RUSSIAN OIL | ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ಫೋನ್ ಸಂಭಾಷಣೆ ನಡೆದಿಲ್ಲ..: ವಿದೇಶಾಂಗ ಸಚಿವಾಲಯ

trump modi call
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮೊಂದಿಗೆ ದೂರವಾಣಿ ಮೂಲಕ ಮಾತನಾಡಿ, ರಷ್ಯಾದ ತೈಲ( RUSSIAN OIL) ಖರೀದಿಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಭಾರತ ಗುರುವಾರ( ಅ 16) ತಿರಸ್ಕರಿಸಿದ್ದು, ನಿನ್ನೆ ಇಬ್ಬರು ನಾಯಕರ ನಡುವೆ ಯಾವುದೇ ಫೋನ್ ಸಂಭಾಷಣೆ ನಡೆದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯ (MEA), ಟ್ರಂಪ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದೆ.

ಸ್ಥಿರ ಇಂಧನ ಬೆಲೆಗಳನ್ನು ಖಚಿತಪಡಿಸಿಕೊಳ್ಳುವುದು ಮತ್ತು ಸರಬರಾಜುಗಳನ್ನು ಸುರಕ್ಷಿತಗೊಳಿಸುವುದು ಭಾರತದ ಇಂಧನ ನೀತಿಯ ಎರಡು ಪ್ರಮುಖ ಉದ್ದೇಶಗಳಾಗಿದ್ದು, ಅದಕ್ಕೆ ತಕ್ಕಂತೆ ನಮ್ಮ ನಿಲುವುಗಳು ನಿರ್ದೇಶಿಸಲಾಗುತ್ತದೆ ಎಂದು ಹೇಳಿದರು. ಭಾರತವು ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸುವುದನ್ನು ಮತ್ತು ಮಾರುಕಟ್ಟೆಯ ಚಲನಶೀಲತೆಗೆ ಅನುಗುಣವಾಗಿ ಸಂಗ್ರಹಣೆಯನ್ನು ಸರಿಹೊಂದಿಸುವುದನ್ನು ಮುಂದುವರೆಸಿದೆ ಎಂದು ವಿದೇಶಾಂಗ ಸಚಿವಾಲಯ ಒತ್ತಿ ಹೇಳಿದೆ.

ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಭಾರತವನ್ನು ಮನವೊಲಿಸುವ ಪ್ರಯತ್ನಗಳನ್ನು ಅಮೆರಿಕ ಇತ್ತೀಚೆಗೆ ಹೆಚ್ಚಿಸಿದ್ದು, ಈ ಆಮದುಗಳನ್ನು ಕಡಿತಗೊಳಿಸುವುದರಿಂದ ಮಾಸ್ಕೋದ ಆರ್ಥಿಕ ಬಲ ಕಡಿಮೆಯಾಗುತ್ತದೆ ಮತ್ತು ಉಕ್ರೇನ್‌ನಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಅದರ ಮೇಲೆ ಒತ್ತಡ ಹೇರುತ್ತದೆ ಎಂದು ವಾಷಿಂಗ್ಟನ್ ವಾದಿಸುತ್ತಿದೆ.

ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ನನಗೆ ಭರವಸೆ ನೀಡಿದರು. ಈಗ ನಾವು ಚೀನಾವನ್ನು ಅದೇ ರೀತಿ ಮಾಡುವಂತೆ ಮನವೊಲಿಸಲಿದ್ದೇವೆ ಎಂದಿದ್ದರು. ಇಂಧನ ನೀತಿಯ ಬಗೆಗಿನ ಬಿಕ್ಕಟ್ಟಿನ ಹೊರತಾಗಿಯೂ, ಪ್ರಧಾನಿ ಮೋದಿ ನನ್ನ ಸ್ನೇಹಿತ, ನಮ್ಮ ನಡುವೆ ಉತ್ತಮ ಸಂಬಂಧವಿದೆ ಎಂದು ಹೇಳಿದರು. ಟ್ರಂಪ್ ಹೇಳಿಕೆಗಳು ಭಾರತದಲ್ಲಿ ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡಿದ್ದು, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿ ಡೊನಾಲ್ಡ್ ಟ್ರಂಪ್​ಗೆ ಮೋದಿ ಭಯಗೊಂಡಂತೆ ತೋರುತ್ತಿದೆ ಎಂದಿದ್ದರು.

MEA ಮಾಧ್ಯಮ ಪ್ರಕಟಣೆ

ಭಾರತ ಮತ್ತೊಮ್ಮೆ ರಷ್ಯಾದ ಕಚ್ಚಾ ತೈಲ(Russian Oil) ಖರೀದಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ನಮ್ಮ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಸ್ಥಿರ ಆದ್ಯತೆಯಾಗಿದೆ ಎಂದು ಭಾರತ ಗುರುವಾರ (ಅಕ್ಟೋಬರ್​,16) ಹೇಳಿದೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, ಭಾರತದ ಆಮದು ನೀತಿಗಳು ದೇಶದ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಮಾರ್ಗದರ್ಶಿಸಲ್ಪಡುತ್ತವೆ. ಅಲ್ಲದೆ, ಸ್ಥಿರ ಇಂಧನ ಬೆಲೆಗಳು ಮತ್ತು ಸುರಕ್ಷಿತ ಪೂರೈಕೆಗಳನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಇಂಧನ ನೀತಿಯ ಅವಳಿ ಗುರಿಗಳಾಗಿವೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.

ಟ್ರಂಪ್​ ಹೇಳಿದ್ದೇನು...?

ಬುಧವಾರ ಶ್ವೇತಭವನದಲ್ಲಿನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಸಂಭಾಷಣೆಯಲ್ಲಿ ನವದೆಹಲಿ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಮಾಸ್ಕೋವನ್ನು ಪ್ರತ್ಯೇಕಿಸುವ ಪ್ರಯತ್ನದಲ್ಲಿ ಇದು "ದೊಡ್ಡ ಹೆಜ್ಜೆ" ಎಂದು ಕರೆದಿದ್ದರು. ಭಾರತವು ರಷ್ಯಾದ ಕಚ್ಚಾ ತೈಲವನ್ನು ನಿರಂತರವಾಗಿ ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಧಾನಿ ಮೋದಿಯವರೊಂದಿಗೆ ಕಳವಳ ವ್ಯಕ್ತಪಡಿಸಿದ್ದೇನೆ, ಇದು ರಷ್ಯಾ ಮತ್ತು ಯುಕ್ರೇನ್​ ಯುದ್ಧಕ್ಕೆ ಹಣಕಾಸಿನ ನೆರವು ನೀಡಿದೆ, ಭಾರತ ಅಲ್ಲಿಂದ ತೈಲ ಖರೀದಿಸುತ್ತಿರುವುದರ ಬಗ್ಗೆ ನನಗೆ ಖುಷಿ ಇಲ್ಲ ಎಂದು ಟ್ರಂಪ್ ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net