

ಹೊಸದಿಲ್ಲಿ: ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆ ಸುರಿಯಲಿದ್ದು, ಹವಾಮಾನದಲ್ಲಿ ಉಂಟಾಗುವ ಬದಲಾವಣೆಯಿಂದ ಮಳೆಯ ಮುನ್ಸೂಚನೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ಗರಿಷ್ಠ ತಾಪಮಾನವು 18.5 ಡಿಗ್ರಿ ಸೆಲ್ಸಿಯಸ್ ಆಗಿತ್ತು, ಇದು ಋತುಮಾನದ ಸರಾಸರಿಗಿಂತ ನಾಲ್ಕು ಡಿಗ್ರಿ ಕಡಿಮೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ದಟ್ಟವಾದ ಮಂಜಿನ ಜತೆಗೆ ಮೋಡ ಕವಿದ ವಾತಾವರಣವಿದ್ದು, ರಾತ್ರಿಯ ವೇಳೆ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದೆ. ಇದರೊಟ್ಟಿಗೆ ತುಂತುರು ಮಳೆಯಾಗುವ ಸಾಧ್ಯತೆ ಕೂಡ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 20 ಮತ್ತು 7 ಡಿಗ್ರಿ ಸೆಲ್ಸಿಯಸ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ದಟ್ಟವಾದ ಮಂಜಿನಿಂದಾಗಿ 23 ರೈಲುಗಳು ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ.
ಕಳೆದ ಒಂದೆರೆಡು ವಾರಗಳಿಂದಲೂ ದೆಹಲಿಯ ಹವಾಮಾನದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದ್ದು, ದಟ್ಟವಾದ ಮಂಜಿನಿಂದ ನಗರದ ಹಲವು ಪ್ರದೇಶಗಳು ಮುಚ್ಚಲ್ಪಟ್ಟಿವೆ. ದಟ್ಟ ಮಂಜು ಆವರಿಸಿದ ಕಾರಣ ಹಲವಾರು ವಿಮಾನ ಮತ್ತು ರೈಲುಗಳ ವೇಳಾಪಟ್ಟಿಯಲ್ಲಿ ವಿಳಂಬಗೊಂಡು, ರೈಲ್ವೇ ಇಲಾಖೆಗೆ ಭಾರೀ ನಷ್ಟ ಕೂಡ ಉಂಟಾಗಿದೆ,(ಏಜೆನ್ಸೀಸ್).