ್ರಾಮಿಕಕ್ಕಿಂತಲೂ ಮಾರಕ ಎಂದು ಐಸಿಎಂಆರ್ ಡೈರೆಕ್ಟರ್ ಜನರಲ್ ರಾಜೀವ್ ಬಹ್ಲ್ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಇವರು, ಕೋವಿಡ್ನಿಂದ ಸಂಭವಿಸಬಹುದಾದ ಮರಣ ಪ್ರಮಾಣ ಶೇ. 2-3 ಇತ್ತು. ಆದರೆ ನಿಫಾ ಮಾರ್ಟಾಲಿಟಿ ರೇಟ್ ಶೇ. 40ರಿಂದ 70ರಷ್ಟಿದೆ ಎಂದು ಹೇಳಿದ್ದಾರೆ. 2018ರಿಂದ ಕೇರಳದಲ್ಲಿ ಆಗಾಗ ನಿಫಾ ಹಾವಳಿ ಇಡುತ್ತಿದ್ದು, ಇದು ಬಾವಲಿಯಿಂದ ಬರುತ್ತಿದೆ ಎನ್ನಲಾಗಿದೆ. ಆದರೆ ಬಾವಲಿಯಿಂದ ಮನುಷ್ಯರಿಗೆ ಹೇಗೆ ಹರಡುತ್ತಿದೆ ಎಂಬುದ ಸ್ಪಷ್ಟವಾಗಿಲ್ಲ ಎಂದಿದ್ದಾರೆ.