

Andhra Pradesh: 21ನೇ ಶತಮಾನವು 140 ಕೋಟಿ ಭಾರತೀಯರಿಗೆ ಸೇರಿದ್ದು, 2047 ರ ವೇಳೆಗೆ ದೇಶ "ವಿಕಸಿತ ಭಾರತ" ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ( Narendra Modi) ಗುರುವಾರ (ಅ 16) ಹೇಳಿದ್ದಾರೆ.
ಆಂದ್ರ ಪ್ರದೇಶದಲ್ಲಿ 13,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿ ಮತ್ತು ಶಂಕುಸ್ಥಾಪನೆ ಮಾಡಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ನಾವು ಸ್ವದೇಶಿ ನಿರ್ಮಿತ ವಸ್ತುಗಳ ಶಕ್ತಿಯನ್ನು ಏನೆಂದು ಕಂಡಿದ್ದೇವೆ. ಸ್ವಾತಂತ್ರ್ಯದ ಶತಮಾನೋತ್ಸವ ವರ್ಷವಾದ 2047 ರ ವೇಳೆಗೆ ಭಾರತ ಸಂಪೂರ್ಣವಾಗಿ ಅಭಿವೃದ್ದಿ ಹೊಂದುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ದೂರದೃಷ್ಟಿಯ ನಾಯಕತ್ವಕ್ಕೆ, ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಗೂಗಲ್‌ನ AI ಹಬ್ ಹೂಡಿಕೆಯೊಂದಿಗೆ, ಹಲವಾರು ದೇಶಗಳ ಸಮುದ್ರದೊಳಗಿನ ಕೇಬಲ್ ವ್ಯವಸ್ಥೆಗಳನ್ನು ಸಂಪರ್ಕಿಸುವ ಹೊಸ ಅಂತರರಾಷ್ಟ್ರೀಯ ಸಬ್-ಸೀ ಗೇಟ್‌ವೇ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಆಂಧ್ರಪ್ರದೇಶದಲ್ಲಿ ಕಳೆದ 16 ತಿಂಗಳಿನಿಂದ ಅಭಿವೃದ್ಧಿಯ ವಾಹನ ಅತ್ಯಂತ ವೇಗವಾಗಿ ಚಲಿಸುತ್ತಿದೆ ಮತ್ತು ಡಬಲ್-ಎಂಜಿನ್ ಸರ್ಕಾರದಲ್ಲಿ ರಾಜ್ಯ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಆಂಧ್ರ ಸ್ವಾಭಿಮಾನ ಮತ್ತು ಸಂಸ್ಕೃತಿಯ ಭೂಮಿ ಮಾತ್ರವಲ್ಲ, ವಿಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವೂ ಆಗಿದೆ. ಇಂದು ಉದ್ಘಾಟನೆಗೊಂಡ ಅನೇಕ ಯೋಜನೆಗಳು ಸಂಪರ್ಕವನ್ನು ಸುಧಾರಿಸುತ್ತವೆ, ಕೈಗಾರಿಕೆಗಳಿಗೆ ಬೆಂಬಲ ನೀಡುತ್ತವೆ ಮತ್ತು ರಾಜ್ಯದ ಜನರ ಜೀವನವನ್ನು ಉತ್ತಮಗೊಳಿಸುತ್ತವೆ ಎಂದು ಅವರು ಹೇಳಿದರು.
ಈ ಹಿಂದೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರತಿ ವ್ಯಕ್ತಿಗೆ ಸರಾಸರಿ ವಿದ್ಯುತ್ ಬಳಕೆ 1,000 ಯೂನಿಟ್‌ಗಳಿಗಿಂತ ಕಡಿಮೆಯಿತ್ತು, ಆಗ ದೇಶ ವಿದ್ಯುತ್ ಕಡಿತದ ಸವಾಲುಗಳನ್ನು ಎದುರಿಸಿತು, ಗ್ರಾಮೀಣ ಭಾಗಗಳಲ್ಲಿ ಸರಿಯಾದ ವಿದ್ಯುತ್ ಕಂಬಗಳು ಇರಲಿಲ್ಲ ಎಂದು ಆರೋಪಿಸಿದರು.
ಅಭಿವೃದ್ದಿ ಯೋಜನೆಗಳಿಗೆ ಚಾಲನೆ...
ಶ್ರೀಶೈಲದಲ್ಲಿರುವ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ವರ್ಲ ದೇವಸ್ಥಾನಕ್ಕೆ ಭೇಟಿ ನೀಡಿದರು. ಇದೇ ವೇಳೆ ಪ್ರಧಾನಿ ದೇವಾಲಯದಲ್ಲಿ ಪಂಚಮುರಳು (ಹಸುವಿನ ಹಾಲು, ಹಸುವಿನ ಮೊಸರು, ಹಸುವಿನ ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಎಂಬ ಐದು ಪದಾರ್ಥಗಳಿಂದ ಮಾಡಿದ ಪವಿತ್ರ ಮಿಶ್ರಣ) ರುದ್ರಾಭಿಷೇಕವನ್ನು ನೆರವೇರಿಸಿದರು ಮೂಲಗಳು ತಿಳಿಸಿವೆ.(ಏಜೆನ್ಸೀಸ್)