1 ನಿಮಿಷದಲ್ಲಿ 80 ಬಸ್ಕಿ ಹೊಡೆದ 7 ತಿಂಗಳ ಮಗು! ದಾಖಲೆಗೆ ಒಲಿದುಬಂತು ನೋಬೆಲ್​ ವರ್ಲ್ಡ್​ ರೆಕಾರ್ಡ್​​ ಪ್ರಶಸ್ತಿ

ವಿಜಯವಾಣಿ - 2024-02-03T144932.087
Published on

ಬೆಂಗಳೂರು: ಒಂದು ನಿಮಿಷದ ಅವಧಿಯಲ್ಲಿ ಬರೋಬ್ಬರಿ 80 ಬಸ್ಕಿ ಹೊಡೆದ ಏಳು ತಿಂಗಳ ಮಗುವೊಂದು ಇದೀಗ ನೋಬೆಲ್​ ವರ್ಲ್ಡ್​ ರೆಕಾರ್ಡ್​ ಪ್ರಶಸ್ತಿ ಸ್ವೀಕರಿಸುವ ಮೂಲಕ ದಾಖಲೆ ನಿರ್ಮಿಸಿದೆ. ರಾಮನಗರ ತಾಲೂಕಿನ ಕೇತೋಹಳ್ಳಿ ಗ್ರಾಮದ ನಿಸರ್ಗ ಬಾಲರಾಜ್​ ದಂಪತಿಯ ಮಗುವಿಗೆ ಈ ಪ್ರಶಸ್ತಿ ಲಭಿಸಿದ್ದು, ಪ್ರಮಾಣಪತ್ರವನ್ನು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಪೋಷಕರಿಗೆ ಹಸ್ತಾಂತರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಏಳು ತಿಂಗಳ ಈ ಪುಟ್ಟ ಪೋರನ ಹೆಸರು ಸಾತ್ವಿಕ್​ ಬಿ.ಗೌಡ, ಮೊದಲಿನಿಂದಲೂ ಚುರುಕಿನ ಪುಟಾಣಿ. ಪೋಷಕರ ಅಚ್ಚುಮೆಚ್ಚಿನ ಮಗನಾದ ಸಾತ್ವಿಕ್​ ಸಮಯವನ್ನೇ ಮೀರಿಸುವಂತೆ ವೇಗವಾಗಿ ಬಸ್ಕಿ ಹೊಡೆಯುವುದನ್ನು ಕರಗತ ಮಾಡಿಕೊಂಡಿದ್ದಾನೆ. ಒಂದು ನಿಮಿಷದ ಅವಧಿಯೊಳಗೆ 80ರಿಂದ 90 ಬಸ್ಕಿ ಹೊಡೆಯುವ ಅಭ್ಯಾಸವನ್ನು ರೂಢಿಸಿಕೊಂಡು ಇಂದು ದಾಖಲೆಯೊಂದನ್ನು ನಿರ್ಮಿಸಿದ್ದಾನೆ.

ಒಂದು ನಿಮಿಷದಲ್ಲಿ 80 ಬಸ್ಕಿ ಹೊಡೆದ ಪುತ್ರನ ವಿಡಿಯೋವನ್ನು ಪೋಷಕರು ನೋಬೆಲ್​ ವರ್ಲ್ಡ್​ ರೆಕಾರ್ಡ್​​ ವೆಬ್​ಸೈಟ್​ಗೆ ದಾಖಲಿಸಿದ್ದಾರೆ. ಇದಾದ ಬಳಿಕ ಜನವರಿ 17ರಂದು ಮಗುವಿಗೆ ಈ ಪ್ರಶಸ್ತಿ ಒಲಿದುಬಂದಿದೆ. ಅವಾರ್ಡ್​ ಬಂದ ಸಂತಸದಲ್ಲಿ ನಿಸರ್ಗ ಬಾಲರಾಜ್​ ದಂಪತಿ, ಈ ಪ್ರಶಸ್ತಿಯನ್ನು ಎಚ್​.ಡಿ. ಕುಮಾರಸ್ವಾಮಿ ಅವರಿಂದಲೇ ಸ್ವೀಕರಿಸಬೇಕು ಎಂಬ ಮಹದಾಸೆಯಿಂದ ಇಂದು ಅವರನ್ನು ಭೇಟಿ ಮಾಡಿ, ಪ್ರಶಸ್ತಿ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net