More

    ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಕೋಟ್ಯಂತರ ರೂ. ಹಗರಣ ಆರೋಪ

    ಬೆಂಗಳೂರು: ನಗರದ ಡಾ. ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಹಂಚಿಕೆ ವೇಳೆ 800 ಕೋಟಿ ರೂ. ಮೊತ್ತದ ಹಗರನ ನಡೆದಿದ್ದು, ಇದರಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ, ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಹಾಗೂ ಇತರರು ಭಾಗಿಯಾಗಿದ್ದಾರೆಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

    ಈ ಸಂಬಂಧ ಸೋಮವಾರ ಲೋಕಾಯುಕ್ತ ಹಾಗೂ ಸಿಐಡಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ಹಗರಣ ಸಂಬಂಧ 900 ಪುಟಗಳ ದಾಖಲೆಗಳನ್ನು ಎನ್.ಆರ್.ರಮೇಶ್ ಬಿಡುಗಡೆಗೊಳಿಸಿದರು. ರಾಜ್ಯದಲ್ಲಿ ಶೈಕ್ಷಣಿಕ ವಲಯದಲ್ಲಿ ಇದು ಅತೀ ದೊಡ್ಡ ಹಗರಣವಾಗಿದ್ದು, ತನಿಖೆ ನಡೆದಲ್ಲಿ ಇನ್ನಷ್ಟು ಅಕ್ರಮಗಳು ಹೊರಬರಲಿದೆ ಎಂದು ತಿಳಿಸಿದರು.

    1980-81ರಲ್ಲಿ ಆನಂದ ಸಾಮಾಜಿಕ ಹಾಗೂ ಶೈಕ್ಷಣಿಕ ದತ್ತಿ ಸಂಸ್ಥೆ ಹೆಸರಿನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಮಹಾವಿದ್ಯಾಲಯವನ್ನು ಆರಂಭಿಸಲಾಗಿತ್ತು. ಪ್ರಸ್ತುತ ಈ ದತ್ತಿ ಸಂಸ್ಥೆ ಅಡಿಯಲ್ಲಿ ಡಾ. ಅಂಬೇಡ್ಕರ್ ವೈದ್ಯಕೀಯ ಕಾಲೇಜ್, ರಮಾಬಾಯಿ ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜ್, ರಮಾಬಾಯಿ ನರ್ಸಿಂಗ್ ಕಾಲೇಜ್ ಸೇರಿ ಹಲವು ವಿದ್ಯಾ ಸಂಸ್ಥೆಗಳು ನಗರದಲ್ಲಿ ಕಾರ್ಯಾಚರಿಸುತ್ತಿವೆ. ಪರಿಶಿಷ್ಟರ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಉನ್ನತ ಶಿಕ್ಷಣ ನೀಡುವ ಆಶಯ ಇದ್ದರೂ, ನಂತರದಲ್ಲಿ ಹಣದ ಥೈಲಿಯೇ ಸಂಸ್ಥೆಯ ಮುಖ್ಯ ಕಾಯಕವಾಗಿದೆ. ಕಳೆದ 15 ವರ್ಷಗಳಿಂದ ಪ್ರತೀ ವರ್ಷ ನೂರಾರು ಕೋಟಿ ರೂ. ಅಕ್ರಮ ನಡೆಯುತ್ತಿದ್ದರೂ, ಲೆಕ್ಕಪತ್ರಗಳನ್ನು ಸಮರ್ಪಕವಾಗಿ ಸಲ್ಲಿಕೆ ಮಾಡಿಲ್ಲ. ಇದು ಹಗರಣ ಮುಚ್ಚಿಹಾಕಲೆಂದೇ ತಪ್ಪು ಲೆಕ್ಕಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ದೂರಿದರು.

    2008-09ರಿಂದ ಈವರೆಗೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಮ್ಯಾನೇಜ್‌ಮೆಂಟ್ ಕೋಟಾ ಅಡಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ. 2013ರಲ್ಲಿ ನೀಟ್ ಆರಂಭವಾಗುವವರೆಗೂ 2008-09ರಿಂದ 2012-13ರವರೆಗೆ ಡಾ. ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜ್ ಹಾಗೂ ಡಾ. ಎಂ.ಆರ್.ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜ್ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಇದಕ್ಕೆ ಅಗತ್ಯ ಸಾಕ್ಷ್ಯವಾಗಿ ದಾಖಲೆಗಳನ್ನು ಲೋಕಾಯುಕ್ತ ಹಾಗೂ ಸಿಐಡಿಗೆ ಸಲ್ಲಿಸಿರುವೆ ಎಂದು ರಮೇಶ್ ಸ್ಪಷ್ಟಪಡಿಸಿದರು.

    2008-09ರಿಂದ ಈವರೆಗೆ ಪ್ರತೀ ವರ್ಷ ಕನಿಷ್ಠ 25 ಅನರ್ಹ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ತರಗತಿಗಳಿಗೆ ಕೋಟ್ಯಂತರ ರೂ. ಹಣ ಪಡೆದು ಅವಕಾಶ ಮಾಡಿಕೊಡಲಾಗಿದೆ. ಇವರಿಂದ ಡೊನೇಷನ್ ರೂಪದಲ್ಲಿ ದೊಡ್ಡ ಮೊತ್ತವನ್ನು ಆನಂದ್ ಸಾಮಾಜಿಕ ಹಾಗೂ ಶೈಕ್ಷಣಿಕ ಟ್ರಸ್ಟ್‌ಗೆ ನೂರಾರು ಕೋಟಿ ರೂ. ಹಣವನ್ನು ವಂಚಿಸಲಾಗಿದೆ. ಬೇರೆ ಬೇರೆ ರಾಜ್ಯಗಳ ಅನಾಮಿಕ ಕಾಲೇಜುಗಳಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿರುವ ದೃಢೀಕರಣ ಪತ್ರಗಳನ್ನು ಕೊಡಿಸಿ ಅಂತಹವರಿಂದ ತಲಾ 2 ಕೋಟಿ ರೂ. ಹಣಕ್ಕೆ ಎಂಬಿಬಿಎಸ್, ಬಿಡಿಎಸ್ ಪ್ರವೇಶ ಕಲ್ಪಿಸಲಾಗಿದೆ. ಕಳೆದ 15 ವರ್ಷಗಳಿಂದ ಸಂಸ್ಥೆಯ ಆಯಾಕಟ್ಟಿನ ಸ್ಥಾನಗಳಲ್ಲಿ ಪ್ರಭಾವಿಗಳು ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ನ ದೊಡ್ಡಮನಿ, ಗುರಪ್ಪಾಜಿ, ಎಚ್.ಎಸ್.ಮಹದೇವ ಪ್ರಸಾದ್, ಡಾ. ಎನ್.ಟಿ.ಮುರಳಿ ಮೋಹನ್, ವಿ.ಎಸ್.ಕುಬೇರ್ ಹಾಗೂ ಅಮಾನುಲ್ಲಾ ಖಾನ್ ಅವರು ಈ ಹಗರಣದ ಹಿಂದೆ ಇದ್ದು, ದಾಖಲಾತಿಗಳನ್ನು ತನಿಖಾ ಸಂಸ್ಥೆಗೆ ನೀಡಲಾಗಿದೆ. ರಾಜ್ಯ ಸರ್ಕಾರ ಈ ಹಗರಣವನ್ನು ಸಿಬಿಐಗೆ ವಹಿಸಿಬೇಕು ಎಂದು ಎನ್.ಆರ್.ರಮೇಶ್ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts