

ಹರೀಶ್ ಬೇಲೂರು ಬೆಂಗಳೂರು/ಡಿಪಿಎನ್ ಶ್ರೇಷ್ಠಿ
ಚಿತ್ರದುರ್ಗ: ಹೊಸ ವರ್ಷಕ್ಕೆ ಮದ್ಯದ ಕಿಕ್ ಜೋರಾಗಿದೆ. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದು ಬಂದಿದೆ. ಡಿ.23ರಿಂದ ಡಿ.31ರವರೆಗೆ ಅಂದಾಜು 20 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 13.70 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಇದರಿಂದ ವಾರದಲ್ಲಿ ಅಂದಾಜು 750 ಕೋಟಿ ರೂ. ಆದಾಯ ಬಂದಿದೆ.
ಪಬ್, ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕರು ಹೊಸ ವರ್ಷ ಸ್ವಾಗತಕ್ಕೆ ವಿಶೇಷ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಮದ್ಯದಂಗಡಿಗಳನ್ನು ತರಹೇವಾರಿ ವಿನ್ಯಾಸ ಮಾಡಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಮದ್ಯ ಮತ್ತು ಬಿಯರ್ ದಾಸ್ತಾನು ಮಾಡಿಕೊಂಡು ಸೇಲ್ ಮಾಡುತ್ತಿದ್ದಾರೆ. ಮದ್ಯ ವ್ಯಾಪಾರದಿಂದ ಮಾಲೀಕರಂತೂ ಪುಲ್ ಖುಷಿ ಆಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ. ಬೆಂ.ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ, ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳು ನಂತರ ಸ್ಥಾನದಲ್ಲಿ ಬರಲಿವೆ.
ಸಾಂರ್ದಭಿಕ ಪರವಾನಗಿ ನೀಡಿಕೆ
ಹೊಸ ವರ್ಷ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಸಾಂರ್ದಭಿಕ (ಒಂದು ದಿನಕ್ಕೆ ಸೀಮಿತ) ಪರವಾನಗಿ ನೀಡಲಾಗಿದೆ. ಈ ವರ್ಷ ಪರವಾನಗಿಗಾಗಿ ಸಾವಿರಾರು ಅರ್ಜಿಗಳು ಅಬಕಾರಿ ಇಲಾಖೆ ಸಲ್ಲಿಕೆಯಾಗಿತ್ತು. ಹೊಸ ವರ್ಷ ಸಂದರ್ಭದಲ್ಲಿ ಹೆಚ್ಚಿನ ಮದ್ಯವಹಿವಾಟು ನಡೆಯುವ ಹಿನ್ನೆಲೆಯಲ್ಲಿ ಕೆಲವರು ಇಲಾಖೆಗೆ ಅರ್ಜಿ ಸಲ್ಲಿಸಿ ಸಾಂರ್ದಭಿಕ ಪರವಾನಗಿ ಪಡೆದು ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅಂದಾಜು 10 ಕೋಟಿ ರೂ.ಆದಾಯ ಬರುವ ಸಾಧ್ಯತೆ ಇದೆ.
29 ಸಾವಿರ ಕೋಟಿ ರೂ.ಗುರಿ
ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ 2022-23ನೇ ಸಾಲಿನಲ್ಲಿ 29 ಸಾವಿರ ಕೋಟಿ ರೂ.ರಾಜಸ್ವ ಗುರಿ ನೀಡಿದ್ದು, ಈ ವರ್ಷದ ಡಿ.29ರವರೆಗೆ ವೇಳೆಗೆ ರಾಜ್ಯಾದ್ಯಂತ ಮದ್ಯ ಮಾರಾಟದಿಂದ ಇಲಾಖೆಗೆ 21,981 ಕೋಟಿ ರೂ.ಆದಾಯ ಹರಿದು ಬಂದಿದೆ. ಈ ವರ್ಷ ಮುಗಿಯಲು ಇನ್ನೂ 3 ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಸರ್ಕಾರ ಕೊಟ್ಟಿರುವ ಗುರಿ ಮುಟ್ಟುವ ನಿರೀಕ್ಷೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಇದೇ ಅವಧಿಯಲ್ಲಿ ಶೇ.14 ಮದ್ಯ ಮಾರಾಟದಲ್ಲಿ ಹೆಚ್ಚಳವಾಗಿದೆ.
ಬಿಯರ್ ಮಾರಾಟ ಹೆಚ್ಚಳ
ರಾಜ್ಯದಲ್ಲಿ ನಷ್ಟದಲ್ಲಿದ್ದ ಡಿಸ್ಟಿಲರಿಯೊಂದು ಬಿಯರ್ ಉತ್ಪನ್ನದ ಘೊಷಿತ ದರ ಕಡಿಮೆ ಮಾಡಿದ್ದು, ಅದಕ್ಕೆ ಪೈಪೋಟಿ ಎಂಬಂತೆ ಇನ್ನೂ 2-3 ಡಿಸ್ಟಿಲರಿಗಳ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸಿವೆ. ಇದು ಬಿಯರ್ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ. ಕೋವಿಡ್ನಿಂದಾಗಿ 2021-22ರಲ್ಲಿ ಕಳೆಗುಂದಿದ್ದ ಮದ್ಯ ಮಾರಾಟದ ಆದಾಯ, ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸುಧಾರಿಸಿದೆ. ಹಿಂದಿನ ಆರ್ಥಿಕ ಸಾಲಿಗೆ ಹೋಲಿಸಿದರೆ ಈ ವರ್ಷ ಐಎಂಎಲ್ ಶೇ.7 ಹಾಗೂ ಬಿಯರ್ ಮಾರಾಟದಲ್ಲಿ ಶೇ.55 ಹೆಚ್ಚಾಗಿದೆ.
ಸಾಮಾನ್ಯವಾಗಿ ವಿವಿಧ ಕಂಪನಿಗಳ ಒಂದು ಬಾಟಲ್ ಬಿಯರ್ ದರ 180-200 ರೂ. ಇದೆ. ಈಗ ಮೂರ್ನಾಲ್ಕು ಉತ್ಪನ್ನಗಳು ಕಡಿಮೆ ದರದಲ್ಲಿ ದೊರಕುತ್ತಿರುವುದರಿಂದ ಬಿಯರ್ ಮಾರಾಟ ಹೆಚ್ಚುತ್ತಿದೆ. ರಾಜ್ಯದಲ್ಲಿ ನವೆಂಬರ್ ಅಂತ್ಯಕ್ಕೆ 455 ಲಕ್ಷ ಪೆಟ್ಟಿಗೆ ಐಎಂಎಲ್ ಉತ್ಪನ್ನಗಳ ಮಾರಾಟವಾಗಿದ್ದರೆ, ಬಿಯರ್ 244 ಲಕ್ಷ ಬಾಕ್ಸ್ಗಳಿಗೆ ತಲು ಪಿದೆ. ರಾಜ್ಯದ 7 ಅಬಕಾರಿ ವ್ಯಾಪ್ತಿಯಲ್ಲಿರುವ 40 ಅಬಕಾರಿ ಜಿಲ್ಲೆಗಳ ಪೈಕಿ, 22 ಜಿಲ್ಲೆಗಳಲ್ಲಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಶೇ.7 ಕ್ಕಿಂತ ಕಡಿಮೆ ಸಾಧನೆಯಾಗಿದ್ದರೂ, ಹಿಂದಿನ ಆರ್ಥಿಕ ಸಾಲಿಗೆ ಹೋಲಿಸಿದರೆ ಎಲ್ಲ ಜಿಲ್ಲೆಗಳಲ್ಲೂ ಮದ್ಯದ ಮಾರಾಟ ಹೆಚ್ಚಾಗಿದೆ.
ಹಳ್ಳಿ ಹಳ್ಳಿಗಳಲ್ಲೂ ಮದ್ಯ ಘಮಲು
ಹೊಸ ವರ್ಷ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಹೋಟೆಲ್ ಹಾಗೂ ಗಿರಾಣಿ ಅಂಗಡಿಗಳಲ್ಲಿ ಕಾನೂನುಬಾಹಿರವಾಗಿ ಸಾಕಷ್ಟು ಪ್ರಮಾಣದಲ್ಲಿ ಮದ್ಯ ದಾಸ್ತಾನು ಮಾಡಿಕೊಂಡಿದ್ದಾರೆ. ಒಬ್ಬೊಬ್ಬ ಅಂಗಡಿಯವರು ಅಂದಾಜು ಲಕ್ಷಾಂತರ ರೂ.ಮೌಲ್ಯದ ಮದ್ಯವನ್ನು ಅಕ್ರಮವಾಗಿ ಖರೀದಿಸಿ ದಾಸ್ತಾನು ಇಟ್ಟುಕೊಂಡಿದ್ದು, ಪ್ರತಿ ಬಾಟಲ್ಗೆ ನಿಗದಿಪಡಿಸಿದ ದರಗಿಂತ ಸರಾಸರಿ 20-30 ರೂ. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಮೂಲೆಯಲ್ಲಿ ಮೂಲೆಯಲ್ಲಿ ಮದ್ಯದ ನಶೆಯಲ್ಲಿ ಕುಡುಕರ ತೇಲಾಡುವಂತಾಗಿದೆ.
ಬಿ.ಎಸ್.ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಹೆಚ್ಚಿಸಿದ್ದ ಮದ್ಯದ ದರವನ್ನು ಸರ್ಕಾರ ಮತ್ತೆ ಹೆಚ್ಚಿಸಿಲ್ಲ. ಕೆಲ ಕಂಪನಿಗಳು ಘೊಷಿತ ದರ ಹೆಚ್ಚಿಸಿಕೊಂಡಿದ್ದರೆ, ಕೆಲವು ಬ್ರಾಂಡ್ಗಳ ದರವೂ ಹೆಚ್ಚಾಗುತ್ತದೆ. ಹಿಂದಿನ ಆರ್ಥಿಕ ಸಾಲಿಗೆ ಹೋಲಿಸಿದರೆ ಪ್ರಸಕ್ತ ಬಿಯರ್ ಮಾರಾಟ ಹೆಚ್ಚಾಗಿದೆ.
| ಬಿ.ಮಾದೇಶ್, ಅಬಕಾರಿ ಡಿಸಿ, ಚಿತ್ರದುರ್ಗ