ನಾನು ಮೋದಿಯವರ ಅಭಿಮಾನಿ: ಪ್ರಧಾನಿಯನ್ನು ಕೊಂಡಾಡಿದ ಜಗತ್ತಿನ ನಂ. 1 ಶ್ರೀಮಂತ ಎಲಾನ್​ ಮಸ್ಕ್​

Elon Musk and PM Modi
Published on

ನ್ಯೂಯಾರ್ಕ್​: ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರನ್ನು ಜಗತ್ತಿನ ನಂ.1 ಶ್ರೀಮಂತ, ಟೆಸ್ಲಾ ಸಿಇಒ ಮತ್ತು ಟ್ವಿಟರ್​ ಮಾಲೀಕ ಎಲಾನ್​ ಮಸ್ಕ್​ ನ್ಯೂಯಾರ್ಕ್​ನಲ್ಲಿ ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಭಾರತ ಹೆಚ್ಚಿನ ಭರವಸೆ ಹೊಂದಿದೆ

ಭೇಟಿಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಸ್ಕ್​, ನಾನು ಭಾರತದ ಭವಿಷ್ಯದ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ. ಪ್ರಪಂಚದ ಯಾವುದೇ ದೊಡ್ಡ ದೇಶಕ್ಕಿಂತಲೂ ಭಾರತವು ಹೆಚ್ಚಿನ ಭರವಸೆಯನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ಭಾರತವನ್ನು ಮಸ್ಕ್​ ಕೊಂಡಾಡಿದರು.

ಸಮಯಕ್ಕೆ ಕಾಯುತ್ತಿದ್ದೇವೆ

ಪ್ರಧಾನಿ ಬಗ್ಗೆ ಮಾತನಾಡಿದ ಅವರ ಭಾರತದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ತುಂಬಾ ಕಾಳಜಿ ಇದೆ. ಏಕೆಂದರೆ ಭಾರತದಲ್ಲಿ ಹೂಡಿಕೆ ಮಾಡುವಂತೆ ನಮ್ಮನ್ನು ಒತ್ತಾಯಿಸುತ್ತಿದ್ದಾರೆ ಮತ್ತು ನಮಗೂ ಕೂಡ ಆ ಬಗ್ಗೆ ಒಲವು ಇದೆ. ಆದರೆ, ಸರಿಯಾದ ಸಮಯಕ್ಕೆ ಕಾಯುತ್ತಿದ್ದೇವೆ ಎಂದು ಮಸ್ಕ್​ ತಿಳಿಸಿದರು.

ಮೋದಿ ಅಭಿಮಾನಿ

ಪ್ರಧಾನಿ ಮೋದಿ ಜತೆಗಿನ ಭೇಟಿ ನಿಜಕ್ಕೂ ಅದ್ಭುತವಾಗಿತ್ತು. ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಕೆಲವು ವರ್ಷಗಳ ಹಿಂದೆ ಅವರು ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಹೀಗಾಗಿ ನಾವು ಸ್ವಲ್ಪ ಪರಸ್ಪರ ತಿಳಿದುಕೊಂಡಿದ್ದೇವೆ. ನಾನು ಕೂಡ ಪ್ರಧಾನಿ ಮೋದಿ ಅವರ ಅಭಿಮಾನಿ ಎಂದರು.

ಸೌರಶಕ್ತಿ ಹೂಡಿಕೆಗೆ ಭಾರತ ಉತ್ತಮ

ನಿಜವಾಗಿಯೂ ಪ್ರಧಾನಿ ಮೋದಿ ಅವರು ಭಾರತಕ್ಕಾಗಿ ಉತ್ತಮವಾದುದ್ದನ್ನು ಮಾಡಲು ಬಯಸುತ್ತಾರೆ. ಅವರು ತುಂಬಾ ಮುಕ್ತವಾಗಿದ್ದು, ಕಂಪನಿಗಳಿಗೆ ಬೆಂಬಲವಾಗಿರಲು ಬಯಸುತ್ತಾರೆ. ಈ ನಿಲುವು ಭಾರತದ ಅನುಕೂಲಕ್ಕೆ ಸೇರುತ್ತದೆ. ಸೌರಶಕ್ತಿ ಹೂಡಿಕೆಗೆ ಭಾರತ ಉತ್ತಮವಾಗಿದೆ. ನಾವು ಸ್ಟಾರ್‌ಲಿಂಕ್ ಇಂಟರ್ನೆಟ್ ಅನ್ನು ಭಾರತಕ್ಕೆ ತರಲು ಸಹ ಆಶಿಸುತ್ತಿದ್ದೇವೆ. ಮುಂದಿನ ವರ್ಷದಲ್ಲಿ ಭಾರತ ಪ್ರವಾಸಕ್ಕೆ ಯೋಜನೆ ಹಾಕಿಕೊಂಡಿದ್ದೇವೆ. ಆದಷ್ಟು ಬೇಗ ಟೆಸ್ಲಾ ಭಾರತಕ್ಕೆ ಬರಲಿದೆ ಎಂದು ಮಸ್ಕ್​ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net