ಬೆನ್ನುಮೂಳೆಗೆ ಬಲ ತುಂಬಲು 'ಕಟಿಚಕ್ರಾಸನ' ಮಾಡಿ!

1148134
Published on

ಬೆನ್ನು ಮೂಳೆಯು ಬಲಗೊಳ್ಳುವ ಆಸನವೇ ಕಟಿಚಕ್ರಾಸನ. ಕಟಿ ಎಂದರೆ ಸೊಂಟ, ಚಕ್ರ ಎಂದರೆ ಉರುಟು ಅಥವಾ ತಿರುಗಿಸುವುದು. ಈ ಆಸನದಲ್ಲಿ ಸೊಂಟವನ್ನು ತಿರುಗಿಸಲಾಗುತ್ತದೆ. ಇದರಿಂದ ಸೊಂಟದ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಬೆನ್ನುಹುರಿಯ ನರಗಳಿಗೆ ಚೈತನ್ಯ ದೊರಕುತ್ತದೆ.

ಉಪಯೋಗಗಳು : ಬೆನ್ನು ಮೂಳೆಯು ಬಲಗೊಳ್ಳುತ್ತದೆ. ಸೊಂಟಕ್ಕೆ ಉತ್ತಮ ತಿರುಚುವಿಕೆಯ ವ್ಯಾಯಾಮ ದೊರೆಯುತ್ತದೆ. ಸೊಂಟ ನೋವು, ಬೆನ್ನು ನೋವು ನಿಯಂತ್ರಣ; ಕುತ್ತಿಗೆ, ಹೆಗಲುಗಳು ಬಲಗೊಳ್ಳುತ್ತವೆ. ಈ ಆಸನದಿಂದ ಕರುಳಿನ ರೋಗ ನಿಯಂತ್ರಣವಾಗುತ್ತದೆ; ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಆಸ್ತಮಾ ನಿವಾರಣೆ ಮತ್ತು ಮಧುಮೇಹ ನಿಯಂತ್ರಣವಾಗುತ್ತದೆ.

ಅಭ್ಯಾಸ ಕ್ರಮ : ಮ್ಯಾಟ್ ಮೇಲೆ ನಿಂತು ಕಾಲುಗಳನ್ನು ವಿಸ್ತರಿಸಬೇಕು. ಬಲಗೈಯನ್ನು ನಿಧಾನವಾಗಿ ಸೊಂಟದ ಸುತ್ತ ಬಳಸಿ, ಎಡಗೈಯನ್ನು ಬಲಭುಜದ ಮೇಲೆ ಇಡುವುದು. ಉಸಿರನ್ನು ಬಿಡುತ್ತಾ ನಿಧಾನವಾಗಿ ದೇಹವನ್ನು ಎಡಬದಿಗೆ ತಿರುಗಿಸುವುದು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ. ನಂತರ ಉಸಿರನ್ನು ಬಿಡುತ್ತಾ ಸಹಜ ಸ್ಥಿತಿಗೆ ಬರುವುದು. ಇದೇ ರೀತಿ, ಮತ್ತೊಂದು ಪಾರ್ಶ್ವಕ್ಕೆ ಮಾಡುವುದು. ನಂತರ ವಿಶ್ರಾಂತಿ.

ಅತಿಯಾದ ಸೊಂಟ ನೋವು, ಬೆನ್ನು ನೋವು ಇರುವವರು ಕಟಿಚಕ್ರಾಸನ ಮಾಡುವುದು ಸೂಕ್ತವಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net