

ಪಾಕಿಸ್ತಾನ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ತಮ್ಮ ವಿರುದ್ಧ ಅಪಪ್ರಚಾರ ಹಾಗೂ ಮಾನಹಾನಿ ನಿಂದನೆ ಮಾಡಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಪಾಕಿಸ್ತಾನ ಮುಸ್ಲಿಂ ಒಕ್ಕೂಟದ ಉನ್ನತ ನಾಯಕಿ ಮರಿಯಮ್ ನವಾಜ್ ಅವರಿಗೆ ಕಾನೂನು ಮೂಲಕ ಲೀಗಲ್ ನೋಟಿಸ್ ನೀಡಿದ್ದಾರೆ.
ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರ ವಿರುದ್ಧ ಮೇ ತಿಂಗಳಲ್ಲಿ ಲಾಹೋರ್ನಲ್ಲಿ ನಡೆದ ಭಾಷಣವೊಂದರಲ್ಲಿ ಆರೋಪಗಳನ್ನು ಮಾಡಿ ಅವಹೇಳನ ಮಾಡಿದ್ದಾರೆ ಎಂದು ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಪುತ್ರಿ ಮರಿಯಮ್ಗೆ ಬುಶ್ರಾ ಗುರುವಾರ ನೋಟಿಸ್ ನೀಡಿದರು.
ಮರಿಯಮ್ ಅವರು ತಮ್ಮ ಭಾಷಣದಲ್ಲಿ ಬುಶ್ರಾ ಅವರು ವಿರುದ್ಧ ಮಾತನಾಡಿ '' ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಉದ್ಯಮಿಯೊಬ್ಬರಿಗೆ ಭೂಮಿಯನ್ನು ಹಸ್ತಾಂತರಿಸುವ ಸಲುವಾಗಿ ಅವರ ಬಳಿಯಿಂದ ಬುಶ್ರಾ 5 ಕ್ಯಾರೆಟ್ನ ಚಿನ್ನದ ಉಂಗುರವನ್ನು ಲಂಚವಾಗಿ ಪಡೆದಿದ್ದರು'' ಎಂದು ಹೇಳಿಕೆ ನೀಡಿದ್ದರು.
ಮರಿಯಮ್ ಅವರ ಹೇಳಿಕೆಯಿಂದ ಬುಶ್ರಾ ಮತ್ತು ಅವರ ಕುಟುಂಬಕ್ಕೆ ಬಹಳ ಮಾನಹಾನಿಯಾಗಿದೆ. ಇದಲ್ಲದೇ ಈ ರೀತಿ ಹೇಳಿಕೆಗಳನ್ನು ನೀಡುವ ಮೂಲಕ ಇಮ್ರಾನ್ ಖಾಮ್ ಅವರ ರಾಜಕೀಯ ವಿರೋಧಿಗಳಿಗೆ ಅಸ್ತ್ರವನ್ನು ನೀಡಿದಂತಾಗಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಬುಶ್ರಾ ಅವರು ತಮ್ಮ ಮೇಲಿನ ಆರೋಪಗಳನ್ನು ಹಿಂಪಡೆಯುವಂತೆ ಹಾಗೂ ಕ್ಷಮೆಯಾಚಿಸುವಂತೆ ಮೇರಿಯಮ್ ಅವರನ್ನು ಕೇಳಿಕೊಂಡಿದ್ದಾರೆ. ಒಂದು ವೇಳೆ ಕ್ಷಮೆ ಕೇಳದಿದ್ದರೆ ನ್ಯಾಯಾಲಯವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೂ ಈ ಬುಶ್ರಾ ಅವರ ನೋಟಿಸ್ಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ್ ಮುಸ್ಲಿಂ ಲೀಗ್ನ ಮುಖ್ಯ ಸಂಘಟಕ ಟ್ವೀಟ್ ಮಾಡಿ, "ಸದ್ಯ ಈಗಲಾದರೂ ಬುಶ್ರಾ ಬೀಬಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಅಲ್ಲಿಯೇ ಅವರು ಮಾಡಿದ ತಪ್ಪುಗಳು ಹೊರಬರಲಿ" ಎಂದು ಹೇಳಿದ್ದಾರೆ.