

ಮುಂಬೈ : ಇತ್ತೀಚೆಗಷ್ಟೆ, ಕರೊನಾ ಎರಡನೇ ಅಲೆಯ ಸಮಯದಲ್ಲಿ ತಮ್ಮ ಇಡೀ ಕುಟುಂಬಕ್ಕೆ ಕರೊನಾ ತಗುಲಿದ್ದ ಹಿನ್ನೆಲೆಯಲ್ಲಿ ಸಂಕಷ್ಟ ಎದುರಿಸಿ ಚೇತರಿಸಿಕೊಂಡಿದ್ದರು ನಟಿ ಶಿಲ್ಪಾ ಶೆಟ್ಟಿ. ಇದೀಗ ಅವರ ಪತಿ ರಾಜ್ ಕುಂದ್ರ ಮೇಲೆ ಅಶ್ಲೀಲ ಚಿತ್ರಗಳ ನಿರ್ಮಾಣದ ಗಂಭೀರ ಆರೋಪಗಳು ಬಂದಿದ್ದು, ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಅವರ ಪ್ರತಿಕ್ರಿಯೆ ಏನೆಂದು ತಿಳಿಯಲು ಎಲ್ಲರೂ ಕಾತರರಾಗಿದ್ದಾರೆ. ಹೀಗಿರುವಾಗ, ಪತಿಯ ಬಂಧನದ ಹಲವು ದಿನಗಳ ನಂತರ ಶಿಲ್ಪಾ ಅಧಿಕೃತ 'ಹೇಳಿಕೆ' ನೀಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸುದೀರ್ಘವಾಗಿ ತಮ್ಮ ತುಮುಲಗಳನ್ನು ಹಂಚಿಕೊಂಡಿರುವ ಶೆಟ್ಟಿ, ತಮ್ಮ ಈ ಸಂಕಷ್ಟದ ಸಮಯದಲ್ಲಿ ಖಾಸಗಿತನಕ್ಕೆ ಬೆಲೆ ಕೊಡಿ ಎಂದು ಕೇಳಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ತಾವು ಏನೂ ಕಾಮೆಂಟ್ ಮಾಡುವುದಿಲ್ಲ. ಏಕೆಂದರೆ ಅದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದಿರುವ ಶಿಲ್ಪಾ, "ನನ್ನ ಹೆಸರಿನ ನಕಲಿ ಹೇಳಿಕೆಗಳನ್ನು ಬಿಟ್ಟುಬಿಡಿ. ನಾನು ಏನೂ ಕಾಮೆಂಟ್ ಕೊಡುವುದಿಲ್ಲ. ಸೆಲೆಬ್ರಿಟಿಯಾಗಿ ನಾನು ನೆವರ್ ಕಂಪ್ಲೇನ್, ನೆವರ್ ಎಕ್ಸ್ಪ್ಲೇನ್ ತತ್ವವನ್ನು ಅನುಸರಿಸುತ್ತೇನೆ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
"ಕಳೆದ ಕೆಲವು ದಿನಗಳಲ್ಲಿ ನನ್ನ ಬಗ್ಗೆ ಹಲವು ವದಂತಿಗಳು, ಆರೋಪಗಳು ಮತ್ತು ನನ್ನ ಮೇಲೆ ಅನಗತ್ಯ ಹೇಳಿಕೆಗಳು ಮಾಧ್ಯಮದಲ್ಲಿ ಮತ್ತು ನನ್ನ ಹಿತೈಷಿಗಳೆನ್ನುವವರಿಂದಲೇ ಬಂದಿದೆ. ನನ್ನನ್ನು ಮತ್ತು ನನ್ನ ಕುಟುಂಬವನ್ನು ಟ್ರೋಲ್ಮಾಡಲಾಗುತ್ತಿದ್ದು, ಪ್ರಶ್ನೆಗಳನ್ನು ಹಾಕಲಾಗುತ್ತಿದೆ" ಎಂದು ಶಿಲ್ಪಾ ತಮ್ಮ ಕಷ್ಟ ಹಂಚಿಕೊಂಡಿದ್ದಾರೆ.
"ಒಂದು ಕುಟುಂಬವಾಗಿ, ನಾವು ಎಲ್ಲಾ ಕಾನೂನು ಪರಿಹಾರಗಳನ್ನು ಪಡೆಯುವ ಯತ್ನದಲ್ಲಿದ್ದೇವೆ. ಈ ಸಂದರ್ಭದಲ್ಲಿ ನಾನು, ವಿಶೇಷವಾಗಿ ಒಬ್ಬ ತಾಯಿಯಾಗಿ ನನ್ನ ಮಕ್ಕಳಿಗೋಸ್ಕರ, ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಅರ್ಧಂಬರ್ಧ ಮಾಹಿತಿಯ ಮೇಲೆ ಅದರ ಸತ್ಯಾಸತ್ಯತೆ ತಿಳಿಯದೆ ಕಾಮೆಂಟ್ ಮಾಡಬೇಡಿ" ಎಂದಿದ್ದಾರೆ, ಶಿಲ್ಪಾ.
"ನಾನು ಒಬ್ಬ ಹೆಮ್ಮೆಯ ಕಾನೂನು ಪಾಲಕ ನಾಗರೀಕಳಾಗಿದ್ದೇನೆ. ಕಳೆದ 29 ವರ್ಷಗಳಿಂದ ಶ್ರಮಪಟ್ಟು ದುಡಿಯುವ ವೃತ್ತಿಪರಳಾಗಿದ್ದೇನೆ. ಜನ ನನ್ನಲ್ಲಿ ನಂಬಿಕೆ ಇರಿಸಿದ್ದಾರೆ. ನಾನವರಿಗೆ ಎಂದೂ ನಿರಾಶೆ ಮಾಡಿಲ್ಲ" ಎಂದೂ ಬರೆದಿರುವ ಶಿಲ್ಪಾ, "ತುಂಬಾ ಮುಖ್ಯವಾಗಿ, ಈ ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಖಾಸಗಿತನದ ಹಕ್ಕನ್ನು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ.
ಜೊತೆಗೆ, ತಮಗೆ ಮುಂಬೈ ಪೊಲೀಸರ ಬಗ್ಗೆ, ಭಾರತದ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದಿರುವ ಶಿಲ್ಪಾ, "ನಾವು ಮೀಡಿಯಾ ಟ್ರಯಲ್ಗೆ ಒಳಗಾಗಬಾರದು. ಕಾನೂನು ತನ್ನ ಕೆಲಸ ಮಾಡಲಿ ಬಿಡಿ. ಸತ್ಯಮೇವ ಜಯತೇ" ಎಂದಿದ್ದಾರೆ. (ಏಜೆನ್ಸೀಸ್)