ಕಿಬ್ಬೊಟ್ಟೆಯ ಮತ್ತು ಗರ್ಭಾಶಯದ ಅಂಗಗಳಿಗೆ ಉತ್ತಮ ಮಸಾಜ್, ವ್ಯಾಯಾಮ ದೊರಕುವ ಆಸನವೇ ಮಂಡೂಕಾಸನ. ಮಂಡೂಕ ಎಂದರೆ ಸಂಸ್ಕೃತದಲ್ಲಿ ಕಪ್ಪೆ ಎಂದು. ಕಪ್ಪೆಯ ಆಕಾರವನ್ನು ಹೋಲುವ ಭಂಗಿ ಇದು. ಸ್ತ್ರೀಯರ ಮುಟ್ಟಿನ ದೋಷಗಳನ್ನು ನಿವಾರಣೆ ಮಾಡುವಲ್ಲಿ, ಹೊಟ್ಟೆಯ ಬೊಜ್ಜು ಕರಗಿಸುವಲ್ಲಿ ಸಹಾಯಕವಾದ ಆಸನವಿದು.
ಅಭ್ಯಾಸ ಕ್ರಮ : ಕಾರ್ಪೆಟ್ ಮೇಲೆ ಮಂಡಿಗಳನ್ನು ಮಡಿಸಿಕೊಂಡು ಕೂರುವುದು. ಮಂಡಿಗಳನ್ನು ವಿಸ್ತರಿಸಿ, ಹಸ್ತವನ್ನು ನೆಲದ ಮೇಲೆ ಊರುವುದು. ಉಸಿರನ್ನು ತೆಗೆದುಕೊಳ್ಳುತ್ತಾ ಹಿಂದಕ್ಕೆ ಬಾಗಿ, ಉಸಿರು ಬಿಡುತ್ತಾ ನಿಧಾನವಾಗಿ ಮುಂದಕ್ಕೆ ಶಿಸ್ತುಬದ್ಧವಾಗಿ ಬಾಗಬೇಕು. ಈ ಸಮಯದಲ್ಲಿ ನೆಲದ ಮೇಲೆ ಕೈಗಳನ್ನು ಆದಷ್ಟೂ ಚಾಚಬೇಕು. ಸ್ವಲ್ಪ ಸಮಯ ಕಣ್ಣು ಮುಚ್ಚಿ ಸಾಮಾನ್ಯ ಉಸಿರಾಟ ನಡೆಸುತ್ತಾ, ಈ ಸ್ಥಿತಿಯಲ್ಲಿರಬೇಕು. ನಂತರ ಉಸಿರು ತೆಗೆದುಕೊಳ್ಳುತ್ತಾ ನಿಧಾನವಾಗಿ ಸ್ವಸ್ಥಾನಕ್ಕೆ ಹಿಂತಿರುಗಬೇಕು. ಸ್ವಲ್ಪ ಅಭ್ಯಾಸವಾದ ಮೇಲೆ 2-3 ಬಾರಿ ಮಾಡಿ ವಿಶ್ರಮಿಸಬಹುದು.
ಇದನ್ನೂ ಓದಿ: ದೇಹಸೌಂದರ್ಯ ಹೆಚ್ಚಿಸಿ ಮನಸ್ಸಿಗೆ ಏಕಾಗ್ರತೆ ನೀಡುತ್ತೆ, ಈ ಸುಲಭ ಯೋಗಾಸನ!
ಇತರ ಪ್ರಯೋಜನಗಳು : ಮಲಬದ್ಧತೆ, ಅಜೀರ್ಣ ಸಮಸ್ಯೆ, ಗ್ಯಾಸ್ ಸಮಸ್ಯೆ ನಿವಾರಿಸುತ್ತದೆ. ಮೇದೋಜೀರಕ ಗ್ರಂಥಿ ಉತ್ತೇಜನಗೊಂಡು ಮಧುಮೇಹ ನಿಯಂತ್ರಿಸುವಲ್ಲಿ ಸಹಾಯಕವಾಗುತ್ತದೆ. ಎದೆ, ಭುಜಗಳಿಗೆ ಒಳ್ಳೆಯ ವ್ಯಾಯಾಮವಾಗುತ್ತದೆ. ಶಿರಸ್ಸಿಗೆ ರಕ್ತ ಸಂಚಲನೆ ಹೆಚ್ಚಿ ನರಮಂಡಲ ಸಚೇತನಗೊಳ್ಳುತ್ತದೆ. ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ.
ಈ ಆಸನವನ್ನು ಬೆನ್ನು ನೋವು, ಸೊಂಟ ನೋವು ಅಥವಾ ಹೊಟ್ಟೆಯ ಹುಣ್ಣಿದ್ದವರು ಮಾಡುವುದು ಸೂಕ್ತವಲ್ಲ. ಪಾದದ ಗಾಯ, ತೀವ್ರ ರಕ್ತದೊತ್ತಡ ಹಾಗೂ ಅತಿ ಮೈಗ್ರೇನ್ ಇದ್ದವರು ಮಾಡುವುದು ಬೇಡ.
ಸಂಸತ್ತಿನಲ್ಲಿ ಸರಾಸರಿ 7 ನಿಮಿಷಗಳ ಚರ್ಚೆಯೊಂದಿಗೆ 12 ಮಸೂದೆಗಳ ಅಂಗೀಕಾರ!