

ತೀರ್ಥಹಳ್ಳಿ: ನಾಲ್ಕೈದು ದಿನ ಬಿಡುವು ನೀಡಿದ್ದ ಮಳೆ ಗೌರಿ-ಗಣೇಶ ಹಬ್ಬದ ದಿನದಿಂದಲೇ ಮತ್ತೆ ಆರಂಭವಾಗಿದ್ದರಿಂದ ಹಬ್ಬದ ಸಂಭ್ರಮಕ್ಕೆ ಕೊಂಚ ಅಡಚಣೆಯಾಯಿತು. ತಾಲೂಕಿನಲ್ಲಿ 260 ಕಡೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗಿದೆ. ಮೊದಲ ದಿನ ಪಟ್ಟಣದ ನೇತಾಜಿ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಶಾಂತಿಪ್ರಿಯ ಗಣಪತಿ ಸೇರಿ ಒಟ್ಟು 80 ಗಣಪತಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಕೋಳಿಕಾಲು ಗುಡ್ಡದಲ್ಲಿ ಸ್ಥಾಪಿಸಿರುವ ಗಣಪತಿಯನ್ನು 13 ದಿನಗಳ ಪರ್ಯಂತ ಪೂಜಿಸಿ ನಂತರ ವಿಸರ್ಜಿಸಲಾಗುವುದು. ತಾಲೂಕಿನ ಹೊದಲ ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತಿ ವರ್ಷದಂತೆ ಕಲಾವಿದ ಉಪೇಂದ್ರ ಆಚಾರ್ಯ ಕೈಚಳಕದಲ್ಲಿ ತಯಾರಾದ ಆಪರೇಷನ್ ಸಿಂಧೂರ ಹೆಸರಿನಲ್ಲಿ ಬ್ರಹ್ಮೋಸ್ ಕ್ಷಿಪಣಿ ಮಾದರಿ ಆಕರ್ಷಣೀಯವಾಗಿದೆ. ಪಟ್ಟಣದ ಛತ್ರಕೇರಿಯ ಸಿದ್ಧಿವಿನಾಯಕ ಸಂಘದ ಗಣಪತಿ ಕಲಾತ್ಮಕವಾಗಿದ್ದು, ವಿಗ್ರಹ ಬೆಳ್ಳಿಯ ಪ್ರಭಾವಳಿಯಿಂದ ಶೋಭಿತವಾಗಿತ್ತು. ಆಗುಂಬೆ ಸಮೀಪದ ಅಗರಸಕೋಣೆ ಸಾರ್ವಜನಿಕ ಗಣಪತಿ ಉತ್ಸವದಲ್ಲಿ ಖ್ಯಾತ ನಾಟಿ ವೈದ್ಯೆ ಶಾರದಮ್ಮ ಮಂಜಪ್ಪ ನಾಯ್ಕ ಅವರನ್ನು ಗೌರವಿಸಲಾಯಿತು.